

ಲಾವಣ್ಯಕ್ಕೆ ಜನಾಶ್ರಯವೇ ಬೆನ್ನೆಲುಬು. ರಂಗಾಸಕ್ತ ಸಹೃದಯಿ ಕಲಾಭಿಮಾನಿಗಳು, ಕಲಾ ಪೋಷಕರು ಕೈಹಿಡಿದು ಮುನ್ನಡೆಸಿದ ಪರಿಣಾಮ ನಲವತ್ತೊಂಬತ್ತು ವಸಂತಗಳಲ್ಲಿ ಲವಲವಿಕೆಯಿಂದಲೇ ಬೆಳೆದು ಬಂದಿದೆ. ಲಾವಣ್ಯ, ಒಳ ಹೊರಗೆ ತನ್ನದೆ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ.
ರಂಗಭೂಮಿ ಕ್ಷೇತ್ರದಲ್ಲಿ ಲಾವಣ್ಯ ತನ್ನ ಪರಿಪೂರ್ಣ ಸಾಧನೆ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ದಿ.ಶ್ರೀನಿವಾಸ ಪ್ರಭುಗಳಿಂದ 1977ರಲ್ಲಿ ಸ್ಥಾಪಿಸಲ್ಪಟ್ಟ ಲಾವಣ್ಯ, ಪ್ರಸ್ತುತ ಬೈಂದೂರಿನ ಸಾಂಸ್ಕೃತಿಕ ಹಿರಿಮೆಯನ್ನು ಜಗದಗಲ ಪಸರಿಸಿದ ಸಾಧನೆ ಮಾಡಿದೆ. ಕಳೆದ 49 ವರ್ಷಗಳಿಂದ ಬೈಂದೂರಿನಂತಹ ಗ್ರಾಮೀಣ ಭಾಗದಲ್ಲಿ ರಂಗಭೂಮಿಯನ್ನು ಬೆಳೆಸಿದ ಕೀರ್ತಿ ಲಾವಣ್ಯಕ್ಕೆ ಸಲ್ಲುತ್ತದೆ.