ಅರಮನೆಯಂತೆ ಕಂಗೊಳಿಸುತ್ತಿದೆ ‘ಸುಪ್ರಸಾದ’ ಅನ್ನಛತ್ರ

ವಿಜಯಗೋಪುರದೊಂದಿಗೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ.
ವಿಜಯಗೋಪುರದೊಂದಿಗೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಬಂಗಾಡಿ ಸೀಮೆಯ ಪ್ರಧಾನ ವಿಷ್ಣುಕ್ಷೇತ್ರವಾಗಿ, ಭಕ್ತರ ಶ್ರದ್ಧಾಕೇಂದ್ರವಾಗಿ ಪ್ರಸಿದ್ಧಿ ಹೊಂದಿರುವ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಅನೇಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಅರಮನೆಯಂತೆ ಕಂಗೊಳಿಸುತ್ತಿರುವ ‘ಸುಪ್ರಸಾದ’ ಹೆಸರಿನ ಅನ್ನಛತ್ರ ಬ್ರಹ್ಮಕಲಶೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.
ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ವಿಜಯಗೋಪುರ ನಿರ್ಮಾಣ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕರಾದ ಕೆ.ಮೋಹನ್ ಕುಮಾರ್ ಅವರ ವಿಭಿನ್ನ ಕಲ್ಪನೆಯೊಂದಿಗೆ ನಿರ್ಮಾಣವಾಗಿರುವ ಸುಪ್ರಸಾದ ಅನ್ನಛತ್ರ ಭಕ್ತರ ಮನಸೂರೆಗೊಳ್ಳುತ್ತಿದೆ.
ಬ್ರಹ್ಮಕಲಶೋತ್ಸವದಲ್ಲಿ ದೇವರ ಸನ್ನಿಧಾನದಲ್ಲಿ ನೀಡುವ ಗಂಧ ಪ್ರಸಾದದಷ್ಟೇ ಶ್ರೇಷ್ಠವಾದುದು ಅನ್ನಪ್ರಸಾದ. ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದ ಒದಗಿಸುವಲ್ಲಿ ಯಾವುದೇ ರೀತಿಯ ಚ್ಯುತಿ ಬರಬಾರದು ಎಂಬ ಉದ್ದೇಶದಿಂದ ಕೆ.ಮೋಹನ್ ಕುಮಾರ್ ವಿಭಿನ್ನ ಕಲ್ಪನೆಯೊಂದಿಗೆ ಜಿಲ್ಲೆಯಲ್ಲಿ ಇದುವರೆಗೂ ಎಲ್ಲೂ ಕಾಣದ, ಅನ್ನದಾನದ ಮಹತ್ವ ತಿಳಿಹೇಳುವ ಅನ್ನಛತ್ರ ನಿರ್ಮಿಸಲಾಗಿದೆ.

