ರಸ್ತೆಯಂಚಲ್ಲಿಲ್ಲ ಸುಸಜ್ಜಿತ ಚರಂಡಿ

 ಬೆಳ್ಮಣ್-ಮುಂಡ್ಕೂರು ರಸ್ತೆಯಲ್ಲಿ ಚರಂಡಿಯ ನಿರ್ವಹಣೆವಿಲ್ಲದೆ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿರುವುದು.
ಬೆಳ್ಮಣ್-ಮುಂಡ್ಕೂರು ರಸ್ತೆಯಲ್ಲಿ ಚರಂಡಿಯ ನಿರ್ವಹಣೆವಿಲ್ಲದೆ ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತಿರುವುದು.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಮುಂಗಾರು ಮಳೆ ತಾಲೂಕಿಗೆ ಲಗ್ಗೆ ಇಟ್ಟ ಬೆನ್ನಲ್ಲೇ ಕಾರ್ಕಳದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರ ಸಂಚಾರ ದುಸ್ತರವಾಗಿದೆ. ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇನ್ನೂ ಚರಂಡಿ ಹೂಳೆತ್ತಿ ಸ್ವಚ್ಛಗೊಳಿಸದ ಕಾರಣ ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೆ ರಸ್ತೆಗಳ ಮೇಲೆಯೇ ಹರಿದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆಯನ್ನು ತಂದೊಡ್ಡುತ್ತಿದೆ.
ಅನೇಕ ಗ್ರಾಮಗಳ ಪ್ರಮುಖ ರಸ್ತೆಗಳ ಬದಿಯ ಚರಂಡಿಗಳು ಸಂಪೂರ್ಣ ಮುಚ್ಚಿ ಹೋಗಿವೆ. ಇದರಿಂದಾಗಿ ಸಾಧಾರಣ ಮಳೆ ಬಂದರೂ ನೀರು ರಸ್ತೆಯನ್ನು ಆವರಿಸಿಕೊಳ್ಳುತ್ತಿದೆ. ರಸ್ತೆಗಳ ಮೇಲೆ ನೀರು ನಿಲ್ಲುತ್ತಿರುವುದರಿಂದ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವ ಅಪಾಯ ಎದುರಾಗಿದೆ.
ಬೆಳ್ಮಣ್, ನಂದಳಿಕೆ, ಬೋಳ, ವಾಳ, ನಿಟ್ಟೆ, ಮುಂಡ್ಕೂರು, ಸೇರಿದಂತೆ ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿಯ ನಿರ್ವಹಣೆ ಕಾಮಗಾರಿ ಇನ್ನೂ ನಡೆದಿಲ್ಲ. ಇನ್ನೂ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಪೈಪ್‌ಲೈನ್ ಹಾಗೂ ಕೇಬಲ್ ಅಳವಡಿಕೆ ನೆಪದಲ್ಲಿ ರಸ್ತೆ ಹಾಗೂ ಚರಂಡಿಯನ್ನು ಅಗೆದು ಹಾಕಿದ ಪರಿಣಾಮ ಇದ್ದ ಚರಂಡಿಯೂ ವಾಯವಾಗಿದೆ. ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿ, ಆತ್ರಾಡಿ ಮುಂಡ್ಕೂರು ಕಟೀಲು ಬಜ್ಪೆ ರಸ್ತೆ ಹಾಗೂ ಕಾರ್ಕಳದಿಂದ ಹೆಬ್ರಿ ಸಾಗುವ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಚರಂಡಿಯೇ ವಾಯವಾಗಿದೆ. ಹೀಗಾಗಿ ಜೋರಾಗಿ ಸುರಿಯುವ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯಲ್ಲೇ ಹರಿಯುವಂತಾಗಿದೆ. ಹೀಗಾಗಿ ವಾಹನ ಸವಾರರು ಸಂಕಟ ಪಡುವಂತಾಗಿದೆ.


ಪುರಸಭೆಗೆ ಮಾತ್ರ ಸೀಮಿತ ಕ್ರಮ

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಮುನ್ನವೇ ಚರಂಡಿ ಸ್ವಚ್ಛಗೊಳಿಸುವ ಮತ್ತು ಹೂಳೆತ್ತುವ ಕಾರ್ಯಗಳು ವ್ಯವಸ್ಥಿತವಾಗಿ ಹಲವು ಕಡೆಗಳಲ್ಲಿ ನಡೆದಿವೆ. ಆದರೆ ಇದೇ ಮುನ್ನೆಚ್ಚರಿಕೆ ತಾಲೂಕಿನ ಗ್ರಾಮೀಣ ಭಾಗದ ಪಂಚಾಯಿತಿಗಳಲ್ಲಿ ಕಾಣಿಸುತ್ತಿಲ್ಲ. ಜೋರಾಗಿ ಮಳೆ ಸುರಿಯುವ ಮೊದಲು ಸ್ಥಳೀಯಾಡಳಿತಗಳು ಎಚ್ಚೆತ್ತು ಲೋಕೋಪಯೋಗಿ ಇಲಾಖೆ ಹಾಗೂ ಗ್ರಾ.ಪಂ.ಗಳು ತಮ್ಮ ವ್ಯಾಪ್ತಿಯ ರಸ್ತೆಯ ಬದಿಯ ಚರಂಡಿಯನ್ನು ಶುಚಿಗೊಳಿಸುವ ಕಾರ್ಯ ವಾಡಬೇಕಾಗಿದೆ. ಮಂಗಳವಾರ ಬೀಸಿದ ಭಾರಿ ಗಾಳಿ ಮಳೆಗೆ ಹೆದ್ದಾರಿಯಲ್ಲೇ ಮಳೆಯ ನೀರು ಹರಿದು ಸಮಸ್ಯೆಗಳಾಗಿವೆ.

