ಕೆಎಸ್ಸಾರ್ಟಿಸಿಯಲ್ಲಿ ಮಹಿಳೆಯರೇ ಜಾಸ್ತಿ!

ಉಚಿತ ಪ್ರಯಾಣ ಯೋಜನೆಯ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗೆ ಏರುತ್ತಿರುವ ಮಹಿಳೆಯರು
ಉಚಿತ ಪ್ರಯಾಣ ಯೋಜನೆಯ ಕೇರಳ ಕೆಎಸ್‌ಆರ್‌ಟಿಸಿ ಬಸ್‌ಗೆ ಏರುತ್ತಿರುವ ಮಹಿಳೆಯರು
Published on
ಪುರುಷೋತ್ತಮ ಪೆರ್ಲ ಕಾಸರಗೋಡು
ಕೇರಳ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ‘ಪ್ರಿಯದರ್ಶಿನಿ’ ಉಚಿತ ಪ್ರಯಾಣ ಯೋಜನೆ ಆರಂಭಗೊಂಡ ನಂತರ ಕಾಸರಗೋಡು ಜಿಲ್ಲೆಯಲ್ಲಿ ಸೌಲಭ್ಯ ಪಡೆಯುವ ಮಹಿಳಾ ಪ್ರಯಾಣಿಕರ ಸಂಖ್ಯೆ ಭಾರಿ ಏರಿಕೆಯಾಗಿದೆ.
ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರೇ ತುಂಬಿರುವುದರಿಂದ ಹಣ ಪಾವತಿಸಿ ಪ್ರಯಾಣಿಸುವ ಪುರುಷ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಯೋಜನೆ ಜಾರಿಯಾದ ಮೊದಲ ಒಂದೆರಡು ದಿನ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದರೂ ಇತ್ತೀಚಿನ ದಿನಗಳಲ್ಲಿ ಭಾರಿ ಏರಿಕೆಯಾಗಿದೆ. ಜೂ.16ರಂದು ಜಿಲ್ಲೆಯಲ್ಲಿ 54,851 ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. 17ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ 58,855ಕ್ಕೆ ಏರಿದೆ. ಈಗ ಇನ್ನೂ ಹೆಚ್ಚಾಗಿದ್ದು, ದಿನವೂ ಸರಾಸರಿ ಐದು ಸಾವಿರ ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆಯುತ್ತಿದ್ದಾರೆ.
ಕಾಸರಗೋಡು ಡಿಪೋಗೆ ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಕಾಸರಗೋಡು-ಮಂಗಳೂರು ಅಂತಾರಾಜ್ಯ ಮಾರ್ಗದಲ್ಲಿ ಪ್ರತಿ ಕೇರಳ ಕೆಎಸ್ಸಾರ್ಟಿಸಿ ಬಸ್ಸಿಗೆ ದಿನಕ್ಕೆ 35 ಸಾವಿರ ರೂ.ನಿಂದ 40 ಸಾವಿರ ರೂ. ಸಂಗ್ರಹವಾಗುತ್ತಿತ್ತು. ಈ ಮೊತ್ತ ಉಚಿತ ಪ್ರಯಾಣ ಯೋಜನೆ ಜಾರಿ ಬಳಿಕ 10ರಿಂದ 12 ಸಾವಿರ ರೂ.ಗೆ ಇಳಿಕೆಯಾಗಿದೆ. ನಿತ್ಯವೂ ಪ್ರಯಾಣಿಸುವ ಪ್ರಯಾಣಿಕರ ಪೈಕಿ ಶೇ.75 ಮಹಿಳೆಯರೇ ಆಗಿದ್ದು, ವಾರ್ಷಿಕವಾಗಿ ಸರ್ಕಾರ ಕೆಎಸ್ಸಾರ್ಟಿಸಿ ನಿಗಮಕ್ಕೆ 800 ಕೋಟಿ ರೂ.ಹೊರೆ ಪಾವತಿಸಬೇಕಿದೆ.

