ಮಹಾದೇವನ ಇಚ್ಛೆ ಎಂದಿಗೂ ಬದಲಾಗದು

ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ 'ಶ್ರೀಕೃಷ್ಣ ಸಮರ್ಪಣೋತ್ಸವ' ಕಾರ್ಯಕ್ರಮವನ್ನು ಸುಗುಣೇಂದ್ರ ಶ್ರೀ, ಕೈಲಾಶಾನಂದ ಗಿರಿ ಮಹಾರಾಜ್​ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ, ಮಧು ಪಂಡಿತ್​ ದಾಸ್​, ಚಂಚಲಾಪತಿ ದಾಸ್​ ಇತರರಿದ್ದರು.
ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ 'ಶ್ರೀಕೃಷ್ಣ ಸಮರ್ಪಣೋತ್ಸವ' ಕಾರ್ಯಕ್ರಮವನ್ನು ಸುಗುಣೇಂದ್ರ ಶ್ರೀ, ಕೈಲಾಶಾನಂದ ಗಿರಿ ಮಹಾರಾಜ್​ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ, ಮಧು ಪಂಡಿತ್​ ದಾಸ್​, ಚಂಚಲಾಪತಿ ದಾಸ್​ ಇತರರಿದ್ದರು.
Published on

* ಕೈಲಾಶಾನಂದ ಗಿರಿ ಮಹಾರಾಜ್​ ಆಶೀರ್ವಚನ

* 'ಶ್ರೀಕೃಷ್ಣ ಸಮರ್ಪಣೋತ್ಸವ' ಕಾರ್ಯಕ್ರಮ

ಉಡುಪಿ: ಇಸ್ಕಾನ್​ನ ಸಂಸ್ಥಾಪಕ ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಬಿರುದು ನೀಡಲು ತೀರ್ಮಾನಿಸಿದಾಗ ನಮಗೆ ಬಹಳ ಬೆದರಿಕೆ ಬಂತು. ಬಹಳ ಜನರು ಬಂದು ವಿರೋಧಿಸಿದರು. ಎಚ್ಚರಿಕೆ ನೀಡಿದರು. ಆದರೆ, ಮಹಾದೇವನ ಇಚ್ಛೆ ಎಂದಿಗೂ ಬದಲಾಗದು. ಸಾಧು ಹಾಗೂ ಸಾಧುತ್ವ ನಿರಂತರ. ನಾವೆಲ್ಲರೂ ಆತನ ದಾಸಾನುದಾಸರು. ಶ್ರೀಲ ಪ್ರಭುಪಾದರು ಶ್ರೀಕೃಷ್ಣನ ಪರಮದಾಸರಾಗಿದ್ದರಿಂದಲೇ ಅವರು 'ವಿಶ್ವಗುರು' ಆದರು ಎಂದು ಹರಿದ್ವಾರ ನಿರಂಜನಿ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಕೈಲಾಶಾನಂದ ಗಿರಿ ಮಹಾರಾಜ್​ ತಿಳಿಸಿದರು.
ಉಡುಪಿಯ ರಾಜಾಂಗಣದಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ನಿಮಿತ್ತ ಹಾಗೂ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆ (ಇಸ್ಕಾನ್​)ಯ ಆಶ್ರಯದಲ್ಲಿ ಭಾನುವಾರ (ಡಿ.21) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಲ ಪ್ರಭುಪಾದರಿಗೆ ಪ್ರಯಾಗ್​ರಾಜ್​ನ ಮಹಾಕುಂಭಮೇಳದಲ್ಲಿ ನೀಡಿದ್ದ 'ವಿಶ್ವಗುರು' ಬಿರುದನ್ನು ಉಡುಪಿ ಕೃಷ್ಣನಿಗೆ ಸಮರ್ಪಿಸುವ 'ಶ್ರೀಕೃಷ್ಣ ಸಮರ್ಪಣೋತ್ಸವ' ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕೋರ್ಟ್​ನಿಂದಲೂ ಸಮ್ಮತಿ

