ಹೆದ್ದಾರಿ ಅಧ್ವಾನಕ್ಕೆ ಕೊನೆಯಿಲ್ಲ

 ತೆಂಕಮಿಜಾರಿನಲ್ಲಿ ಹೆದ್ದಾರಿಯ ಅವ್ಯವಸ್ಥೆ.
ತೆಂಕಮಿಜಾರಿನಲ್ಲಿ ಹೆದ್ದಾರಿಯ ಅವ್ಯವಸ್ಥೆ.
Published on
ಯಶೋಧರ ವಿ.ಬಂಗೇರ ಮೂಡುಬಿದಿರೆ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದ್ದ ಅನುಮಾನಗಳಿಗೆ ತೆಂಕಮಿಜಾರಿನಲ್ಲಿ ಮತ್ತೊಂದು ಸ್ಪಷ್ಟ ಉದಾಹರಣೆ ದೊರೆತಿದೆ. ಕಳೆದ ವಾರ ಸುರಿದ ಮೊದಲ ಮಳೆಗೆ ಹೆದ್ದಾರಿಯ ಸರ್ವೀಸ್ ರಸ್ತೆ ಕೊಚ್ಚಿಹೋಗಿ ಸುದ್ದಿಯಾಗಿದ್ದ ಪ್ರದೇಶದಲ್ಲೇ ಸದ್ಯ ಅಂಡರ್‌ಪಾಸ್ ಮಳೆನೀರಿನ ಮೋರಿಯಂತಾಗಿ ಪರಿವರ್ತನೆಯಾಗಿದೆ.
ತೆಂಕಮಿಜಾರಿನ ಅಂಗನವಾಡಿ ಪಕ್ಕದಲ್ಲಿರುವ ಅಂಡರ್‌ಪಾಸ್‌ನಲ್ಲಿ ಮಳೆನೀರು ರಭಸದಿಂದ ಹರಿಯುತ್ತಿದ್ದು, ಸಾರ್ವಜನಿಕರ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಶಾಲಾ ಮಕ್ಕಳು, ಪಾಲಕರು ಹಾಗೂ ಸ್ಥಳೀಯ ನಿವಾಸಿಗಳು ಜೀವಭಯದಲ್ಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ವೈಜ್ಞಾನಿಕ ಯೋಜನೆಯ ಕೊರತೆ ಆರೋಪ

ಸ್ಥಳೀಯರ ಆರೋಪದ ಪ್ರಕಾರ, ಸಹಜವಾಗಿ ನೀರು ರಭಸದಿಂದ ಹರಿಯುವ ತಗ್ಗು ಪ್ರದೇಶದಲ್ಲಿ ಅಗತ್ಯ ಪ್ರಮಾಣದ ಸೇತುವೆ ಅಥವಾ ವಿಶಾಲ ನೀರು ಹರಿವಿನ ವ್ಯವಸ್ಥೆ ಕಲ್ಪಿಸದೆ ಕೇವಲ ಸಣ್ಣ ಮೋರಿ ನಿರ್ಮಿಸಲಾಗಿದೆ. ಇದಕ್ಕೆ ವಿರುದ್ಧವಾಗಿ, ನೀರು ಹರಿಯದ ಪ್ರದೇಶಗಳಲ್ಲಿ ದೊಡ್ಡ ಗಾತ್ರದ ಮೋರಿಗಳನ್ನು ನಿರ್ಮಿಸಲಾಗಿದೆ. ಯೋಜನೆ ರೂಪಿಸುವ ಹಂತದಲ್ಲಿಯೇ ವೈಜ್ಞಾನಿಕ ಅಧ್ಯಯನದ ಕೊರತೆ ಮತ್ತು ಸ್ಥಳೀಯ ಭೌಗೋಳಿಕ ಪರಿಸ್ಥಿತಿಯ ನಿರ್ಲಕ್ಷ್ಯದಿಂದಾಗಿ ಈ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದೆ.

ತಕ್ಷಣ ತಾಂತ್ರಿಕ ಪರಿಶೀಲನೆಗೆ ಆಗ್ರಹ

ಕಳೆದ ವಾರ ಸರ್ವೀಸ್ ರಸ್ತೆ ಕೊಚ್ಚಿಹೋದ ಘಟನೆ ಇನ್ನೂ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದು ಅವ್ಯವಸ್ಥೆ ಬೆಳಕಿಗೆ ಬಂದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತುರ್ತು ಕ್ರಮ ಕೈಗೊಂಡು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಳೆಗಾಲದ ಆರಂಭದಲ್ಲೇ ಇಂತಹ ಸಮಸ್ಯೆಗಳು ಕಾಣಿಸಿಕೊಂಡಿರುವುದು ಮುಂದಿನ ದಿನಗಳಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತಗಳ ಮುನ್ಸೂಚನೆಯಾಗಿದ್ದು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ತಾಂತ್ರಿಕ ಪರಿಶೀಲನೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಂಚಾರಕ್ಕೆ ಅಡ್ಡಿ, ಅಪಾಯದ ಆತಂಕ

ಮಳೆಯ ನೀರಿಗೆ ಸಮರ್ಪಕ ದಾರಿ ಇಲ್ಲದ ಕಾರಣ ಅಂಡರ್‌ಪಾಸ್ ಮುಖಾಂತರವೇ ನೀರು ಹರಿಯುತ್ತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಭಾರಿ ಮಳೆಯ ಸಂದರ್ಭಗಳಲ್ಲಿ ಈ ಪ್ರದೇಶ ಸಂಪೂರ್ಣ ಜಲಾವೃತವಾಗುವ ಆತಂಕ ವ್ಯಕ್ತವಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ ಕಾರಣ?

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾಗುತ್ತಿರುವ ಬಹುಕೋಟಿ ರೂಪಾಯಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಗುಣಮಟ್ಟದ ಕಾಮಗಾರಿ, ವೈಜ್ಞಾನಿಕ ಯೋಜನೆ ಹಾಗೂ ಪರಿಣಾಮಕಾರಿ ಮೇಲ್ವಿಚಾರಣೆ ನಿರೀಕ್ಷಿಸಲಾಗುತ್ತದೆ. ಆದರೆ ತೆಂಕಮಿಜಾರಿನ ಬೆಳವಣಿಗೆಗಳು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರ ಸಂಸ್ಥೆಗಳ ಗುಣಮಟ್ಟದ ಕೊರತೆಯನ್ನು ಬಹಿರಂಗಪಡಿಸುತ್ತಿವೆ ಎಂಬುವುದು ಸ್ಥಳೀಯರ ಆರೋಪ.

ಹೆದ್ದಾರಿಯ ಅವ್ಯವಸ್ಥೆಗಳಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು.

— ಬ್ರಿಜೇಶ್ ಶೆಟ್ಟಿ, ಮಿಜಾರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net