ಅನ್ನಛತ್ರದ ವೈಶಿಷ್ಟೃ

ಸುಪ್ರಸಾದ ಅನ್ನಛತ್ರ 210 ಅಡಿ ಉದ್ದ, 135 ಅಡಿ ಅಗಲದ 25 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ. ಮೋಹನ್ ಕುಮಾರ್ ನೇತೃತ್ವದ ತಂಡ ಕೇವಲ 8 ದಿನಗಳಲ್ಲಿ ಅಡಕೆ ಮರಗಳನ್ನು ಹಾಕಿ ಮೇಲ್ಭಾಗಕ್ಕೆ ಅಡಕೆ ಮರದ ಗರಿ ಅಳವಡಿಸಿದ್ದಾರೆ. ಬಿಸಿಲಿನ ತಾಪ ಕಡಿಮೆಗೊಳಿಸಲು ಬಿಳಿ ಬಣ್ಣದ ಮೇಲ್ಕಟ್ಟು, ಅಡಕೆ ಮರಗಳಿಗೆ ಫೈಬರ್ ಡಿಸೈನ್ ಕಂಬ ಅಳವಡಿಕೆ, ನೆಲಕ್ಕೆ ಹಸಿರು ಬಣ್ಣದ ಮ್ಯಾಟ್ ಹಾಕಲಾಗಿದೆ. ಸುಪ್ರಸಾದ ಅನ್ನಛತ್ರ ಪ್ರವೇಶಿಸುತ್ತಿದ್ದಂತೆ ಮುಂಭಾಗದಲ್ಲಿ ಕೇದಾರನಾಥ, ಅಯೋಧ್ಯೆಯ ಶ್ರೀರಾಮ ಮಂದಿರ ಹೋಲುವ ಗೋಪುರಗಳು, ಆಕರ್ಷಕ ಶಿವನ ಮೂರ್ತಿ, ಆನೆಗಳು, ಯಕ್ಷಗಾನ ಕಲಾಕೃತಿಗಳು, ದೀಪಾಲಂಕಾರಗಳು, ರಾರಾಜಿಸುತ್ತಿರುವ ಕೇಸರಿ ಪತಾಕೆ ಜನರನ್ನು ಆಕರ್ಷಿಸುತ್ತಿದ್ದು, ಸಾಂಪ್ರದಾಯಿಕ ಶೈಲಿಯ ಜತೆಗೆ ಹೊಸತನದ ಸ್ಪರ್ಶ ನೀಡಲಾಗಿದೆ.

ಶ್ರೀ ಅನ್ನಪೂರ್ಣೇಶ್ವರಿ ಗುಡಿ

ಧನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಲು ಶ್ರೀ ಅನ್ನಪೂರ್ಣೇಶ್ವರಿಯ ಗುಡಿಯನ್ನೇ ಹೋಲುವಂಥ ತಾತ್ಕಾಲಿಗ ಗುಡಿ ನಿರ್ಮಿಸಲಾಗಿದೆ. ಮೋಹನ್ ಕುಮಾರ್ ಜತೆ ಸದಾ ಹುಮ್ಮಸ್ಸಿನೊಂದಿಗೆ ದುಡಿಯುವ ಯುವಕರ ತಂಡದ ಜತೆಗೆ ಬಾಲ್ಯದ ಸ್ನೇಹಿತ, ಕಲಾವಿದ ಶಿವಕುಮಾರ್ ಗುಡಿ ನಿರ್ಮಿಸಿದ್ದು, ಒಂದೂವರೆ ತಿಂಗಳು ಅವರ ತಂಡ ಕೆಲಸ ಮಾಡಿದೆ.

ಕನಸಿನ ಗೋಪುರ

ಕೀರ್ತಿಶೇಷ ಯು.ವಿಜಯರಾಘವ ಪಡುವೆಟ್ನಾಯರ ಕನಸಾಗಿದ್ದ ಗೋಪುರ ನಿರ್ಮಾಣ, 15 ವರ್ಷದ ಹಿಂದೆ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ದ್ವಾರ ನಿರ್ಮಾಣದ ನೇತೃತ್ವ ವಹಿಸಿಕೊಂಡಿದ್ದ ಕೆ.ಮೋಹನ್ ಕುಮಾರ್ ಪ್ರಧಾನ ಸಂಚಾಲಕತ್ವದಲ್ಲಿ, ಶಶಿಧರ ಶೆಟ್ಟಿ ಬರೋಡ ಅಧ್ಯಕ್ಷತೆಯಲ್ಲಿ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.
49 ಅಡಿ ಎತ್ತರ ಇರುವ ವಿಜಯ ಗೋಪುರದ ಕಾಮಗಾರಿ ಊರ ಕಾರ್ಮಿಕರಿಂದಲೇ ನಿರ್ಮಾಣಗೊಳ್ಳಬೇಕು ಎಂಬ ಉದ್ದೇಶದಿಂದ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಸಮಿತಿ ಚಿಂತನೆ ನಡೆಸಿ, ಬೆನಕ ಕನ್‌ಸ್ಟ್ರಕ್ಷನ್‌ನ ಮಾಲೀಕ ಗಣೇಶ ಗೌಡ ಅವರಿಗೆ ಜಬಾಬ್ದಾರಿ ವಹಿಸಲಾಗಿತ್ತು. ಲಾಯಿಲದ ರಮೇಶ್ ಮತ್ತು ತಂಡ ಶಿಲ್ಪಕಲೆ, ಉಜಿರೆಯ ಕೃಷ್ಣಪ್ಪ ಮತ್ತು ತಂಡ ಸಿಮೆಂಟ್ ಕೆಲಸ ನಿರ್ವಹಿಸಿದ್ದಾರೆ. ಯುವಕರ ತಂಡ 6 ತಿಂಗಳು ಹಗಲಿರುಳು ಶ್ರಮಿಸಿದೆ.