ಜಾಹೀರಾತುಗಳಿಗೆ ಮೊರೆ

ಪ್ರಿಯದರ್ಶಿನಿ ಯೋಜನೆಯಿಂದ ಉಂಟಾಗುವ ಆರ್ಥಿಕ ನಷ್ಟ ಸರಿದೂಗಿಸಲು ಕೇರಳ ಸರ್ಕಾರ ಜಾಹೀರಾತುಗಳ ಮೊರೆ ಹೋಗಿದೆ. ರಾಜ್ಯದ ಕೆಲವು ಬಸ್ಸುಗಳಲ್ಲಿ ಸ್ಮಾರ್ಟ್ ಟಿ.ವಿ. ಅಳವಡಿಸಿ ಜಾಹೀರಾತುಗಳನ್ನು ಪ್ರದರ್ಶಿಸಲಾಗುತ್ತಿದೆ. ಕಾಸರಗೋಡು-ಮಂಗಳೂರು ಮಾರ್ಗದ ಹಲವು ಬಸ್ಸುಗಳಲ್ಲಿ ಈಗಾಗಲೇ ಟಿ.ವಿ. ಅಳವಡಿಸಲಾಗಿದ್ದು, ಜಾಹೀರಾತುಗಳ ನಡುವೆ ಹಾಡುಗಳನ್ನೂ ಪ್ರಸಾರ ಮಾಡಲಾಗುತ್ತಿದೆ.

ಖಾಸಗಿ ಉದ್ದಿಮೆ ವಲಯಕ್ಕೆ ಹೊಡೆತ

ಪ್ರಿಯದರ್ಶಿನಿ ಯೋಜನೆಯಿಂದ ಖಾಸಗಿ ಬಸ್ ಉದ್ದಿಮೆಗೂ ಹೊಡೆತ ಬಿದ್ದಿದೆ. ಗ್ರಾಮೀಣ ಪ್ರದೇಶಗಳು ಹಾಗೂ ಕೆಎಸ್ಸಾರ್ಟಿಸಿ ಸೌಲಭ್ಯವಿಲ್ಲದ ಪ್ರದೇಶದಲ್ಲಿ ವಾತ್ರ ಖಾಸಗಿ ಬಸ್‌ಗಳನ್ನು ಏರುತ್ತಿರುವ ಮಹಿಳೆಯರು ಕೆಎಸ್ಸಾರ್ಟಿಸಿ ಸಂಚಾರವಿರುವ ಪ್ರದೇಶದಲ್ಲಿ ಉಚಿತ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಕೇರಳದಲ್ಲಿ ಸಂಚರಿಸುತ್ತಿದ್ದ 35 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಸಂಖ್ಯೆ ಇಂದು 10 ಸಾವಿರಕ್ಕೂ ಕಡಿಮೆಯಿದೆ. ಖಾಸಗಿ ಬಸ್‌ಗಳೇ ಸಂಚರಿಸುತ್ತಿರುವ ರೂಟ್‌ಗಳಲ್ಲಿ ಕೆಎಸ್ಸಾರ್ಟಿಸಿ ಸೇವೆ ಆರಂಭಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಖಾಸಗಿ ಬಸ್ ಉದ್ದಿಮೆ ಹಿತ ಕಾಪಾಡಲು ಕೇರಳ ಸರ್ಕಾರ ಬಜೆಟ್‌ನಲ್ಲಿ ರಸ್ತೆ ತೆರಿಗೆಯನ್ನು ಶೇ.50ಕ್ಕೆ ಕಡಿತಗೊಳಿಸಿದೆ. ಆದರೂ ಈ ೋಷಣೆಯಿಂದ ಬಸ್ ವಾಲೀಕರಿಗೆ ಹೆಚ್ಚಿನ ಪ್ರಯೋಜನವಾಗದು. ಇದರಿಂದ ತ್ರೈವಾಸಿಕ 25ರಿಂದ 30 ಸಾವಿರ ರೂ. ತನಕ ತೆರಿಗೆ ಪಾವತಿಸುತ್ತಿರುವ ಖಾಸಗಿ ಬಸ್‌ಗಳಿಗೆ ದಿನಕ್ಕೆ 150 ರೂ. ವಾತ್ರ ಉಳಿಕೆಯಾಗಲಿದೆ. ಖಾಸಗಿ ಬಸ್‌ಗಳ ಕಾರ್ಮಿಕರ ಹಿತ ಕಾಪಾಡುವ ಜತೆಗೆ ಉದ್ದಿಮೆಯನ್ನು ಸಂಕಷ್ಟದಿಂದ ಪಾರುವಾಡಲು ಸರ್ಕಾರ ಮುಂದಾಗಬೇಕು.

— ಕೆ.ಗಿರೀಶ್ ಅಧ್ಯಕ್ಷ, ಖಾಸಗಿ ಬಸ್ ಮಾಲೀಕರ ಸಂಘಟನೆ, ಕಾಸರಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net