ಚಕಿತಗೊಳಿಸುವ ಚಕತ್‌ಕಲ್ ಫಾಲ್ಸ್!

ಮೂಡಣ ಕಾನನದಲ್ಲಿರುವ ಚಕತ್‌ಕಲ್ ಜಲಪಾತ.
ಮೂಡಣ ಕಾನನದಲ್ಲಿರುವ ಚಕತ್‌ಕಲ್ ಜಲಪಾತ.
Published on
ವಿಜಯವಾಣಿ ಸುದ್ದಿಜಾಲ ಬೈಂದೂರು
ಮಳೆಗಾಲ ಎಂದಾಕ್ಷಣ ಪಶ್ಚಿಮ ಘಟ್ಟದ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಹಲವು ಜಲಪಾತಗಳ ಉಗಮವಾಗುತ್ತವೆ. ಬೈಂದೂರು, ಕುಂದಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಹಲವು ಜಲಪಾತಗಳು ಚಾರಣಪ್ರಿಯರನ್ನು ನಿತ್ಯ ಕೈಬೀಸಿ ಕರೆಯುತ್ತಿವೆ. ಬಹುತೇಕ ಜಲಪಾತಗಳು ಮಳೆಗಾಲದ ಬಳಿಕ ಮರೆಯಾದರೆ ಕೆಲವು ಜರಿಗಳಲ್ಲಿ ಡಿಸೆಂಬರ್‌ವರೆಗೆ ಜಲಧಾರೆ ಸುರಿಯುತ್ತದೆ. ಅಂತಹ ಅಪರೂಪದ ಜಲಪಾತಗಳಲ್ಲಿ ಬೈಂದೂರು ಸಮೀಪದ ಚಕತ್‌ಕಲ್ ಕೂಡ ಒಂದು.
ಉಡುಪಿಯಿಂದ 80 ಕಿ.ಮೀ ಉತ್ತರಕ್ಕೆ ಶಿರೂರು ಎನ್ನುವ ಊರು ಸಿಗುತ್ತದೆ. ಇಲ್ಲಿಂದ ತೂದಳ್ಳಿ ರಸ್ತೆಯಲ್ಲಿ ಹನ್ನೆರಡು ಕಿ.ಮೀ ಅತ್ಯಾಡಿ ಚರ್ಚ್ ಬಳಿ ತೆರಳಿದಾಗ ಸಿಗುವ ಕಾಲುದಾರಿಯಲ್ಲಿ ಈ ಸ್ಥಳಕ್ಕೆ ತಲುಪಬಹುದಾಗಿದೆ. ಅತ್ಯಾಡಿಯವರೆಗೆ ಮಾತ್ರ ವಾಹನ ಸಂಚರಿಸುತ್ತದೆ. ಬಳಿಕ 2 ಕಿ.ಮೀ ಕಾಡುದಾರಿ ಹಾಗೂ 1.5 ಕಿ.ಮೀ ಹೊಳೆಯಲ್ಲಿ ನಡೆದುಕೊಂಡು ಹೋದಾಗ ಚಕತ್‌ಕಲ್ ಫಾಲ್ಸ್ ಸಿಗುತ್ತದೆ. ಅತ್ಯಂತ ದುರ್ಗಮ ಕಾಡಿನಲ್ಲಿ ತೆರಳಬೇಕಾಗಿರುವುದರಿಂದ ಬಹುತೇಕ ಜನರು ಈ ಫಾಲ್ಸ್‌ಗೆ ಬಾರದೆ ಸಮೀಪದಲ್ಲಿರುವ ಕೊಸಳ್ಳಿ ಫಾಲ್ಸ್‌ಗೆ ತೆರಳುತ್ತಾರೆ. ಡಿಸೆಂಬರ್ ಅಂತ್ಯದವರೆಗೆ ಈ ಜಲಪಾತದಲ್ಲಿ ನೀರು ಹರಿಯುತ್ತದೆ, ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆ ಇರುವ ಕಾರಣ ಬಿಳಿಗುಂಡಿ ಜಲಪಾತ ಎಂದು ಕರೆಯುತ್ತಾರೆ.

ಸಿದ್ಧತೆಯಲ್ಲಿ ತೆರಳಬೇಕು

ಚಕತ್‌ಕಲ್ ಭಾಗದಲ್ಲಿ ಯಾವುದೇ ಅಂಗಡಿಗಳಿಲ್ಲದ ಕಾರಣ ಊಟ, ತಿಂಡಿ, ತಿನಿಸುಗಳನ್ನು ಶಿರೂರಿನಿಂದಲೇ ತೆಗೆದುಕೊಂಡು ಹೋಗಬೇಕು. ಈ ಸಮಯದಲ್ಲಿ ಇಂಬಳ ಕಾಟ ಇರುವುದರಿಂದ ಚಾರಣಕ್ಕೆ ಬೇಕಾಗುವ ಸಲಕರಣೆಗಳನ್ನು ಜತೆಗಿಟ್ಟು ತೆರಳಬೇಕು. ಸ್ಥಳೀಯರು ಇಲ್ಲಿಗೆ ಬರುವ ಪ್ರವಾಸಿಗರಿಗೆ ಸೂಕ್ತ ಮಾಹಿತಿ ಮತ್ತು ಸಹಕಾರ ನೀಡುತ್ತಾರೆ. ಪ್ರವಾಸೋದ್ಯಮ ಇಲಾಖೆ ಕೂಡ ಇಂತಹ ಅಪರೂಪದ ಜಲಪಾತಗಳ ಬಗ್ಗೆ ಇಲಾಖೆಯ ಕೈಪಿಡಿಯಲ್ಲಿ ದಾಖಲಿಸಬೇಕಾಗಿದೆ. ಇತ್ತೀಚೆಗೆ ಸಾಹಸಿ ಚಾರಣಪ್ರಿಯರು ಇಲ್ಲಿಗೆ ತೆರಳಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಪ್ರಚಾರ ನೀಡಿರುವುದು ಉತ್ತಮ ಬೆಳವಣಿಗೆ.

ಚಕತ್‌ಕಲ್ ಈ ಭಾಗದ ಅತ್ಯುತ್ತಮ ಜಲಪಾತವಾಗಿದೆ. ಆದರೆ ಇದರ ಮಾಹಿತಿ ಹೊರ ಪ್ರಪಂಚಕ್ಕೆ ಗೊತ್ತಿಲ್ಲ. ಈ ಬಗ್ಗೆ ಇಲಾಖೆ ಹಾಗೂ ಸರ್ಕಾರ ನೈಸರ್ಗಿಕವಾಗಿ ಸಿಗುವ ಇಂತಹ ಪ್ರವಾಸಿ ಸ್ಥಳಗಳ ಬಗ್ಗೆ ಒಂದಿಷ್ಟು ಮಾಹಿತಿ ದಾಖಲಿಸಿದರೆ ಇಂತಹ ಅನೇಕ ತೆರೆಮರೆಯ ಗ್ರಾಮಗಳಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ ಸಾಧ್ಯವಾಗಬಹುದು. ಈ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಕಾರ್ಯಪ್ರವರ್ತರಾಗಬೇಕಿದೆ.

— ಲಿಮೋನ್, ಸ್ಥಳೀಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net