ವಿದ್ಯಾರ್ಥಿಗಳಿದ್ದರೂ ಕೊಠಡಿ ಇಲ್ಲ!

ಕೊಠಡಿಗಳ ಕೊರತೆಯಿಂದಾಗಿ ರಂಗಮಂದಿರದಲ್ಲಿ ತರಗತಿ ನಡೆಸುತ್ತಿರುವುದು.
ಕೊಠಡಿಗಳ ಕೊರತೆಯಿಂದಾಗಿ ರಂಗಮಂದಿರದಲ್ಲಿ ತರಗತಿ ನಡೆಸುತ್ತಿರುವುದು.
Published on
ಮನೋಹರ್ ಬಳಂಜ ಬೆಳ್ತಂಗಡಿ
ಬೆಳಾಲು ಗ್ರಾಮದ ಮಾಯ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ತರಗತಿ ನಡೆಸಲು ಅಗತ್ಯ ಕೊಠಡಿಗಳು ಇಲ್ಲದೆ ಮಕ್ಕಳ ಪಾಠಪ್ರವಚನಕ್ಕೆ ಸಮಸ್ಯೆಯಾಗಿದೆ.
1982ರಲ್ಲಿ ಆರಂಭವಾದ ಈ ಶಾಲೆ 2008ರಲ್ಲಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದೆ. 1.46 ಎಕರೆ ವಿಶಾಲ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಶಾಲೆಯಲ್ಲಿ ಆರು ಕೊಠಡಿಗಳಿವೆ. ಆದರೆ ಎಂಟು ತರಗತಿಗಳಿರುವ ಕಾರಣ ಹೆಚ್ಚುವರಿ ಎರಡು ಕೊಠಡಿಗಳ ಅಗತ್ಯವಿದೆ.
ಮುಖ್ಯಶಿಕ್ಷಕರಿಗೂ ಪ್ರತ್ಯೇಕ ಕೊಠಡಿ ಇಲ್ಲದೆ ಸ್ಟ್ಾರೂಂನಲ್ಲೇ ಇತರ ಶಿಕ್ಷಕರ ಜತೆಗೆ ಕುಳಿತು ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಇದೆ. ಶಾಲೆಯ ಅಗತ್ಯ ವಸ್ತುಗಳನ್ನು ಇಡಲು ಕೂಡ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲದಿರುವುದರಿಂದ ಅವುಗಳನ್ನೂ ಸ್ಟ್ಾರೂಂನಲ್ಲೇ ಇಡಲಾಗಿದೆ. ಶಾಲೆಗೆ ಎರಡು ತರಗತಿ ಕೊಠಡಿ, ಮುಖ್ಯಶಿಕ್ಷಕರ ಕೊಠಡಿ, ಸಾಮಗ್ರಿಗಳ ನಿರ್ವಹಣೆಗೆ ಕೊಠಡಿ ಅಗತ್ಯವಿದೆ. ಶಾಲೆಯ ಕಟ್ಟಡವೂ ಸಾವಾನ್ಯ ಸ್ಥಿತಿಯಲ್ಲಿದ್ದು, ಶಿಥಿಲಾವಸ್ಥೆ ತಲುಪುವ ಮೊದಲು ನಿರ್ವಹಣೆ ನಡೆಸಬೇಕಾದ ಅನಿವಾರ್ಯತೆ ಇದೆ.
ಪ್ರಸ್ತುತ ಎಂಟು ತರಗತಿಗಳಲ್ಲಿ 76 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ 106 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದರು. ಒಂದನೇ ತರಗತಿಗೆ ಈಗ ದಾಖಲಾತಿ ನಡೆಯುತ್ತಿದ್ದು, ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಹೇಳುತ್ತಾರೆ. ಐವರು ಕಾಯಂ ಶಿಕ್ಷಕರು, ಓರ್ವ ಅತಿಥಿ ಶಿಕ್ಷಕಿ ಹಾಗೂ ಊರವರ ಮತ್ತು ಶಾಲಾಭಿವೃದ್ಧಿ ಸಮಿತಿ ವತಿಯಿಂದ ನೇಮಿಸಿದ ಓರ್ವ ಶಿಕ್ಷಕಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಆಟದ ಮೈದಾನಕ್ಕೂ ಬೇಡಿಕೆ

ಶಾಲೆಯ ಆಟದ ಮೈದಾನ ಸಾವಾನ್ಯವಾಗಿದ್ದು, ಇಕ್ಕಟ್ಟಾಗಿರುವ ಮೈದಾನದಿಂದ ದೊಡ್ಡಮಟ್ಟದ ಕ್ರೀಡಾಕೂಟ ಆಯೋಜಿಸಲು ಅಸಾಧ್ಯವಾಗಿದೆ. ಶಾಲೆಗೆ ಜಾಗದ ಕೊರತೆ ಇಲ್ಲದಿರುವುದರಿಂದ ಮೈದಾನ ಇನ್ನಷ್ಟು ವಿಸ್ತರಿಸಿದರೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಬಹುದು ಎಂದು ಪಾಲಕರು, ಶಿಕ್ಷಕರು ತಿಳಿಸಿದ್ದಾರೆ.

ರಂಗಮಂದಿರದಲ್ಲಿ ತರಗತಿ

ಮಾಯ ಶಾಲೆಯಲ್ಲಿ ರಂಗಮಂದಿರವಿದ್ದು, ಕೊಠಡಿಗಳ ಕೊರತೆ ಇರುವ ಕಾರಣ ರಂಗಮಂದಿರದಲ್ಲಿ ನಿತ್ಯ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಬಿಸಿಲು, ಮಳೆ ಇದ್ದಾಗ ರಂಗಮಂದಿರದೊಳಗೆ ತರಗತಿ ಮುನ್ನಡೆಸುವುದು ಕಷ್ಟವಾಗುತ್ತಿದೆ.

ನಮ್ಮ ಶಾಲೆಗೆ ಅಗತ್ಯ ಬೇಕಾಗಿರುವ ಕೊಠಡಿಗಳ ನಿರ್ವಾಣಕ್ಕೆ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿದ್ದಾಗ ಅನುದಾನದ ಭರವಸೆ ನೀಡಿದ್ದರು. ಆದರೆ ಇದುವರೆಗೂ ಯಾವುದೇ ಅನುದಾನ ಬಿಡುಗಡೆಗೊಂಡಿಲ್ಲ. ವಿದ್ಯಾರ್ಥಿಗಳ ದಾಖಲಾತಿಗೂ ಕೊಠಡಿಗಳ ಕೊರತೆ ಬಹುದೊಡ್ಡ ಸಮಸ್ಯೆಯಾಗಿದೆ.

— ಶಶಿಧರ ಶಿಲ್ಪಿ, ಎಸ್‌ಡಿಎಂಸಿ ಅಧ್ಯಕ್ಷ, ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆ ಮಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net