ಉಪನ್ಯಾಸಕಿಯ ಮನೆಯಲ್ಲಿ ಚಿನ್ನಾಭರಣ ಕಳ್ಳತನ

(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)
Published on

* ಮೂರು ತಿಂಗಳ ಬಳಿಕ ಬಂದ ಶಿಕ್ಷಕಿ ಶಾಕ್​

* 12 ಲಕ್ಷ ರೂ. ಮೌಲ್ಯದ ಒಡವೆ ನಾಪತ್ತೆ

ಉಡುಪಿ: ಅನ್ಯ ಜಿಲ್ಲೆಯ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದ ಉಡುಪಿ ತಾಲೂಕಿನ ಪುತ್ತೂರಿನಲ್ಲಿರುವ ಅವರ ಮನೆಯಲ್ಲಿ 12 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಚಿನ್ನಾಭರಣ ಕಳವಾಗಿದ್ದು, 3 ತಿಂಗಳ ಬಳಿಕ ಕಳ್ಳತನ ನಡೆದಿರುವುದು ತಿಳಿದು ಕುಟುಂಬ ಆಘಾತಕ್ಕೊಳಗಾಗಿದೆ.
ಶರತಕುಮಾರ್​ ಎಂಡಿ ಎಂಬವರ ಪತ್ನಿ ಶಶಿರೇಖಾ ಬಿ. (38) ಅವರು ಪತ್ತೂರು ಗ್ರಾಮದ ಕೊಡಂಕೂರು ಸಾಯಿಬಾಬಾ ನಗರದಲ್ಲಿ ಮನೆ ಹೊಂದಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿರುವ ಅವರು ಕಳೆದ ಬೇಸಿಗೆ ರಜೆಯಲ್ಲಿ ಊರಿಗೆ ಬಂದಿದ್ದರು. ಮೇ 25ರಂದು ರಾತ್ರಿ 9 ಗಂಟೆಗೆ ಮನೆಗೆ ಬೀಗ ಹಾಕಿ ಮೈಸೂರಿಗೆ ಹೋಗಿದ್ದರು. ಬಳಿಕ ಅವರು ಮನೆಗೆ ಬಂದಿರಲಿಲ್ಲ. ಆ.9ರಂದು ರಾತ್ರಿ 10:30ಕ್ಕೆ ಪತಿ ಮತ್ತು ಮತ್ತು ಮನೆಯವರೊಂದಿಗೆ ಪುತ್ತೂರಿನಲ್ಲಿದ್ದ ಮನೆಗೆ ಬಂದಿದ್ದರು.
ಮನೆಯೊಳಗೆ ಇದ್ದ ಎರಡು ಬೆಡ್​ ರೂಮ್​ಗಳಲ್ಲಿದ್ದ ಕಬೋರ್ಡ್​ ಬಾಗಿಲನ್ನು ಮನೆಯಲ್ಲಿದ್ದ ಕೀ ಸಹಾಯದಿಂದ ಬೀಗ ತೆಗೆದು ಮತ್ತು ಬೀರುಗಳ ಬಾಗಿಲು ತೆಗೆದು ಅದರಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿ ಎಳೆದು ಹಾಕಿದ್ದು ಕಂಡರು. ಕಳ್ಳರು ಮನೆಯ ಪ್ರವೇಶದ್ವಾರವನ್ನು ಅಯುಧದಿಂದ ಮೀಟಿ ತೆರೆಯಲು ಪ್ರಯತ್ನಿಸಿ, ನಂತರ ಮನೆಯ ದಕ್ಷಿಣ ಬದಿಯ ಗೋಡೆ ಹತ್ತಿ ಟೆರಸ್​ ಮೇಲಿನ ಬಾಗಿಲನ್ನು ಆಯುಧದಿಂದ ಮೀಟಿ ತೆರೆದು ಒಳಪ್ರವೇಶಿಸಿರುವುದು ತಿಳಿದುಬಂತು.
ಕಪಾಟಿನಲ್ಲಿ ಇಟ್ಟಿದ್ದ 100 ಗ್ರಾಂ ತೂಕದ ಒಂದು ಚಿನ್ನದ ಸರ, 1 ಗ್ರಾಂ ತೂಕದ ಚಿನ್ನದ ಕಾಯಿನ್​, ಇನ್ನಿತರ ಆಭರಣ ಸೇರಿ ಒಟ್ಟು 10 ಲಕ್ಷ ರೂ. ಮೌಲ್ಯದ ಒಡವೆ, ಇನ್ನೊಂದು ಬೆಡ್​ ರೂಮ್​ನಿಂದ ಬೆಳ್ಳಿಯ ಚಂಬು, ಬೆಳ್ಳಿಯ ಹರಿವಾಣ, ಬೆಳ್ಳಿಯ ಪಂಚಪಾತ್ರೆ, ಬೆಳ್ಳಿಯ ತಟ್ಟೆ ಹಾಗೂ ದೇವರ ಕೋಣೆಯಲ್ಲಿಟ್ಟಿದ್ದ ಬೆಳ್ಳಿಯ ಅರಿಶಿನ ಕುಂಕುಮದ ಬಟ್ಟಲು, ಬೆಳ್ಳಿಯ ದೀಪಗಳು, ಬೀರುವಿನಲ್ಲಿದ್ದ ಬೆಳ್ಳಿಯ ಕಾಲು ಚೈನ್​ ಸೇರಿ ಒಟ್ಟು 1.650 ಕೆಜಿ ಬೆಳ್ಳಿಯ ವಸ್ತು, ನಗದು 40 ಸಾವಿರ ರೂ. ಸೇರಿ ಒಟ್ಟು 12 ಲಕ್ಷ ರೂ. ಮೌಲ್ಯದ ಸೊತ್ತು ಕಳುವಾಗಿದೆ ಎಂದು ದೂರು ನೀಡಿದ್ದಾರೆ. ಉಡುಪಿ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net