ಸೋಮೇಶ್ವರ ರುದ್ರಭೂಮಿಗಿಲ್ಲ ಮೋಕ್ಷ

ಪುನಃನಿರ್ಮಾಣ ಹಂತದಲ್ಲಿರುವ ರುದ್ರಭೂಮಿ.
ಪುನಃನಿರ್ಮಾಣ ಹಂತದಲ್ಲಿರುವ ರುದ್ರಭೂಮಿ.
Published on
ಅನ್ಸಾರ್ ಇನೋಳಿ ಉಳ್ಳಾಲ
ಸೋಮೇಶ್ವರ ಕಡಲ ತೀರದಲ್ಲಿರುವ ಐತಿಹಾಸಿಕ ಹಿಂದೂ ರುದ್ರಭೂಮಿಯು ಸಮುದ್ರದ ಅಬ್ಬರಕ್ಕೆ ಸಿಲುಕಿ ನಿರ್ನಾಮವಾಗಿ ನಾಲ್ಕು ವರ್ಷಗಳೇ ಕಳೆದಿದ್ದರೂ, ಸಾರ್ವಜನಿಕರ ಬಳಕೆಗೆ ಲಭ್ಯವಾಗದೆ ಕಾಯುವಂತಾಗಿದೆ.
ಸೋಮೇಶ್ವರ ಶಿವ ಸಾನ್ನಿಧ್ಯದ ಸನಿಹದಲ್ಲಿರುವ ಈ ರುದ್ರಭೂಮಿ, ಭಕ್ತರ ಪಾಲಿಗೆ ಅತ್ಯಂತ ಪವಿತ್ರವಾದುದು. ಇಲ್ಲಿ ಶವಸಂಸ್ಕಾರ ನೆರವೇರಿಸಲು ದೂರದ ಊರುಗಳಿಂದಲೂ ಜನರು ಬರುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಸಮುದ್ರದ ಅಬ್ಬರಕ್ಕೆ ರುದ್ರಭೂಮಿಯು ಸಂಪೂರ್ಣ ಹಾನಿಗೀಡಾಗಿತ್ತು. ಸಮುದ್ರಕ್ಕೆ ತಾಗಿಕೊಂಡೇ ಇರುವ ಈ ಸ್ಥಳದ ನಿರ್ವಹಣೆ ಸವಾಲಿನ ಕೆಲಸ ಎಂದು ಭಾವಿಸಲಾಗಿತ್ತು. ಆದರೆ, ಬೆಂಗಳೂರಿನ ಉದ್ಯಮಿ ಭೂಮಿಕಾ ಅವರು ಈ ವಿಷಯ ತಿಳಿದು, ತಮ್ಮ ಸ್ವಂತ ಖರ್ಚಿನಲ್ಲಿ ರುದ್ರಭೂಮಿಯ ಮೇಲ್ಛಾವಣಿ ಸೇರಿದಂತೆ ಮರು ರ್ನಿರ್ಮಾಣದ ಜವಾಬ್ದಾರಿ ಹೊತ್ತಿದ್ದರು. ಮೇಲ್ಛಾವಣಿ ಕೆಲಸ ಮುಗಿದು ಮೂರು ವರ್ಷಗಳೇ ಕಳೆದಿದ್ದರೂ, ನಂತರದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಸಮಿತಿಗೆ ಆರ್ಥಿಕ ಮುಗ್ಗಟ್ಟು ಎದುರಾಗಿದೆ.
ಭವಿಷ್ಯದಲ್ಲಿ ಶವ ದಹನದ ವೇಳೆ ಹೊಗೆಯನ್ನು ನಿಯಂತ್ರಿಸಲು, ಕೇರಳ ಮಾದರಿಯಲ್ಲಿ ಕಟ್ಟಿಗೆಯ ಬದಲಿಗೆ ತೆಂಗಿನ ಚಿಪ್ಪನ್ನು ಬಳಸುವ ಚಿಂತನೆಯನ್ನೂ ಸೋಮೇಶ್ವರ ಹಿಂದೂ ರುದ್ರಭೂಮಿ ಸಮಿತಿ ಹೊಂದಿದೆ. ಆದರೆ, ಮೊದಲ ಹಂತದ ಕಾಮಗಾರಿಗಳೇ ಪೂರ್ಣಗೊಳ್ಳದ ಕಾರಣ, ಈ ಯೋಜನೆಗಳು ಸದ್ಯಕ್ಕೆ ಕೇವಲ ಯೋಚನೆಯಾಗಿಯೇ ಉಳಿದಿವೆ.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಹಿಂದೂ ರುದ್ರಭೂಮಿ ಸಮಿತಿ ಸಮಿತಿಯು ಶೀಘ್ರವೇ ಸಭೆ ನಡೆಸಿ, ರುದ್ರಭೂಮಿಯ ಬಾಕಿ ಕಾಮಗಾರಿ ಹಾಗೂ ಶೌಚಗೃಹದ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಿಲಿಕಾನ್ ಕಾಮಗಾರಿ ಬಾಕಿ

