ಡಾಂಬರಿಗಿಂತ ಕೆಸರಿನ ಹೊಂಡಗಳೇ ಅಧಿಕ

ಮನೆ ಆವರಣ ಗೋಡೆ ನಿರ್ಮಾಣಕ್ಕಾಗಿ ಸುರಿದ ಮಣ್ಣಿನಿಂದ ಕೆಸರುಮಯವಾದ ರಸ್ತೆ.
ಮನೆ ಆವರಣ ಗೋಡೆ ನಿರ್ಮಾಣಕ್ಕಾಗಿ ಸುರಿದ ಮಣ್ಣಿನಿಂದ ಕೆಸರುಮಯವಾದ ರಸ್ತೆ.
Published on
ಶಶಿ ಕುತ್ಯಾಳ ಈಶ್ವರಮಂಗಲ
ಪುತ್ತೂರು ತಾಲೂಕಿನ ಗ್ರಾಮೀಣ ಪ್ರದೇಶದ ಬಹುತೇಕ ಸಂಪರ್ಕ ರಸ್ತೆಗಳು ಅಭಿವೃದ್ಧಿಗೊಂಡಿದ್ದರೂ ಪುತ್ತೂರು-ಬೆಳ್ಳಾರೆ ರಸ್ತೆಯ ಸಾರೆಪುಣಿ ಜಂಕ್ಷನ್ ಬಳಿಯಿಂದ ಗಟ್ಟಮನೆ ಮೂಲಕವಾಗಿ ಸನ್ಯಾಸಿಗುಡ್ಡೆಗೆ ಸಂಪರ್ಕಿಸುವ ರಸ್ತೆಗೆ ದಶಕಗಳಿಂದ ದುರಸ್ತಿ ಭಾಗ್ಯ ದೊರೆತಿಲ್ಲ.
ಕೆದಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರಪುಣಿ ಜಂಕ್ಷನ್-ಗಟ್ಟಮನೆ-ಸನ್ಯಾಸಿಗುಡ್ಡಿ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರುಮಯವಾಗಿದ್ದು, ಪಾದಚಾರಿಗಳಿಗೂ ನಡೆದಾಡುವುದು ಸಾಹಸವೆಂಬ ಮಟ್ಟಿಗೆ ಹದಗೆಟ್ಟಿದೆ. ಈ ರಸ್ತೆ ಡಾಂಬರೀಕರಣಗೊಂಡು ದಶಕಗಳೇ ಉರುಳಿವೆ. ಒಂದು ಕಿಲೋಮೀಟರ್ ರಸ್ತೆಯಲ್ಲಿ ಡಾಂಬರಿಗಿಂತ ಹೊಂಡಗುಂಡಿಗಳೇ ಅಧಿಕವಿದ್ದು, ಪದೇಪದೆ ಮಣ್ಣು ಹಾಕಿ ಮುಚ್ಚಲಾಗುತ್ತಿದೆ. ಮಳೆಗಾಲದಲ್ಲಿ ಇಲ್ಲಿ ಕೆಸರಿನ ಹೊಂಡಗಳಾಗಿ ಮಾರ್ಪಾಡಾಗುತ್ತಿವೆ. ಪಕ್ಕದಲ್ಲೇ ಮನೆಯೊಂದರ ಆವರಣ ಗೋಡೆ ಕೆಲಸ ನಿರ್ಮಾಣವಾಗುತ್ತಿದ್ದು, ಅಲ್ಲಿಯೂ ಮಣ್ಣು ರಾಶಿ ಸುರಿದಿರುವುದರಿಂದ ರಸ್ತೆಯಿಡಿ ಕೆಸರುಮಯವಾಗಿದೆ.
ಸಾರಪುಣಿ ಜಂಕ್ಷನ್ ಭಾಗದಿಂದ 10ಮೀಟರ್ ಅಂತರವಿರುವ ಮುಂದಿನ ಭಾಗದವಿಡಿ ಕೆಸರಿನ ಕೂಪವಾಗಿದ್ದು, ಈ ರಸ್ತೆಯಲ್ಲಿ ವಾಹನ ಚಲಾಯಿಸುವುದು ಚಾಲಕರಿಗೆ ಸಾಹಸವಾಗಿದೆ. ಸನ್ಯಾಸಿಗುಡ್ಡೆ ಮಾರ್ಗದಲ್ಲಿ ಭಜನಾ ಮಂದಿರ, ಸರ್ಕಾರಿ ಶಾಲೆ, ಹಾಲು ಉತ್ಪಾದಕರ ಸಹಕಾರಿ ಕೇಂದ್ರ, ಜುಮ್ಮಾ ಮಸೀದಿಯಿದ್ದು, ಇಲ್ಲಿಗೆ ತೆರಳುವವರೆಲ್ಲರೂ ರಸ್ತೆಯ ಕೆಸರಿನಿಂದ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವರ್ಷವೂ ಇದೇ ಸಂಕಷ್ಟ ಈ ಭಾಗದ ಜನರಿಗೆ ಎದುರಾಗಿತ್ತು.