11ರಂದು ‘ಧರ್ಮಯಾನ’ ಐತಿಹಾಸಿಕ ಪಾದಯಾತ್ರೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ಮಾರ್ಗದರ್ಶನದಲ್ಲಿ, ಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ನೇತೃತ್ವದಲ್ಲಿ ಭಕ್ತಿ ಭಾವದ ‘ಧರ್ಮಯಾನ‘ ಮಾ.11ರಂದು ನಡೆಯಲಿದೆ. ಬ್ರಹ್ಮಕಲಶ ಸಮಿತಿ ಸಂಚಾಲಕರು ಮತ್ತು ಪದಾಧಿಕಾರಿಗಳು, ನಾಡಿನ ಸಮಸ್ತ ಭಕ್ತರು, ಕಾರ್ಯಕರ್ತರು, ಎಲ್ಲರೂ ಸೇರಿ ಅದ್ಭುತ ಐತಿಹಾಸಿಕ ಧರ್ಮಯಾನ ನಡೆಸಲಿದ್ದೇವೆ ಎಂದು ಕೆ. ಮೋಹನ್ ಕುಮಾರ್ ಹೇಳಿದ್ದಾರೆ.

ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಎಂದಾಗ ನೆನಪಾಗುವುದು ಕೀರ್ತಿಶೇಷ ವಿಜಯರಾಘವ ಪಡುವೆಟ್ನಾಯರು. ಅವರ ಕನಸನ್ನು ನನಸು ಮಾಡುವುದಕ್ಕೆ ಹೊರಟವರು ನಾವು. ಅನ್ನಪ್ರಸಾದದ ಮಹತ್ವ ಎಲ್ಲರಿಗೂ ತಿಳಿಸುವ ಉದ್ದೇಶದಿಂದ ವಿಭಿನ್ನ ಕಲ್ಪನೆಯ ಅನ್ನಛತ್ರ ನಿರ್ಮಾಣ ಮಾಡಿದ್ದೇವೆ. ಡಾ.ಡಿ.ವೀರೇಂದ್ರ ಹೆಗ್ಗಡೆ, ಹರ್ಷೇಂದ್ರ ಕುಮಾರ್ ನನಗೆ ಪ್ರೇರಣೆ. ವರ್ತಕರು, ಆಟೋ ಚಾಲಕರು, ಮಹಿಳೆಯರು, ಮಕ್ಕಳು, ಹಿರಿಯರ ಶ್ರಮದಾನದ ಮೂಲಕ ಬ್ರಹ್ಮಕಲಶದ ಕೆಲಸ ಕಾರ್ಯಗಳು ನಡೆದಿದ್ದು, ಇದರ ಯಶಸಸ್ಸು ಅವರಿಗೆ ಸಲ್ಲಬೇಕು.

----------- ಫೋಟೋ-----------
ಬಿಇಎಲ್-ಮಾ-05-ಫೈಲ್-02(1) ವಿಜಯಗೋಪುರದೊಂದಿಗೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ.
ಬಿಇಎಲ್-ಮಾ-05-ಫೈಲ್-02(2) ಸುಪ್ರಸಾದ ಅನ್ನಛತ್ರ.
ಬಿಇಎಲ್-ಮಾ-05-ಫೈಲ್-02(3) ತಮ್ಮ ತಂಡದೊಂದಿಗೆ ಮೋಹನ್ ಕುಮಾರ್.
ಬಿಇಎಲ್-ಮಾ-05-ಫೈಲ್-02(4) :
*********************
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net