ಉಡುಪಿ ತಾಲೂಕು ಸಾಹಿತ್ಯ ಸಮ್ಮೇಳನಕ್ಕಿಲ್ಲ ಭೀತಿ

ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ.
ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ.
Published on

* ಅಧ್ಯಕ್ಷ ರವಿರಾಜ್​ ಎಚ್​.ಪಿ. ಮಾಹಿತಿ

* ಹೈಕೋರ್ಟ್​ನಿಂದ ಮೌಖಿಕ ಆದೇಶ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್​ನ ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಮೇ 3ರಂದು ವೈದ್ಯ ಸಾಹಿತಿ ಕಲಾವಿದ ಡಾ.ಭಾಸ್ಕರಾನಂದಕುಮಾರ್​ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನವು ಯಾವುದೇ ಭೀತಿಯಿಲ್ಲದೆ ನಿರಾತಂಕವಾಗಿ ನಡೆಯಲಿದೆ. ಈ ಕುರಿತು ಹೈಕೋರ್ಟ್​ ಮೌಖಿಕ ಆದೇಶ ನೀಡಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ತಿಳಿಸಿದ್ದಾರೆ.
ಸಮ್ಮೇಳನದ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರಿಗೆ ಹೈಕೋರ್ಟ್​ ತಡೆ ನೀಡಿದ್ದು ನ್ಯಾಯಾಧೀಶ ಸಚಿನ್​ ಶಂಕರ್​ ಮಗದುಮ್​ ಸುಸಾಂಗ ಅವರು ಕಾರ್ಯಕ್ರಮಕ್ಕೆ ಅವಕಾಶ ನೀಡಿ ಆದೇಶ ನೀಡಿದ್ದಾರೆ. ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಹಿತ ಸಮ್ಮೇಳನದ ಕಲಾಪಗಳಿಗೆ ಅಡ್ಡಿಪಡಿಸದಂತೆ ತೀರ್ಪು ನೀಡಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಸಾಪ ಜಿಲ್ಲಾ ಘಟಕದಿಂದ ನಾಲ್ಕು ವರ್ಷದ ಹಿಂದೆ ಉಡುಪಿ ತಾಲೂಕು ಘಟಕದ ಅಧ್ಯಕ್ಷನಾಗಿ ನಾನು ನಿಯೋಜಿತನಾಗಿದ್ದೆ. ಆದರೆ, ನಂತರದ ದಿನಗಳಲ್ಲಿ ನಿಯಮಾವಳಿ ಉಲ್ಲಂಘಿಸಿದ್ದೇನೆ ಎಂಬ ಕಾರಣ ನೀಡಿ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ನನಗೆ ಸರಣಿ ನೋಟಿಸ್​ ಜಾರಿ ಮಾಡಿದ್ದರು. ಅದಕ್ಕೆ ಪೂರಕ ಮಾಹಿತಿಗಳನ್ನೂ ಅವರಿಗೆ ನೀಡಿದ್ದೆ. ಆದರೂ ತೃಪ್ತರಾಗದ ಅಡಿಗರು ನನ್ನನ್ನು ಪದಚ್ಯುತಗೊಳಿಸಿ, ಆ ಸ್ಥಾನಕ್ಕೆ ಪೂರ್ಣಿಮಾ ಸುರೇಶ್​ ಅವರನ್ನು ನಿಯೋಜಿಸಿದ್ದರು. ಜಿಲ್ಲಾಧ್ಯಕ್ಷರ ಈ ಕ್ರಮ ಪ್ರಶ್ನಿಸಿ ಅಂದು ಉಚ್ಚನ್ಯಾಯಾಲಯದಲ್ಲಿ ನಾನು ದಾವೆ ಹೂಡಿದ್ದು, ರವಿರಾಜ್​ ಅವರೇ ಅಧ್ಯಕ್ಷರಾಗಿ ಮುಂದುವರಿಯುವಂತೆ ಹಾಗೂ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್​ ಆದೇಶ ನೀಡಿತ್ತು ಎಂದು ರವಿರಾಜ್​ ತಿಳಿಸಿದ್ದಾರೆ.

ಮೆರವಣಿಗೆಗೆ ತಡೆ ಯತ್ನ

ಇಷ್ಟಾದರೂ ಸಹ ನನ್ನ ಅಧ್ಯಕ್ಷತೆಯಲ್ಲಿ ನಿಯೋಜಿತ ಸಾಹಿತ್ಯ ಸಮ್ಮೇಳನ, ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಸದಂತೆ ಪೊಲೀಸ್​ ಇಲಾಖೆಗೆ ಜಿಲ್ಲಾ ಕಸಾಪ ಮನವಿ ಮಾಡಿತ್ತು. ಆ ಬಗ್ಗೆಯೂ ಉಡುಪಿ ತಾಲೂಕು ಕಸಾಪ ಘಟಕದಿಂದ ಉಚ್ಚ ನ್ಯಾಯಾಲಯದಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದೆವು. ಇದೀಗ ನ್ಯಾ. ಸಚಿನ್​ ಶಂಕರ್​ ಮಗದುಮ್​ ಅವರು ಯೋಜಿತ ರೀತಿಯಲ್ಲಿ ಸಮ್ಮೇಳನ ನಡೆಯುವಂತೆ ಅವಕಾಶ ಕಲ್ಪಿಸಿದ್ದಾರೆ. ಅಗತ್ಯಬಿದ್ದಲ್ಲಿ ಸೂಕ್ತ ಪೊಲೀಸ್​ ರಕ್ಷಣೆ ನೀಡುವಂತೆಯೂ ಉಡುಪಿ ನಗರ ಪೊಲೀಸ್​ ಠಾಣಾಧಿಕಾರಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಅಲ್ಲದೆ, ಕಸಾಪ ಉಡುಪಿ ತಾಲೂಕು ಘಟಕ ಅಧ್ಯಕ್ಷರಾಗಿ ನನಗೆ ಮುಂದುವರಿಯುವಂತೆಯೂ ಆದೇಶ ನೀಡಿದ್ದಾರೆ ಎಂದು ರವಿರಾಜ್​ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net