ತಣ್ಣಗಾಗದ ಹೆತ್ತ ಕರುಳ ಸಂಕಟದ ಉರಿ

ಲಾವಣ್ಯಾ ಗೌಡ ಮನೆ
ಲಾವಣ್ಯಾ ಗೌಡ ಮನೆ
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಕೆಲಸಕ್ಕೆ ಹೋಗಿದ್ದ ಮಗಳು ಮನೆಗೆ ಬರುತ್ತಾಳೆಂದು ಕಾಯುತ್ತಿದ್ದ ತಂದೆ-ತಾಯಿಗೆ ಮಗಳು ಬರ್ಬರವಾಗಿ ಹತ್ಯೆಯಾಗಿ ಹೆಣವಾಗಿ ಬರುತ್ತಾಳೆಂಬ ಸುದ್ದಿ ಬರಸಿಡಲಿನಿಂತೆ ಅಪ್ಪಳಿಸಿತ್ತು. ಮಗಳ ಸಾವಿನ ದುಃಖ ಸಹಿಸಲಾಗದ ತಂದೆ-ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು. ಧಗಧಗಿಸಿ ಉರಿಯುತ್ತಿದ್ದ ಲಾವಣ್ಯಾಳ ಚಿತೆ ತಣ್ಣಗಾಗಿದ್ದರೂ ಹೆತ್ತವರ ಕರುಳ ಸಂಕಟದ ಉರಿ ಇನ್ನೂ ತಣ್ಣಗಾಗಿಲ್ಲ. ಮನೆ ತುಂಬಾ ಓಡಾಡಿಕೊಂಡಿದ್ದ ಮಗಳನ್ನು ಕಳೆದುಕೊಂಡು ಕುಟುಂಬದಲ್ಲೀಗ ಮೌನ ಆವರಿಸಿದೆ. ಒಡಹುಟ್ಟಿದ ಸಹೋದರಿಯರ ಕಣ್ಣುಗಳು ಅತ್ತುಅತ್ತು ಬತ್ತಿ ಹೋಗಿವೆ.
ಇದು ಬಿ.ಸಿ.ರೋಡಿನ ಬಸ್ ನಿಲ್ದಾಣದಲ್ಲಿ ಹಂತಕನ ಕತ್ತಿಗೆ ಬಲಿಯಾದ ಲಾವಣ್ಯಾಳ ಮನೆ ಉಳಿಗ್ರಾಮದ ಕಕ್ಕಪದವಿನ ಕೊಡಂಗೆಯಲ್ಲಿರುವ ಹರಿಹರ ನಿಲಯದಲ್ಲಿ ಶನಿವಾರ ಕಂಡುಬಂದ ಮನಕಲಕುವ ಸನ್ನಿವೇಶ.

ಕೃಷಿಯೇ ಜೀವನಾಧಾರ

ಕೊಡಂಗೆಯ ಬಾಲಪ್ಪ ಗೌಡ ಹಾಗೂ ರೂಪಾ ದಂಪತಿಗೆ ಮೂವರು ಪುತ್ರಿಯರು. ಕೃಷಿ ಹಾಗೂ ಹೈನುಗಾರಿಕೆಯೇ ಕುಟುಂಬದ ಜೀವನಾಧಾರವಾಗಿದ್ದು, ಬಾಲಪ್ಪ ಗೌಡರು ತಮ್ಮ ಮೂವರು ಪುತ್ರಿಯರಿಗೆ ಉನ್ನತ ಶಿಕ್ಷಣವನ್ನೂ ಕೊಡಿಸಿದ್ದಾರೆ. ಎಂಟು ತಿಂಗಳ ಹಿಂದೆಯಷ್ಟೇ ಹಿರಿಯ ಪುತ್ರಿ ಚೈತ್ರಾಳ ವಿವಾಹ ನೆರವೇರಿದ್ದು, ಎರಡನೇ ಸಹೋದರಿ ತೇಜಾಕ್ಷಿ ಉಪ್ಪಿನಂಗಡಿಯ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಮೃತ ಲಾವಣ್ಯಾ ಹಾಗೂ ಹಿರಿಯ ಸಹೋದರಿ ಚೈತ್ರಾ ಕಲ್ಲಡ್ಕದ ನರ್ಸಿಂಗ್ ಹೋಂನ ಮೆಡಿಕಲ್ ವಿಭಾಗದಲ್ಲಿ ಉದ್ಯೋಗಿಗಳಾಗಿದ್ದರು. ಹತ್ಯೆಯಾದ ದಿನವೂ ಲಾವಣ್ಯಾ ತನ್ನ ಅಕ್ಕನ ಜತೆಗೆ ಮಾತನಾಡಿ ಬಳಿಕ ಹಾಸ್ಪಿಟಲ್‌ನಿಂದ ಮನೆಗೆ ಹೊರಟಿದ್ದಳು.