ಸಾಂಕ್ರಾಮಿಕ ರೋಗ ಭೀತಿ

ಹೂಳು ತುಂಬಿದ ಚರಂಡಿಗಳಲ್ಲಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗುತ್ತಿದೆ. ಇದು ಮಳೆಗಾಲದಲ್ಲಿ ಡೆಂಘೆ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡಲು ದಾರಿಯಾಗಬಹುದು ಎಂಬ ಆತಂಕವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ಶಾಲಾ ಮಕ್ಕಳಿಗೆ ಸಂಕಷ್ಟ
ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ವಾಹನಗಳು ಚಲಿಸುವಾಗ ಹಾರುವ ಕೆಸರು ನೀರಿನಿಂದಾಗಿ ಸಂಕಷ್ಟ ಅನುಭವಿಸುವಂತಾಗಿದೆ. ರಸ್ತೆಯಿಂದ ನುಗ್ಗುವ ಮಳೆ ನೀರು ಪಕ್ಕದ ಕೃಷಿ ಗದ್ದೆ ಹಾಗೂ ತೋಟಗಳಿಗೆ ನುಗ್ಗಿ ಹಾನಿ ಉಂಟುವಾಡುತ್ತಿರುವ ಉದಾಹರಣೆಗಳೂ ಇವೆ. ಪ್ರತಿವರ್ಷ ಮಳೆಗಾಲ ಬರುವ ಮುನ್ನವೇ ಚರಂಡಿಗಳನ್ನು ಸ್ವಚ್ಛಗೊಳಿಸಬೇಕಾಗಿರುವುದು ಪಂಚಾಯಿತಿಗಳ ಕರ್ತವ್ಯ. ಆದರೆ ಈ ಬಾರಿ ಬಹುತೇಕ ಕಡೆಗಳಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ರಸ್ತೆಯಲ್ಲಿ ನೀರು ನಿಲ್ಲುವುದರಿಂದ ರಸ್ತೆಗಳೂ ಬೇಗನೇ ಹಾಳಾಗುವ ಸಾಧ್ಯತೆಗಳಿವೆ. ಹೀಗಾಗಿ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆಯನ್ನು ಬಗೆ ಹರಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಮೊದಲ ಮಳೆಗೆ ರಸ್ತೆಯಲ್ಲೇ ಮಳೆಯ ನೀರು ಹರಿಯುತ್ತಿದ್ದು, ವಾಹನ ಸವಾರರ ಸಹಿತ ಪಾದಚಾರಿಗಳಿಗೂ ಸಮಸ್ಯೆಗಳಾಗುತ್ತಿದೆ. ಬಹುತೇಕ ಗ್ರಾ.ಪಂ. ವ್ಯಾಪ್ತಿಯಲ್ಲಿ ಚರಂಡಿಗಳು ವಾಯವಾಗಿದೆ. ಇದ್ದ ಚರಂಡಿಯನ್ನಾದರೂ ನಿರ್ವಹಿಸುವ ಕೆಲಸವಾಗಬೇಕಾಗಿದೆ.

— ಸುಜಯ್ ಕಾರ್ಕಳ ಸ್ಥಳೀಯ

ಪೈಪ್‌ಲೈನ್ ಹಾಗೂ ಕೇಬಲ್ ಅಳವಡಿಕೆಗಾಗಿ ಪದೇಪದೆ ರಸ್ತೆಯ ಬದಿಯನ್ನು ಅಗೆದು ಹಾಕಿದ ಪರಿಣಾಮ ಇದ್ದ ಚರಂಡಿಯಲ್ಲಿ ಮಣ್ಣು ತುಂಬಿ ವಾಯವಾಗಿದೆ. ಹೀಗಾಗಿ ಹೆದ್ದಾರಿಯೇ ಚರಂಡಿಯಾಗಿ ವಾರ್ಪಾಡಾಗಿದೆ. ಕೂಡಲೇ ನಿರ್ವಹಣೆಯನ್ನು ವಾಡದಿದ್ದಲ್ಲಿ ಅಪಘಾತಕ್ಕೂ ಕಾರಣವಾಗಬಹುದು.

— ರಕ್ಷಿತ್ ಕುಮಾರ್ ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net