ತಿಗಳಾರಿ, ಮೋಡಿ ಲಿಪಿ ಕಲಿಕಾ ಕಾರ್ಯಾಗಾರ ಜೂ.14ರಿಂದ

(ಸಾಂದರ್ಭಿಕ ಚಿತ್ರ).
(ಸಾಂದರ್ಭಿಕ ಚಿತ್ರ).
Published on

* ಉಡುಪಿಯ ಗೀತಾ ಮಂದಿರಲ್ಲಿ ಆಯೋಜನೆ

* ಪುತ್ತಿಗೆ ಸುಗುಣೇಂದ್ರಶ್ರೀ ಅನುಗ್ರಹದಲ್ಲಿ ಕಾರ್ಯಕ್ರಮ

ಉಡುಪಿ: ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ 'ಜ್ಞಾನ ಭಾರತಂ ಮಿಶನ್​' ಯೋಜನೆಯಡಿ ಈಗಾಗಲೇ ದೇಶಾದ್ಯಂತ 1 ಕೋಟಿಗೂ ಅಧಿಕ ಹಸ್ತಪ್ರತಿಗಳ ಸರ್ವೇ ಮಾಡಲಾಗಿದೆ. ವಿವಿಧ ಭಾಷೆಗಳಲ್ಲಿರುವ ವಿವಿಧ ವಿಷಯಗಳ ಹಸ್ತಪ್ರತಿಗಳ ಲಿಪ್ಯಂತರ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ತನ್ನಿಮಿತ್ತ ಜೂ.14ರಿಂದ 27ರ ವರೆಗೆ ಉಡುಪಿಯ ಗೀತಾ ಮಂದಿರದಲ್ಲಿ ಕರಾವಳಿ ಕರ್ನಾಟಕದ ಲಭ್ಯವಿರುವ ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ ಅಯೋಜಿಸಲಾಗಿದೆ.
ಕೇಂದ್ರ ಆಯುಷ್​ ಸಚಿವಾಲಯದ ಕೇಂದ್ರೀಯ ಆಯುರ್ವೇದ ವಿಜ್ಞಾನ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಪ್ರೊ. ವೈದ್ಯ ರಬಿನಾರಾಯಣ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸುವರು. ತೆಲಂಗಾಣದ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಪರಂಪರೆ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ.ಜಿ.ಪಿ. ಪ್ರಸಾದ್​, ನಿಟ್ಟೆ ವಿಶ್ವವಿದ್ಯಾಲಯದ ಐಕೆಎಸ್​ ಕೇಂದ್ರದ ನಿರ್ದೇಶಕ ಡಾ ಸುಧೀರ್​ ರಾಜ್​ ಕೆ. ಮುಖ್ಯ ಅತಿಥಿಗಳಾಗಿ ಪಾಳ್ಗೊಳ್ಳಲಿದ್ದಾರೆ. ಪುತ್ತಿಗೆ ಮಠದ ದಿವಾನ ನಾಗರಾಜ್​ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು.
ಕೇಂದ್ರೀಯ ಆಯುರ್ವೇದೀಯ ಅನುಸಂಧಾನ ಸಂಸ್ಥಾನ ಬೆಂಗಳೂರು ವಿಭಾಗದ ಸಹಾಯಕ ನಿರ್ದೇಶಕ ಡಾ.ಮಹೇಶ್ವರ್​ ಟಿ., ರಾಜಸ್ಥಾನದ ಎಂಎಸ್​ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆಯ ಅಧಿಕಾರಿ ಡಾ.ವಿನೋದಕುಮಾರ್​ ಲಾವಣಿಯಾ, ನವ ದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಭಾಷಾ ವಿದ್ವಾಂಸ ಡಾ.ಕೀರ್ತಿಕಾಂತ್​ ಶಮಾರ್, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಡಾ. ಆರ್​.ಎಲ್​. ನಾರಾಯಣ ಸಿಂಹ, ಡಾ ದಿಲೀಪಕುಮಾರ್​ ಕಾರ್​ ಹಾಗೂ ಉದ್ಯಾವರದ ಎಸ್​ಡಿಎಂ ಆಯುರ್ವೇದ ಮಹಾ ವಿದ್ಯಾಲಯದ ಉಪನ್ಯಾಸಕರಾದ ಡಾ.ಮಹಾಲಕ್ಷ್ಮೀ ಎಂ.ಎಸ್​., ಡಾ. ದೀಕ್ಷಿತಾ ಹೆಬ್ಬಾರ್​, ಡಾ ಸುದರ್ಶನ್​ ಹಾಗೂ ಪುತ್ತಿಗೆ ವಿದ್ಯಾಪೀಠದ ವಿದ್ವಾಂಸ ಡಾ.ಸುನೀಲ್​ ಆಚಾರ್ಯ, ಸುಗುಣ ಮಾಲಾ ಪತ್ರಿಕೆಯ ಸಂಪಾದಕ ವಿದ್ವಾನ್​ ಮಹಿತೋಷ ಆಚಾರ್ಯ, ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್​.ಎ. ಕಷ್ಣಯ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಭಾರತ ಸರ್ಕಾರದ ಅಧೀನದಲ್ಲಿರುವ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ನವದೆಹಲಿ ಮತ್ತು ಕೇಂದ್ರೀಯ ಆಯುರ್ವೇದೀಯ ವಿಜ್ಞಾನ ಅನುಸಂಧಾನ ಪರಿಷತ್​ ನವದೆಹಲಿ ಮಾರ್ಗದರ್ಶನ ಹಾಗೂ ಆರ್ಥಿಕ ಸಹಭಾಗಿತ್ವ ವಹಿಸಿದ್ದಾರೆ. ಪುತ್ತಿಗೆ ಮಠದ ಡಾ. ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಪಟ್ಟದ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರ ಅನುಗ್ರಹದಲ್ಲಿ ಕಾರ್ಯಾಗಾರ ನಡೆಯಲಿದೆ. 
ಆಯುರ್ವೇದ ಹಾಗೂ ಸಂಸ್ಕೃತದ 36 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು ಈಗಾಗಲೇ 30 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಉಚಿತವಾಗಿ ವಸತಿ, ಊಟೋಪಚಾರದ ವ್ಯವಸ್ಥೆಯಿದೆ. ಮಾಹಿತಿಗಾಗಿ ಮೊ.ಸಂ. 7892991690, 94486 23954 ಸಂಪರ್ಕಿಸಬಹುದು ಎಂದು ಕಾರ್ಯಾಗಾರದ  ಆಯೋಜನಕರಾದ ಪುತ್ತಿಗೆ ಮಠದ ವಿದ್ವಾನ್​, ಜ್ಞಾನ ಭಾರತಂ ಉಡುಪಿ ಜಿಲ್ಲಾ ಸಂಯೋಜಕ ಡಾ. ಬಿ.ಗೋಪಾಲ್​ ಆಚಾರ್ಯ ಹಾಗೂ ವಿದ್ವಾನ್​ ಶ್ರೀಧರ್​ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net