ಈ ಹಿಂದೆ ಭದ್ರತೆಯಿಲ್ಲದ ಕಾರಣ ರುದ್ರಭೂಮಿಯಲ್ಲಿದ್ದ ಸಿಲಿಕಾನ್‌ಗೆ ಸಂಬಂಧಿಸಿದ ವಸ್ತುಗಳು ಕಳ್ಳತನವಾಗಿದ್ದವು. ಈ ಬಾರಿ ಮುನ್ನೆಚ್ಚರಿಕೆ ವಹಿಸಿರುವ ಸಮಿತಿ ಪುರಸಭೆಯ ಅನುದಾನದಲ್ಲಿ ಸುತ್ತಲೂ ಗೋಡೆ ನಿರ್ಮಿಸಿ, ಗ್ರಿಲ್ ಮತ್ತು ಗೇಟ್ ಅಳವಡಿಸಿದೆ. ಆದರೆ, ಮುಖ್ಯವಾದ ಸಿಲಿಕಾನ್ ಅಳವಡಿಕೆ ಕಾರ್ಯ ಇನ್ನೂ ಬಾಕಿ ಉಳಿದಿದೆ.
ನವೀಕೃತ ಶೌಚಗೃಹಕ್ಕೂ ಬೀಗ!
ಸೋಮೇಶ್ವರ ಕಡಲ ಕಿನಾರೆ, ರುದ್ರಪಾದೆ ಮತ್ತು ಗದಾತೀರ್ಥ ದೇವರಕೆರೆ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಕೇಂದ್ರಗಳಾಗಿವೆ. ಇಲ್ಲಿಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಪುರಸಭೆಯ ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ಶೌಚಗೃಹವನ್ನು ನವೀಕರಿಸಲಾಗಿದೆ. ಆದರೆ, ನಿರ್ವಹಣೆಯ ಜವಾಬ್ದಾರಿಯನ್ನು ಯಾರೂ ವಹಿಸಿಕೊಳ್ಳದ ಕಾರಣ, ಹೊಸದಾಗಿ ನವೀಕರಿಸಿದ ಶೌಚಗೃಹಕ್ಕೂ ಬೀಗ ಜಡಿಯಲಾಗಿದೆ. ಇದು ಪ್ರವಾಸಿಗರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.

ಶೌಚಗೃಹದ ಕೀಲಿಕೈ ಸ್ಥಳೀಯ ಅಂಗಡಿಯವರಲ್ಲಿ ನೀಡಲಾಗಿದ್ದು ಅಗತ್ಯವುಳ್ಳವರು ಬಳಸಬಹುದು. ಪ್ರಸ್ತುತ ಜಾಗದಲ್ಲಿ ಹೊಸ ಶೌಚಗೃಹ, ಪಾರ್ಕಿಂಗ್ ವ್ಯವಸ್ಥೆ, ಇಂಟರ್‌ಲಾಕ್ ಅಳವಡಿಕೆ ಹಾಗೂ ವ್ಯಾಪಾರಸ್ಥರ ವಲಯ ರೂಪಿಸಲು ಪುರಸಭೆಯಿಂದ ಯೋಜನೆ ರೂಪಿಸಲಾಗಿದ್ದು ಅನುಮೋದನೆಗೆ ಕಳುಹಿಸಲಾಗಿದೆ.

ರುದ್ರಭೂಮಿ ಸಮುದ್ರ ಕಿನಾರೆ ಇರುವುದರಿಂದ ನಿರ್ವಹಣೆ ಸವಾಲು. ಈಗಾಗಲೇ ಹಳೇ ಸಿಲಿಕಾನ್ ಅಳವಡಿಸಲಾಗಿದ್ದು ಟ್ರೇ ವ್ಯವಸ್ಥೆ ಆಗಬೇಕಿದೆ. ರುದ್ರಭೂಮಿ ಸಂಪರ್ಕಿಸುವ ರಸ್ತೆಯಲ್ಲಿ ದುರಸ್ತಿಪಡಿಸಬೇಕಿದ್ದು, ಈ ಕೆಲಸ ಆದ ಕೂಡಲೇ ರುದ್ರಭೂಮಿಯನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಲಾಗುವುದು.

ಪ್ರಸ್ತುತ ದಿನಗಳಲ್ಲಿ ಎಲ್ಲ ಕಡೆ ಹಿಂದೂ ರುದ್ರಭೂಮಿ ಇದೆ. ಆದರೂ ಸೋಮೇಶ್ವರ ಪವಿತ್ರ ಸ್ಥಳ ಎನ್ನುವ ನೆಲೆಯಲ್ಲಿ ಶವ ಸಂಸ್ಕಾರಕ್ಕೆ ಅಲ್ಲಿನ ರುದ್ರಭೂಮಿ ನೆಚ್ಚಿಕೊಂಡಿದ್ದರೂ ಅದೀಗ ಬಳಕೆಯಲ್ಲಿಲ್ಲ. ಅಲ್ಲದೆ ಸೋಮೇಶ್ವರ ಪ್ರವಾಸೋದ್ಯಮವನ್ನಾಗಿ ರೂಪಿಸಲು ಸಾಕಷ್ಟು ಅವಕಾಶಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net