ಕಿರುಸೇತುವೆ ಶಿಥಿಲಗೊಂಡು ಅಪಾಯಕ್ಕೆ ಆಹ್ವಾನ

ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿರುವ ಎಣ್ಣೆಹೊಳೆ- ಹಟ್ಟೆ ಪುಂಚಮಾರು ಸಂಪರ್ಕ ಸೇತುವೆ.
ಬಿರುಕು ಬಿಟ್ಟು ಅಪಾಯಕಾರಿ ಸ್ಥಿತಿಯಲ್ಲಿರುವ ಎಣ್ಣೆಹೊಳೆ- ಹಟ್ಟೆ ಪುಂಚಮಾರು ಸಂಪರ್ಕ ಸೇತುವೆ.
Published on
ಹರಿಪ್ರಸಾದ್ ನಂದಳಿಕೆ ಕಾರ್ಕಳ
ಎರಡು ಗ್ರಾಮಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಕಿರುಸೇತುವೆಯೊಂದು ತಳಭಾಗದಲ್ಲಿ ಬಿರುಕು ಬಿಟ್ಟು ಕುಸಿಯುವ ಭೀತಿ ಎದುರಾಗಿದೆ. ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಎಣ್ಣೆಹೊಳೆ- ಹಟ್ಟೆ ಪುಂಚಮಾರು ಸಂಪರ್ಕದ ಕಿರುಸೇತುವೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದ್ದು, ಗ್ರಾಮಸ್ಥರು ನಿತ್ಯವೂ ಜೀವಭಯದಲ್ಲೇ ಸಂಚರಿಸುವಂತಹ ಅನಿವಾರ್ಯತೆ ಎದುರಾಗಿದೆ.
ಹಲವು ವರ್ಷಗಳ ಹಿಂದೆ 8 ಲಕ್ಷ ರೂ. ವೆಚ್ಚದಲ್ಲಿ ಕಿರುಸೇತುವೆ ನಿರ್ಮಾಣಗೊಂಡಿದ್ದು, ಕೆಲವು ವರ್ಷಗಳ ಹಿಂದೆ ಈ ಸೇತುವೆಯ ತಳಭಾಗದಲ್ಲಿ ಬಿರುಕುಬಿಟ್ಟು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಿತ್ಯ ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಉದ್ಯೋಗಕ್ಕೆ ಹೋಗುವವರು ಇದೇ ಸೇತುವೆಯನ್ನು ಬಳಸುತ್ತಿದ್ದಾರೆ.
ಉದ್ಯಮಿಯಿಂದ ನಿರ್ಮಾಣ: 27 ಕುಟುಂಬಗಳಿರುವ ಗ್ರಾಮಕ್ಕೆ ಈ ಸೇತುವೆಯೇ ಸಂಚಾರದ ಜೀವನಾಡಿಯಾಗಿದೆ. ಒಂಬತ್ತು ವರ್ಷಗಳ ಹಿಂದೆ ಸ್ಥಳೀಯ ಉದ್ಯಮಿಯೊಬ್ಬರು ಸ್ವಂತ ಖರ್ಚಿನಲ್ಲಿ ಈ ಕಿರು ಸೇತುವೆ ನಿರ್ಮಿಸಿದ್ದರು. ಈ ವರ್ಷ ಸುರಿದ ಭಾರಿ ಮಳೆಯಿಂದ ಸೇತುವೆ ಕೆಳಭಾಗದ ಪೈಪುಗಳಲ್ಲಿ ಕಸ ಹಾಗೂ ಮರದ ದಿಮ್ಮಿಗಳು ಸಿಲುಕಿಕೊಂಡಿವೆ. ಇದರಿಂದ ನೀರಿನ ಒತ್ತಡ ಹೆಚ್ಚಾಗಿ ಸೇತುವೆಯ ಎಡಪಾರ್ಶ್ವದ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದೆ. ಕಾಂಕ್ರೀಟ್ ಅಡಿಪಾಯ ಬಹುತೇಕ ಬಿರುಕು ಬಿಟ್ಟಿದೆ. ಸೇತುವೆಯ ಮೇಲ್ಮೈನಲ್ಲಿಯೂ ಬಿರುಕುಗಳು ಕಾಣಲಾರಂಬಿಸಿದ್ದು, ವಾಹನಗಳು ಸಂಚರಿಸುವಾಗ ಸೇತುವೆ ಅಲುಗಾಡುತ್ತಿದೆ.
ಪ್ರಸ್ತುತ ಅಪಾಯದಲ್ಲಿರುವ ಎಣ್ಣೆಹೊಳೆ- ಹಟ್ಟೆ ಪುಂಚಮಾರು ಸೇತುವೆ ಮಾರ್ಗಕ್ಕೆ ಪರ್ಯಾಯವಾಗಿ ಇರುವ ರಸ್ತೆಯಲ್ಲಿ 7 ಕಿ.ಮೀ. ದೂರ ಕ್ರಮಿಸಬೇಕಾದ ಅನಿವಾರ್ಯತೆ ಇದ್ದು, ಈ ರಸ್ತೆಯೂ ಡಾಂಬರು ಕಾಣದೆ ದಶಕಗಳೇ ಕಳೆದಿವೆ. ಇತ್ತ ಶಿಥಿಲ ಸೇತುವೆ ಮೇಲೆ ಸಂಚರಿಸಲಾಗದೆ ಅತ್ತ ದುರ್ಗಮವಾದ ಪರ್ಯಾಯ ರಸ್ತೆಯಲ್ಲಿ ಸುತ್ತಿಬಳಸಿ ಸಂಚರಿಸುವ ದುಸ್ಥಿತಿ ಎರಡೂ ಗ್ರಾಮಗಳ ಗ್ರಾಮಸ್ಥರದ್ದಾಗಿದೆ.

