ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡ್ ಸರ್ಕಲ್ ಬಳಿ ಟಿಪ್ಪರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಸಹಸವಾರ ಮೃತಪಟ್ಟು, ಸವಾರ ಗಂಭೀರ ಗಾಯಗೊಂಡಿದ್ದಾರೆ.
ಪಾಣೆಮಂಗಳೂರು ಬಳಿಯ ಮರ್ದೋಳಿ ನಿವಾಸಿ ಯಶವಂತ್ ಕುಲಾಲ್ ಮೃತರು. ಮರ್ಲಿಮಾರ್ ನಿವಾಸಿ ದಯಾನಂದ ಕುಲಾಲ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಪ್ಪರ್ ಚಾಲಕನ ಅತಿಯಾದ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ದ್ವಿಚಕ್ರ ವಾಹನ ಸವಾರರು ರಸ್ತೆಗೆ ಎಸೆಯಲ್ಪಟ್ಟು ರಕ್ತಸಿಕ್ತವಾಗಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯರು ಸ್ಪಂದಿಸಿ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದರು. ಚಿಂತಾಜನಕ ಸ್ಥಿತಿಯಲ್ಲಿದ್ದ ಯಶವಂತ್ ಕುಲಾಲ್ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆಯಿಂದ ಹೆದ್ದಾರಿಯಲ್ಲಿ ಜನ ಜಮಾಯಿಸಿ ಕೆಲ ಹೊತ್ತುಗಳ ಕಾಲ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಟಿಪ್ಪರ್ ಲಾರಿ ಚಾಲಕ ಪಲ್ಲಮಜಲು ನಿವಾಸಿ ಸಲ್ಮಾನ್ ಫಾರೂಕ್ ಎಂಬಾತನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಲಾರಿಯನ್ನು ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಬ್ಬರೂ ಸೋದರ ಸಂಬಂಧಿಗಳು: ಯಶವಂತ ಹಾಗೂ ದಯಾನಂದ ಸೋದರ ಸಂಬಂಧಿಗಳು. ಯಶವಂತ ಅವರಿಗೆ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಮನೆ ನಿರ್ಮಿಸುತ್ತಿರುವ ದಯಾನಂದ ಅವರ ಮನೆಯಲ್ಲಿ ಯಶವಂತ ಫರ್ನಿಚರ್ ಕೆಲಸ ಮಾಡುತ್ತಿದ್ದರು. ಬಂಟ್ವಾಳದಲ್ಲಿ ರಿಪೇರಿಗೆ ಇಟ್ಟಿದ್ದ ತನ್ನ ಬೈಕ್ ತರಲೆಂದು ಸೋದರ ದಯಾನಂದ ಅವರ ಜತೆ ಬಂಟ್ವಾಳಕ್ಕೆ ಹೋಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.