ವೈಭವವಿಲ್ಲದ ‘ವೇಣೂರು ಅಂಗಾರ ಸಂತೆ’

 ವೇಣೂರಿನಲ್ಲಿ ಹೆದ್ದಾರಿ ಬದಿಯಲ್ಲೇ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು.
ವೇಣೂರಿನಲ್ಲಿ ಹೆದ್ದಾರಿ ಬದಿಯಲ್ಲೇ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಗಳು.
Published on

ಮನೋಹರ್ ಬಳಂಜ ಬೆಳ್ತಂಗಡಿ

ಒಂದು ಕಾಲದಲ್ಲಿ ಮಂಗಳವಾರ ಎಂದರೆ ವೇಣೂರಿನ ಅಂಗಾರೆ ಸಂತೆಗೆ ಹೋಗುವ ದಿನ ಎಂಬ ಮಾತು ಪರಿಸರದಲ್ಲಿ ಚಾಲ್ತಿಯಲ್ಲಿತ್ತು. ಸುತ್ತಮುತ್ತಲಿನ ಊರುಗಳಿಂದ ವೇಣೂರು ಅಂಗಾರ ಸಂತೆಗೆ ಜನರ ದಂಡೇ ಹರಿದು ಬರುತ್ತಿತ್ತು. ವಾರದ ಅಗತ್ಯ ವಸ್ತುಗಳ ಖರೀದಿ, ಕೃಷಿ ಉತ್ಪನ್ನಗಳ ಮಾರಾಟ, ಪರಿಚಿತರ ಭೇಟಿಯೊಂದಿಗೆ ಈ ಸಂತೆ ಗ್ರಾಮೀಣರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಆದರೆ ಕಾಲ ಬದಲಾದಂತೆ ಸಂತೆಯ ಹಿಂದಿನ ವೈಭವ ಮಂಕಾಗಿದೆ. ಈಗ ಸಂತೆಯ ಹೆಸರಿದೆಯೇ ಹೊರತು ಹಿಂದಿನ ಜನಜಂಗುಳಿ, ವ್ಯಾಪಾರ ವಹಿವಾಟಿನ ಅಬ್ಬರ ಕಾಣಸಿಗುತ್ತಿಲ್ಲ.
ವೇಣೂರು ಸಂತೆ ಹಿಂದೆ ಕೆಳಪೇಟೆಯಿಂದ ಮೂಡುಕೋಡಿ ಕಡೆಗೆ ಸಾಗುವ ರಸ್ತೆ ಬದಿಯುದ್ದಕ್ಕೂ ನಡೆಯುತ್ತಿತ್ತು. ಫೆಬ್ರವರಿ 8ರಂದು ಹೊಸ ಎಪಿಎಂಸಿ ಮಾರುಕಟ್ಟೆ ನಿರ್ಮಾಣಗೊಂಡು ಸಂತೆ ಸ್ಥಳಾಂತರವಾಯಿತು. ಮಾರುಕಟ್ಟೆ ಕಟ್ಟಡ ಉತ್ತಮವಾಗಿದ್ದರೂ, ಅದು ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಅನುಕೂಲಕರವಾಗಿಲ್ಲ. ಹೀಗಾಗಿ ಈಗಲೂ ರಸ್ತೆ ಬದಿಯಲ್ಲೇ ಸಂತೆ ನಡೆಯುತ್ತಿದೆ.

ವ್ಯಾಪಾರ ಕುಸಿತ

ಸಂತೆ ದಿನಂದು ಹೆಚ್ಚಿನ ವ್ಯಾಪಾರಿಗಳು ಮಾರುಕಟ್ಟೆ ಕಟ್ಟಡದೊಳಗೆ ಅಂಗಡಿ ತೆರೆಯುವ ಬದಲು ಹೆದ್ದಾರಿ ಬದಿಯಲ್ಲೇ ಟರ್ಪಾಲ್ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. ವೇಣೂರು-ಮೂಡುಬಿದಿರೆ ಹೆದ್ದಾರಿಯಿಂದ 50 ಮೀಟರ್ ಒಳಭಾಗದಲ್ಲಿ ಮಾರುಕಟ್ಟೆ ಇದೆ. ಆದರೆ ಕಟ್ಟಡ ರಸ್ತೆಗೆ ಅಭಿಮುಖವಾಗಿಲ್ಲದ ಕಾರಣ ಹೊರಗಿನಿಂದ ಬರುವವರಿಗೆ ಇಲ್ಲಿ ಮಾರುಕಟ್ಟೆ ಇದೆ ಎಂಬುದೇ ಗೊತ್ತಾಗುವುದಿಲ್ಲ. ಇದು ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದ್ದು ಸಂತೆ ವ್ಯಾಪಾರಿಗಳ ಆದಾಯಕ್ಕೆ ಹೊಡೆತ ನೀಡುತ್ತದೆ. ಹಾಗಾಗಿ ಗ್ರಾಹಕರಿಗೆ ಸುಲಭವಾಗಿ ಕಾಣುವಂತೆ ರಸ್ತೆ ಬದಿಯಲ್ಲೇ ವ್ಯಾಪಾರ ಮಾಡುವುದು ಉತ್ತಮ ಎಂಬುದು ವ್ಯಾಪಾರಿಗಳ ಅಭಿಪ್ರಾಯ.

