ಇರುವೈಲು ಶಾಲೆ ಅಂಚಿನವರೆಗೂ ಅಗೆತ

ಇರುವೈಲು ಶಾಲೆಯ ಅಂಚಿನವರೆಗೂ ಮಣ್ಣು ಅಗೆದಿರುವುದು
ಇರುವೈಲು ಶಾಲೆಯ ಅಂಚಿನವರೆಗೂ ಮಣ್ಣು ಅಗೆದಿರುವುದು
Published on
ಮೂಡುಬಿದಿರೆ: ಶತಮಾನೋತ್ಸವದ ಹೆಗ್ಗಳಿಕೆಯ ಇರುವೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಜೆಸಿಬಿ ಮೂಲಕ ಭಾರಿ ಪ್ರಮಾಣದಲ್ಲಿ ಅಗೆತ ನಡೆಸಿರುವುದು ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕಾಲುದಾರಿಯ ಅಂಚಿನವರೆಗೂ ಅಗೆದಿರುವುದರಿಂದ ಮಳೆಗಾಲದಲ್ಲಿ ದಾರಿ ಕುಸಿಯುವ ಅಪಾಯ ಎದುರಾಗಿದೆ.
ಕಿಟ್ಟುಬೆಟ್ಟು ಅರ್ಬಿ, ಕಾಳೂರು, ಕಟ್ಟಣಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದೇ ದಾರಿಯನ್ನು ನಿತ್ಯ ಬಳಸುತ್ತಿದ್ದು, ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿವೆ. ಶಾಲೆಗೆ ಸೇರಿದ ಸರ್ಕಾರಿ ಬಾವಿಯ ಸಮೀಪದವರೆಗೂ ಅಗೆತ ನಡೆಸಿರುವುದರಿಂದ ಮಳೆನೀರು ಹರಿದು ಮಣ್ಣು ಜರಿದು ಬೀಳುವ ಹಾಗೂ ಶಾಲಾ ಆವರಣ ಗೋಡೆಗೆ ಹಾನಿಯಾಗುವ ಸಾಧ್ಯತೆ ಇದೆ.
ಅಗೆತ ಕಾರ್ಯಕ್ಕೂ ಮುನ್ನ ಶಾಲಾ ಆಡಳಿತ, ಎಸ್‌ಡಿಎಂಸಿ ಅಥವಾ ಶಿಕ್ಷಣ ಇಲಾಖೆಯ ಗಮನಕ್ಕೆ ವಿಷಯ ತರಲಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಕ್ಷಣ ರಕ್ಷಣಾತ್ಮಕ ಕ್ರಮ ಕೈಗೊಳ್ಳದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸುನೀಲ್ ಕುಮಾರ್ ಎಚ್ಚರಿಸಿದ್ದಾರೆ.
ರಾತ್ರಿ ವೇಳೆ ಬೀದಿದೀಪಗಳ ವ್ಯವಸ್ಥೆ ಇಲ್ಲದ ಕಾರಣ ಅಪಾಯ ಮತ್ತಷ್ಟು ಹೆಚ್ಚಿದೆ ಎಂದು ಸ್ಥಳೀಯ ನಿವಾಸಿ ಸೋಮಶೇಖರ್ ಸಾಲ್ಯಾನ್ ತಿಳಿಸಿದ್ದಾರೆ. ಸಂಬಂಧಿಸಿದ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net