ದುರ್ಬಲ ಕಿರು ಸೇತುವೆ ತೂಗುಗತ್ತಿ!

 ಆನಗಳ್ಳಿಯಲ್ಲಿ ಬಸ್ರೂರು ಕುಂದಾಪುರ ಸಂಪರ್ಕದ ಹಳೆಯ ಸೇತುವೆ ದುರ್ಬಲವಾಗಿರುವುದು.
ಆನಗಳ್ಳಿಯಲ್ಲಿ ಬಸ್ರೂರು ಕುಂದಾಪುರ ಸಂಪರ್ಕದ ಹಳೆಯ ಸೇತುವೆ ದುರ್ಬಲವಾಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ಕುಸಿತ ಭೀತಿ
  • ಸಂಪರ್ಕ ಕೊಂಡಿ
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಮುಂಗಾರು ಆರಂಭಕ್ಕೂ ಮುನ್ನವೇ ಆನಗಳ್ಳಿಯಲ್ಲಿ ಹಳೆಯ ಸೇತುವೆ ಅಪಾಯದ ಗಂಟೆ ಭಾರಿಸುತ್ತಿದೆ. ಬಸ್ರೂರು- ಕುಂದಾಪುರವನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಈ ಕಿರು ಸೇತುವೆ ಈಗ ದುರ್ಬಲ ಸ್ಥಿತಿಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ದುರಂತ ಸಂಭವಿಸಬಹುದಾದ ಆತಂಕ ಸ್ಥಳೀಯರಲ್ಲಿ ಹೆಚ್ಚಿದೆ.
ಹೊಸ ಸೇತುವೆ ನಿರ್ವಾಣವಾಗಿ ದಶಕ ಸಮೀಪಿಸುತ್ತಿದ್ದರೂ ಹಳೆಯ ಸೇತುವೆ ತೆರವುಗೊಳಿಸದೆ ಹಾಗೆಯೇ ಉಳಿಸಿರುವುದು ಅಪಾಯಕ್ಕೆ ಕಾರಣವಾಗಿದೆ. ಸೇತುವೆ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಫಿಲ್ಲರ್‌ಗಳು ಕುಸಿಯುವ ಸ್ಥಿತಿಯಲ್ಲಿವೆ. ಹಿಗ್ಗುಸಂಧುಗಳಿಗೆ ಸಂಪೂರ್ಣ ತುಕ್ಕು ಹಿಡಿದಿದ್ದು, ಸೇತುವೆ ಬದಿಯ ಗಾರ್ಡ್‌ಗಳ ಪೈಕಿ ಹಲವಾರು ಕುಸಿದು ನದಿಗೆ ಬಿದ್ದಿವೆ. ಸೇತುವೆಯ ಬುಡವೂ ಬಲಹೀನಗೊಂಡಿದ್ದು, ಗಿಡಗಂಟಿಗಳು ವ್ಯಾಪಕವಾಗಿ ಬೆಳೆದಿವೆ.
ಇದರ ನಡುವೆ ಅಪಾಯದ ಅರಿವಿಲ್ಲದೆ ಮೀನುಗಾರರು, ಗಾಳ ಹಾಕಿ ಮೀನು ಹಿಡಿಯುವವರು. ಸಂಜೆ ವಿಹಾರಿಗಳು ಹಾಗೂ ಪ್ರವಾಸಿಗರು ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ. ಇದು ಜೀವಾಪಾಯಕ್ಕೆ ಕಾರಣವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಮುಂಗಾರು ಮಳೆ ತೀವ್ರಗೊಳ್ಳುವ ಮುನ್ನವೇ ಸಂಬಂಧಿತ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ರಸ್ತೆಯೊಂದಿಗೆ ಹೊಸ ಸೇತುವೆ

1980ರ ದಶಕದಲ್ಲಿ ವಾಜಿ ಸಂಸದೆ ಮೇಬಲ್ ರೆಬೆಲ್ಲೊ ಅವರ ಪ್ರಯತ್ನದಿಂದ ಆನಗಳ್ಳಿ ಕುಂದಾಪುರ ನಡುವೆ ಸಣ್ಣ ನೀರಾವರಿ ಇಲಾಖೆಯಿಂದ ಕಿರು ಸೇತುವೆ ನಿರ್ವಾಣಗೊಂಡಿತ್ತು. ಅಗಲ ಕಿರಿದಾದ ಈ ಸೇತುವೆಯಿಂದಾಗಿ ಗ್ರಾಮಸ್ಥರು 10 ಕಿ.ಮೀ. ಸುತ್ತುವರಿದು ಸಂಚರಿಸಬೇಕಾಗುತ್ತಿತ್ತು. ನಂತರ ಸ್ಥಳೀಯರ ಹೋರಾಟ ಹಾಗೂ ವಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಪ್ರಯತ್ನದಿಂದ 2016ರಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಮೂಲಕ 6 ಕೋಟಿ ರೂ. ವೆಚ್ಚದಲ್ಲಿ 75 ಮೀಟರ್ ಉದ್ದದ ಸಂಪರ್ಕ ರಸ್ತೆಯೊಂದಿಗೆ ಹೊಸ ಸೇತುವೆ ನಿರ್ಮಿಸಲಾಯಿತು. ಆದರೂ ಬಳಕೆಯಿಲ್ಲದ ಹಳೆಯ ಸೇತುವೆ ಇಂದಿಗೂ ಹಾಗೆಯೇ ಉಳಿದುಕೊಂಡಿದೆ.

ನಾಲ್ಕು ದಶಕಗಳ ಹಳೆಯ ಈ ಕಿರು ಸೇತುವೆ ಈಗ ಸಂಪೂರ್ಣ ಅಭದ್ರವಾಗಿದೆ. ಹಳೆಯ ಸೇತುವೆಯ ಇಕ್ಕೆಲಗಳಲ್ಲಿ ಗಿಡಗಂಟಿ ವ್ಯಾಪಕವಾಗಿ ಬೆಳೆದಿದ್ದು, ಬುಡ ದುರ್ಬಲಗೊಂಡಿವೆ. ಇಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಜನ ಸಂಚರಿಸುತ್ತಿರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಗಾರು ವೇಳೆ ಸಂಭವನೀಯ ಅಪಾಯ ತಪ್ಪಿಸಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.

— ನಾಗರಾಜ ಖಾರ್ವಿ ನಿತ್ಯ ಪ್ರಯಾಣಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net