ಕಳವು ಆರೋಪಿಗಳ ಬಂಧನ

Arrest
Arrest
Published on
ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕುಂಬ್ಳೆ ನಿವಾಸಿ ಸುರೇಶ್ ಹಾಗೂ ಶಾಂತಿಯಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆ ದೇವಸ್ಥಾನದಿಂದ ತಾಮ್ರ ಹಾಗೂ ಹಿತ್ತಳೆಯ ಪೂಜಾಪರಿಕರಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಹಳೆಯ ಕೊಪ್ಪರಿಗೆ, ಆರು ದೀಪಗಳು, ಸುಮಾರು 20 ಗಿಂಡೆಗಳು, ಹರಿವಾಣ ತಟ್ಟೆ, ಭಜನಾ ತಾಳ, ತಾಮ್ರದ ಕೊಡಪಾನ, ತಾಮ್ರದ ಅಕ್ಕಿ ಸೋಸುವ ಪಾತ್ರೆ ಸೇರಿದಂತೆ ಹಲವು ಪೂಜಾ ಸಾಮಗ್ರಿಗಳು ಕಳವಾಗಿದ್ದವು.
ದೇವಸ್ಥಾನದ ಸಿಸಿಟಿವಿಯಲ್ಲಿ ಮೂವರು ವ್ಯಕ್ತಿಗಳು ಗೋಣಿಯಲ್ಲಿ ಸಾಮಗ್ರಿಗಳನ್ನು ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. ದೇವಸ್ಥಾನ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೆಲವರನ್ನು ಸ್ಥಳೀಯರು ಪ್ರಶ್ನಿಸಿದಾಗ ದೇವಸ್ಥಾನದ ಕೆಲಸಕ್ಕೆ ಬಂದಿರುವುದಾಗಿ ತಿಳಿಸಿದ್ದರು.ದೇವಸ್ಥಾನದ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ ಕೆಲಸಕ್ಕೆ ಯಾರನ್ನೂ ನಿಯೋಜಿಸಿಲ್ಲ ಎಂಬುದು ತಿಳಿದುಬಂದಿತ್ತು.

ಸ್ಥಳೀಯರು ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿದಾಗ ಅನ್ನಪಾತ್ರೆಗಳನ್ನು ಗೋಣಿಯಲ್ಲಿ ತುಂಬಿಸಿಟ್ಟಿರುವುದು ಹಾಗೂ ಕಪಾಟುಗಳನ್ನು ಜಾಲಾಡಿರುವುದು ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಶಂಕಿತರನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಿ ದೂರು ದಾಖಲಿಸಲಾಗಿತ್ತು. ಕಳವಾದ ಪೂಜಾ ಸಾಮಗ್ರಿಗಳ ಪತ್ತೆ ಹಾಗೂ ಪ್ರಕರಣದಲ್ಲಿ ಇತರ ಆರೋಪಿಗಳಿಗಾಗಿ ತನಿಖೆ ಮುಂದುವರಿದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net