ಕುಂಡಲ ಕ್ಷೇತ್ರದಲ್ಲಿ ಅಖಾಡ ಪರಿಷತ್​ನ ತತ್ವಾನುಸಾರ ಆಚಾರ್ಯ ಮಹಾಮಂಡಲದ ಅಂತಾರಾಷ್ಟ್ರೀಯ ಮುಖ್ಯಸ್ಥ ರವೀಂದ್ರ ಗುರೂಜಿ ನೇತೃತ್ವದಲ್ಲಿ ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಬಿರುದು ನೀಡಲು ತೀರ್ಮಾನಿಸಲಾಯಿತು. ವಿಶ್ವದ ಕೋಟ್ಯಂತರ ಜನರು ಅದನ್ನು ಒಪ್ಪಿ, ತಲೆಬಾಗಿ ನಮಿಸಿದರು. ನ್ಯಾಯಾಲಯವೂ ಸಹ ಸಮ್ಮಿತಿ ನೀಡಿತು. ಭಕ್ತಿ ವೇದಾಂತದ ಪ್ರವರ್ತಕ, ಮಾರ್ಗದರ್ಶಕ ಹಾಗೂ ಸನಾತನ ಧರ್ಮದ ರಕ್ಷಕರಾದ ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಬಿರುದು ಪ್ರದಾನ ಮಾಡಲು ಶ್ರೀಕೃಷ್ಣನೇ ನನಗೆ ಅನುಗ್ರಹಾವಕಾಶ ಮಾಡಿಕೊಟ್ಟಿದ್ದ ಎಂದು ಕೈಲಾಶಾನಂದ ಗಿರಿ ಮಹಾರಾಜ್​ ತಿಳಿಸಿದರು. 

ಫಲಕ, ಪುಸ್ತಕ ಬಿಡುಗಡೆ

ಶ್ರೀಲ ಪ್ರಭುಪಾದರಿಗೆ ನೀಡಿದ್ದ 'ವಿಶ್ವಗುರು' ಬಿರುದನ್ನು ಉಡುಪಿ ಕೃಷ್ಣನಿಗೆ ಸಮರ್ಪಿಸಿದ 'ಶ್ರೀಕೃಷ್ಣ ಸಮರ್ಪಣೋತ್ಸವಂ' ಫಲಕವನ್ನು ಅನಾವರಣಗೊಳಿಸಲಾಯಿತು. ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್​ ಸಂಪಾದನೆಯ ಹಾಗೂ ಕನ್ನಡದಲ್ಲಿ ಮುದ್ರಿತ 'ಶ್ರೀಲ ಪ್ರಭುಪಾದ ಚರಿತಾಮೃತಂ' ಪುಸ್ತಕ ಬಿಡುಗಡೆ ಮಾಡಲಾಯಿತು. ಇದೇವೇಳೆ 'ವಿಶ್ವಗುರು' ಪ್ರಶಸ್ತಿ ಪ್ರದಾನಿದ ಕ್ಷಣಗಳ ವೀಡಿಯೋ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸಂದೇಶವನ್ನು ಎಲ್​ಇಡಿ ಪರದೆ ಮೂಲಕ ಬಿತ್ತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಇಸ್ಕಾನ್​ ಭಕ್ತರಿಂದ ಶ್ರೀರಾಮ&ಕೃಷ್ಣನ ಸಂಕೀರ್ತನೆ, ನೃತ್ಯ ನಡೆಯಿತು.
ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಇಸ್ಕಾನ್​ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಚಂಚಲಾಪತಿ ದಾಸ್​ ಸ್ವಾಗತಿಸಿದರು. ಬೆಂಗಳೂರು ಇಸ್ಕಾನ್​ ಅಕ್ಷಯಪಾತ್ರ ಫೌಂಡೇಶನ್​ನ ಅಧ್ಯಕ್ಷ ಮಧು ಪಂಡಿತ್​ ದಾಸ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುತ್ತಿಗೆ ಮಠದ ವಿದ್ವಾಂಸ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್​ ಭಟ್​ ಸಹಕರಿಸಿದರು.

