ಉಡುಪಿ: ಯಕ್ಷಗಾನ ಕಲಾರಂಗ ಸಂಸ್ಥೆಯ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಗಾಧತೆ ಹೊಂದಿದೆ. ಕೇವಲ ಕಲೆಗೆ ಸೀಮಿತವಾಗಿರದೆ ಸಾಮಾಜಿಕ ಕಳಕಳಿ ಹೊಂದಿರುವುದು ವಿಶೇಷ. ಈಗಾಗಲೇ 100ಕ್ಕೂ ಅಧಿಕ ಮನೆಗಳನ್ನು ಕಟ್ಟಿಸಿಕೊಟ್ಟಿರುವ ಸಂಸ್ಥೆಯ ಕಾರ್ಯ ಅನನ್ಯ ಎಂದು ಉಡುಪಿ ಜಿಲ್ಲಾ ಮಾಜಿ ಪೊಲೀಸ್ ವರಿಷ್ಠ ಹಾಗೂ ಪ್ರಸ್ತುತ ತಮಿಳುನಾಡಿನ ರಾಜಕಾರಣಿ ಕೆ. ಅಣ್ಣಾಮಲೈ ಶ್ಲಾಘಿಸಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಕಟ್ಟಡಕ್ಕೆ ಭೇಟಿ ನೀಡಿದ್ದ ಅವರು ಕಟ್ಟಡ ಮತ್ತು ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಮನೆ ಹಸ್ತಾಂತರದ ವಿಡಿಯೋ ವೀಕ್ಷಿಸಿ ಮಾತನಾಡಿದರು.
ಸದಾ ಪ್ರೋತ್ಸಾಹ
ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿದ್ದಾಗ ಕರ್ತವ್ಯ ದಕ್ಷತೆಯಿಂದಲೇ ಉಡುಪಿ ಜಿಲ್ಲೆಯ ನಾಗರಿಕರ ಹೃದಯದಲ್ಲಿ ಸ್ಥಾಯಿಯಾಗಿದ್ದರು. ಉಡುಪಿಯನ್ನು ಬಿಟ್ಟ ಮೇಲೂ ಸಹ ನಮ್ಮ ಸಂಸ್ಥೆಯನ್ನು ನಿರಂತರ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಕೆಲ ವರ್ಷದ ಹಿಂದೆ ಹತ್ಯೇಗಿಡಾದ ಬೈಂದೂರಿನ ಅಕ್ಷತಾ ದೇವಾಡಿಗಳ ಹೆಸರಿನಲ್ಲಿ ಬೈಂದೂರು ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸುವ ವಿದ್ಯಾರ್ಥಿನಿಯರಿಗೆ ಪ್ರತಿವರ್ಷ 25 ಸಾವಿರ ರೂ. ಸಹಾಯಧನ ನೀಡುತ್ತಿರುವುದನ್ನು ಸ್ಮರಿಸಿದರು.
ಸಂಸ್ಥೆಯ ವತಿಯಿಂದ ಅಧ್ಯಕ್ಷ ಎಂ. ಗಂಗಾಧರ್ ರಾವ್ ಅಣ್ಣಾಮಲೈ ಅವರನ್ನು ಗೌರವಿಸಿದರು. ಸಹ ಕಾರ್ಯದರ್ಶಿ ನಾರಾಯಣ ಹೆಗಡೆ, ಕೋಶಾಧಿಕಾರಿ ಸದಾಶಿವ ರಾವ್ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಇದ್ದರು.