ಮುಂದುವರಿದ ಅಧಿಕಾರಿಗಳ ನಿರ್ಲಕ್ಷ್ಯ

ರಸ್ತೆ ಅಭಿವೃದ್ಧಿಗಾಗಿ ನಾವು ಮೂರ‌್ನಾಲ್ಕು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ವಾಡುತ್ತಾ ಬಂದಿದ್ದೇವೆ. ಮಾಧ್ಯಮಗಳು ಕೂಡ ಈ ಕುರಿತು ಸುದ್ದಿ ಪ್ರಕಟಿಸಿ ಅಧಿಕಾರಿಗಳ, ಜನಪ್ರತಿನಿಧಿಗಳ ಎಚ್ಚರಿಸಿದ್ದರು. ಆದರೂ ಸಂಬಂಧಿತರು ನಿರ್ಲಕ್ಷ್ಯ ಮುಂದುವರಿಸಿದ್ದಾರೆ. ತ್ಯಾಗರಾಜ ಜಂಕ್ಷನ್ ಬಳಿ ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಿದರೆ ಅದರಲ್ಲಿ ಸಂಗ್ರಹಿಸಿರುವ ನೀರಿನಿಂದ ಕೊಳೆಬಟ್ಟೆಗಳನ್ನು, ಚಪ್ಪಲಿಗಳನ್ನು ತೊಳೆದುಕೊಂಡು ಕಚೇರಿ, ಶಾಲೆ ಹಾಗೂ ಸಮಾರಂಭಗಳಿಗೆ ತೆರಳಬಹುದು ಎಂದು ಸ್ಥಳೀಯರು ಆಡಳಿತ ವ್ಯವಸ್ಥೆಯನ್ನು ಲೇವಡಿ ಮಾಡಿದ್ದಾರೆ.

ನಾಲ್ಕು ವರ್ಷಗಳಿಂದ ನಾವು ರಸ್ತೆ ದುರಸ್ತಿಗಾಗಿ ಸಂಬಂಧಿತರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಪ್ರಯೋಜನ ಶೂನ್ಯ. ಪ್ರತೀ ವರ್ಷ ಮಳೆಗಾಲವೂ ಈ ಸಮಸ್ಯೆಗಳು ಎದುರಾಗುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಈ ಭಾಗದೆಡೆಗೆ ಗಮನ ನೀಡಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು.

— ಅಶ್ರಫ್ ಸಾರಪುಣಿ ಸಾಮಾಜಿಕ ಕಾರ್ಯಕರ್ತ

ರಸ್ತೆಯಲ್ಲಿದ್ದ ಹೊಂಡ ಗುಂಡಿಗಳಿಗೆ ಅಲ್ಲಿನ ಸ್ಥಳೀಯರೇ ಪದೇಪದೆ ಮಣ್ಣು ಸುರಿದು ದುರಸ್ತಿಗೊಳಿಸಿದ್ದರು. ರಸ್ತೆಯ ಮತ್ತೊಂದು ಭಾಗದಲ್ಲಿ ಮನೆಯೊಂದರ ಆವರಣ ಗೋಡೆ ನಿರ್ಮಿಸಲಾಗುತ್ತಿದ್ದು, ಅಲ್ಲಿಯೂ ಮಣ್ಣು ಸುರಿದಿರುವುದರಿಂದ ರಸ್ತೆ ಕೆಸರಾಗಿದೆ. ಆ ಮನೆಯವರಿಗೆ ಈಗಾಗಲೇ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲಾಗಿದೆ. ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆಯನ್ನು ಪಂಚಾಯಿತಿ ವತಿಯಿಂದ ವಾಡಲಾಗುವುದು.

— ಲಾವಣ್ಯಾ ಕೆದಂಬಾಡಿ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net