ಗ್ರಾಹಕರ ಕೊರತೆ: ಹೆದ್ದಾರಿ ಬದಿಯಲ್ಲೇ ತರಕಾರಿ, ಹಣ್ಣು, ದಿನಸಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವುದರಿಂದ ಗ್ರಾಹಕರನ್ನು ಆಕರ್ಷಿಸುತ್ತದೆ. ಅಲ್ಲದೆ ಖರೀದಿಸಲು ಕೂಡ ಅನುಕೂಲವಾಗುವುದರಿಂದ ರಸ್ತೆ ಬದಿ ವ್ಯಾಪಾರಕ್ಕೆ ಈಗಲೂ ಬೇಡಿಕೆ ಇದೆ. ಮಾರುಕಟ್ಟೆ ಕಟ್ಟಡದೊಳಗೆ ಬೆರಳೆಣಿಕೆ ವ್ಯಾಪಾರಿಗಳು ಮಾತ್ರವೇ ಇದ್ದು ಗ್ರಾಹಕರ ಕೊರತೆಯಿಂದ ವ್ಯಾಪಾರ ಕುಂಠಿತವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಒಣಮೀನು ಸೇರಿದಂತೆ ಕೆಲವು ನಿರ್ದಿಷ್ಟ ವಸ್ತುಗಳನ್ನು ಖರೀದಿಸಲು ಮಾತ್ರ ಗ್ರಾಹಕರು ಕಟ್ಟಡದೊಳಗೆ ಬರುತ್ತಾರೆ.

ಹೊಸ ಮಾರುಕಟ್ಟೆ ವಿನ್ಯಾಸ ಸಮಸ್ಯೆ

ಹೊಸ ಮಾರುಕಟ್ಟೆ ಕಟ್ಟಡ ರಸ್ತೆಯಿಂದ ಅನತಿ ದೂರದಲ್ಲೇ ಇದ್ದರೂ ಅದರ ವಿನ್ಯಾಸ, ಪ್ರವೇಶ ಅನುಕೂಲಕರವಾಗಿಲ್ಲ. ಕಟ್ಟಡದ ಪ್ರವೇಶ ರಸ್ತೆಗೆ ಅಭಿಮುಖವಾಗಿಲ್ಲ. ವಾಹನ ಪಾರ್ಕಿಂಗ್ ಸೌಲಭ್ಯವಿಲ್ಲದ ಕಾರಣ ವ್ಯಾಪಾರಿಗಳು ಹಿಂದೇಟು ಹಾಕುತ್ತಿದ್ದಾರೆ. ವೇಣೂರು ಸಂತೆಗೆ ಹಿಂದಿನಿಂದ ದೂರದ ಹಾಗೂ ಬೇರೆ ಜಿಲ್ಲೆಯ ವ್ಯಾಪಾರಿಗಳು ಬರುತ್ತಿಲ್ಲ. ಸ್ಥಳೀಯ ವ್ಯಾಪಾರಿಗಳೇ ಹೆಚ್ಚಾಗಿ ವ್ಯಾಪಾರ ಮಾಡುತ್ತಾರೆ. ಸಂತೆ ಸ್ಥಳಾಂತರಕ್ಕೆ ಕೆಲವು ವ್ಯಾಪಾರಿಗಳಿಂದ ವಿರೋಧ ಕೇಳಿ ಬಂದಿತ್ತು. ವಿರೋಧದ ನಡುವೆಯೂ ಹೊಸ ಮಾರುಕಟ್ಟೆಗೆ ಸಂತೆ ಸ್ಥಳಾಂತರ ಮಾಡಲಾಯಿತು.

ಮಾರುಕಟ್ಟೆ ಪ್ರವೇಶಿಸುವ ರಸ್ತೆ ಬದಿಯಲ್ಲೇ ಕೆಲವು ವ್ಯಾಪಾರಿಗಳು ತಮ್ಮ ಜಾಗ ಭದ್ರಪಡಿಸಿಕೊಂಡಿದ್ದಾರೆ. ಅನಿವಾರ್ಯವಾಗಿ ನಾವು ಮಾರುಕಟ್ಟೆ ಒಳಗೆ ವ್ಯಾಪಾರ ನಡೆಸುವಂತಾಗಿದೆ. ಇಲ್ಲಿಗೆ ಕಾಯಂ ಗ್ರಾಹಕರು ಮಾತ್ರ ಬರುತ್ತಾರೆ. ಮಾರುಕಟ್ಟೆ ಒಳಗೆ ವ್ಯಾಪಾರವೂ ಕಡಿಮೆ. ಮಾರುಕಟ್ಟೆಯನ್ನು ವ್ಯಾಪಾರಕ್ಕೆ ಅನುಕೂಲವಾಗುವಂತೆ ಬದಲಾವಣೆ ಮಾಡಿದರೆ ಉತ್ತಮ.

— ಉಮ್ಮರಬ್ಬ, ವ್ಯಾಪಾರಿ

ವೇಣೂರು ಸಂತೆಗೆ ಹಿಂದಿನಂತೆ ಅಬ್ಬರ ಇಲ್ಲ, ಗ್ರಾಹಕರ ಸಂಖ್ಯೆಯೂ ಬಹಳ ಕಡಿಮೆ. ತರಕಾರಿ ಕಡಿಮೆ ಬೆಲೆಯಲ್ಲಿ ಸಿಗುವ ಕಾರಣ ಬರುತ್ತೇವೆ. ಗ್ರಾಹಕರು ಹಾಗೂ ವ್ಯಾಪಾರಿಗಳಿಗೆ ಪೂರಕವಾಗಿ ಮಾರುಕಟ್ಟೆ ಮತ್ತಷ್ಟು ಸುಸಜ್ಜಿತಗೊಳಿಸಬೇಕು.

— ಚಂದ್ರಶೇಖರ, ಗ್ರಾಹಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net