ಕೃಷಿ ಕಾರ್ಯಕ್ಕೂ ಸಮಸ್ಯೆ

ಶಿಥಿಲಗೊಂಡ ಸೇತುವೆಯಿಂದ ಪ್ರಮುಖವಾಗಿ ಕೃಷಿಕರು ತೊಂದರೆ ಎದುರಿಸುತ್ತಿದ್ದಾರೆ. ಭತ್ತದ ಫಸಲು ಕಟಾವಿಗೆ ಸಿದ್ಧವಿದ್ದು, ಆದರೆ ಶಿಥಿಲ ಸೇತುವೆ ಮೇಲೆ ಭತ್ತದ ಕಟಾವು ಯಂತ್ರದ ಸಂಚಾರ ಅಸಾಧ್ಯವಾಗಿರುವುದರಿಂದ ಕೃಷಿಕರು ಸಂದಿಗದ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ. ಕೆಲವು ಕಡೆಯಲ್ಲಿ ಮಾನವ ಸಂಪನ್ಮೂಲ ಬಳಸಿಕೊಂಡು ಕಟಾವು ಕಾರ್ಯ ನಡೆಯುತ್ತಿದ್ದರೂ ಅಪಾಯಕಾರಿಯಾಗಿರುವ ಈ ಸೇತುವೆಯಲ್ಲಿ ಗಿರಣಿಗೆ ಭತ್ತ ಸಾಗಿಸುವುದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.
"

ದಶಕಗಳಿಂದ ಈ ಭಾಗದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿದೆ. ಶಿಥಿಲ ಸೇತುವೆ ಮೇಲೆ ಅಪಾಯವನ್ನು ಮೈಮೇಲೆ ಎಳೆದುಕೊಂಡು ಎರಡೂ ಗ್ರಾಮಸ್ಥರು ನಿತ್ಯವೂ ಸಂಚರಿಸುತ್ತಾರೆ. ಹಠಾತ್ ಅವಘಡ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಿದೆ.

ಸೇತುವೆಯ ಅಪಾಯಕಾರಿ ಸ್ಥಿತಿಯ ಬಗ್ಗೆ ಕಾರ್ಕಳ ತಹಸಿಲ್ದಾರ್, ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಪಂಚಾಯಿತಿಗೆ ಪತ್ರ ಬರೆಯಲಾಗಿದೆ. ಪ್ರಾಕೃತಿಕ ವಿಕೋಪದಡಿಯಲ್ಲಿ ಪರಿಹಾರ ನಿಧಿಯಿಂದ ಸೇತುವೆ ದುರಸ್ತಿ ಮಾಡಲು ಪ್ರಸ್ತಾಪವನೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಇಲಾಖೆ ಸ್ಪಂದಿಸುವ ಭರವಸೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net