ಭಕ್ತರ ಅವತಾರದಲ್ಲಿ ಭಕ್ತವತ್ಸಲ

 ಶ್ರೀಲ ಪ್ರಭುಪಾದರ ವಿಗ್ರಹಕ್ಕೆ ಶ್ರೀಕೃಷ್ಣನ ಬೆಳ್ಳಿ ಕಿರೀಟ ತೊಡಿಸಿ, ಪುಷ್ಪಾರ್ಚಿಸಿ ಆಶೀರ್ವಚನ ನೀಡಿದ ಸುಗುಣೇಂದ್ರ ತೀರ್ಥ ಶ್ರೀಪಾದರು, 'ಶ್ರೀಕೃಷ್ಣ ಸಮರ್ಪಣೋತ್ಸವ'ವು ಉಡುಪಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ನಮ್ಮ ವಿಶ್ವ ಗೀತಾ ಪರ್ಯಾಯದ ಅನ್ವರ್ಥಕವೂ ಆಗಿದೆ. ಪೊಡವಿಗೊಡೆಯ, ಜಗದ್ಗುರುವಾದ ಕೃಷ್ಣನಿಗೆ 'ವಿಶ್ವಗುರು' ಬಿರುದು ಸಮರ್ಪಣೆ ಮಾಡಿರುವುದು ಭಕ್ತವತ್ಸಲನಾದ ಆತನಿಗೂ ಸಂತಸ ಆಗಿರಬಹುದು. ಕಲಿಯುಗದಲ್ಲಿ ದೇವರ ಅವತಾರವಿಲ್ಲ. ಹೀಗಾಗಿ ಎಲ್ಲ ಸಾಧನೆಗೂ ಮೂಲನಾದ ಆತನು ಭಕ್ತರ ಅವತಾರದಲ್ಲಿ ಧರ್ಮ ರಕ್ಷಣೆ ಮಾಡುತ್ತಿದ್ದಾನೆ. ಅಂತಹ ಭಕ್ತರಲ್ಲಿ ಶ್ರೀಲ ಪ್ರಭುಪಾದರು ಪ್ರಮುಖರಾಗಿದ್ದು, 'ವಿಶ್ವಗುರು' ಬಿರುದು ಕೊಡಿಸಿದ್ದಾನೆ ಎಂದರು. 
"

ವಿಶ್ವದ ಮಠದ ಪರಂಪರೆಗಳಲ್ಲಿ ಶ್ರೀಮಧ್ವಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀಕೃಷ್ಣನ ಸನ್ನಿಧಿಯ ಉಡುಪಿ ಮಠವು ಸರ್ವಶ್ರೇಷ್ಠ, ಸವೋರ್ತ್ತಮವಾಗಿದೆ. ದ್ರಾವಿಡ ಪ್ರದೇಶ ಭಕ್ತಿಯ ಮೂಲ ನೆಲೆಯಾಗಿದೆ. ಭಾಗವತವೂ ಸಹ ಇಲ್ಲಿಯೇ ಉತ್ಪನ್ನವಾಗಿದ್ದು, ಕರ್ನಾಟಕದಲ್ಲಿ ಅದರ ವೃದ್ಧಿಯಾಗಿದೆ. ಇಲ್ಲಿ ಶ್ರೀಕೃಷ್ಣನು ವಿವಿಧ ಭಾವಗಳಿಂದ ನೃತ್ಯ ಮಾಡುತ್ತಾನೆ. ಹೀಗಾಗಿಯೇ ಇದು ಕರ್ನಾಟಕ. ಹರಿದ್ವಾರ ಬಿಟ್ಟು ಎಲ್ಲಿಗೆ ಹೋಗುತ್ತೀರಿ ಎಂದು ಪ್ರಶ್ನಿಸಿದರೆ ಕರ್ನಾಟಕ ಎಂದು ಉತ್ತರಿಸುತ್ತೇನೆ. ಇದು ಭಕ್ತಿಯ ತಾಣ. ಇಲ್ಲಿನ ಮಣ್ಣನ್ನು ಹಣೆಗೆ ಹಚ್ಚಿಕೊಂಡರೆ ಬುದ್ಧಿ ಸರಿಯಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net