ಕೊಲೆಯಾಗುವ ಮೊದಲು ಕರೆ

ಗುರುವಾರ ಸಂಜೆ ಬಸ್ ನಿಲ್ದಾಣದಲ್ಲಿ ಕಕ್ಕೆಪದವಿಗೆ ತೆರಳುವ ಬಸ್‌ನಲ್ಲಿ ಕುಳಿತಿದ್ದ ವೇಳೆ ಚೇತನ್ ಗೌಡ ಬರಿಗೈಯಲ್ಲಿ ಬಸ್‌ನೊಳಗೆ ಬಂದಿದ್ದ. ಲಾವಣ್ಯಾ ನನಗೆ ಕರೆ ಮಾಡಿ ಚೇತನ್ ಬಂದಿರುವುದಾಗಿ ತಿಳಿಸಿದ್ದಳು. ನಾನು ಈ ವಿಚಾರವನ್ನು ನನ್ನ ಪತಿಗೆ ಕರೆವಾಡಿ ಹೇಳಿದ್ದೆ. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಕರೆ ಮಾಡಿ ಆತ ಇಳಿದು ಹೋಗಿರುವುದಾಗಿ ತಿಳಿಸಿದ್ದಳು. ಬಳಿಕ ಮತ್ತೊಮ್ಮೆ ಆತ ಮಾರಾಕಾಯುಧ ಸಹಿತ ಬಂದು ನನ್ನ ತಂಗಿಯನ್ನು ಕೊಂದಿರುವ ಸುದ್ದಿ ಬಂತು ಎಂದು ಲಾವಣ್ಯಾಳ ಅಕ್ಕ ಚೈತ್ರಾ ಗದ್ಗಿತರಾದರು.


ನೆನಪಾಗಿ ಉಳಿದ ಮಾವಿನ ಹಣ್ಣು

ನಾನು ಈಗ ಬರುತ್ತೇನೆ, ಮಾವಿನ ಹಣ್ಣು ತಂದು ಇಡಿ ಎಂದು ಲಾವಣ್ಯಾ ತಾಯಿಗೆ ಕರೆ ಮಾಡಿ ತಿಳಿಸಿದ್ದಳು. ಆದರೆ ವಿಧಿಯಾಟ ಬೇರೆಯಾಗಿದ್ದು, ಕೆಲವೇ ಹೊತ್ತಿನಲ್ಲಿ ಲಾವಣ್ಯಾ ಹೆಣವಾಗಿದ್ದಳು. ಆಕೆಗಾಗಿ ತಂದ ಮಾವಿನ ಹಣ್ಣು ಮನೆಯಲ್ಲಿ ಹಾಗೇ ಉಳಿದಿದ್ದು, ತಾಯಿ ಆಗಾಗ ನೆನೆಪಿಸಿಕೊಂಡು ಕೊರಗುತ್ತಿದ್ದಾರೆ.

7 ವರ್ಷದಿಂದ ಮಾತುಕತೆಯಿಲ್ಲ

ಹಂತಕ ಚೇತನ್ ಗೌಡ ದೂರದ ಸಂಬಂಧಿಯಾಗಿದ್ದರೂ, ನಾವ್ಯಾರೂ ಆತನನ್ನು ಏಳು ವರ್ಷದಿಂದ ವಾತನಾಡಿಸಿಲ್ಲ. ಚಿಕ್ಕವನಿದ್ದಾಗ ಪಕ್ಕದಲ್ಲಿರುವ ಸಂಬಂಧಿಗಳ ಮನೆಗೆ ಬಂದಾಗ ನಮ್ಮ ಮನೆಗೂ ಬರುತ್ತಿದ್ದ. ನಮ್ಮ ಮೇಲೆ, ತಂಗಿಯ ಮೇಲೆ ಯಾಕೆ ಅಷ್ಟು ದ್ವೇಷ ಎನ್ನುವುದು ನಮಗೆ ಗೊತ್ತಿಲ್ಲ. ಅವನ ಸಹೋದರಿ ಹಾಗೂ ತಂದೆ ತಾಯಿ ಒಳ್ಳೆಯವರು. ಅವರೊಂದಿಗೆ ಒಳ್ಳೆಯ ಬಾಂಧವ್ಯ ಇದ್ದರೂ ಚೇತನ್ ಗೌಡನ ಜತೆ ಮಾತನಾಡುತ್ತಿರಲಿಲ್ಲ ಎಂದು ಎರಡನೇ ಸಹೋದರಿ ತೇಜಾಕ್ಷಿ ಹೇಳುತ್ತಾರೆ.

ನರ್ಸಿಂಗ್ ಪರೀಕ್ಷೆಗೆ ತಯಾರಿ

ಲಾವಣ್ಯ ಪುತ್ತೂರಿನ ವಿದ್ಯಾಸಂಸ್ಥೆಯೊಂದರಲ್ಲಿ ನರ್ಸಿಂಗ್ ವಿದ್ಯಾಭ್ಯಾಸ ಮಾಡಿದ್ದಳು. ಎರಡು ವಿಷಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು. ಜು.31 ಹಾಗೂ ಆ.1ರಂದು ಪರೀಕ್ಷೆಯಿದ್ದುದ್ದರಿಂದ ಮುಂಜಾನೆ ಹಾಗೂ ರಾತ್ರಿ ವೇಳೆ ಬಿಡುವು ಮಾಡಿಕೊಂಡು ಓದುತ್ತಿದ್ದಳು ಎಂದು ಸಹೋದರಿ ತೇಜಾಕ್ಷಿ ತಿಳಿಸಿದರು.

ಮಗಳನ್ನು ಕೊಂದ ಹಂತಕನಿಗೆ ಗಲ್ಲು ಶಿಕ್ಷೆ ಆಗಬೇಕು. ಅವನನ್ನು ಯಾವ ಕಾರಣಕ್ಕೂ ಬಿಡಬಾರದು.

— ಬಾಲಪ್ಪ ಗೌಡ, ಲಾವಣ್ಯಾ ತಂದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net