ಶಾಲೆಯ ತೋಟ ಫಸಲಿಗೆ ರೆಡಿ

 ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದಿಂದ ನಿರ್ಮಾಣಗೊಂಡಿರುವ ಅಡಿಕೆ ತೋಟ.
ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದಿಂದ ನಿರ್ಮಾಣಗೊಂಡಿರುವ ಅಡಿಕೆ ತೋಟ.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಮೂರು ವರ್ಷಗಳ ಹಿಂದೆ ಶಾಲೆಯ ಹಿಂಭಾಗದ ಖಾಲಿ ಸ್ಥಳದಲ್ಲಿ ನೆಟ್ಟು ಬೆಳೆಸಿದ್ದ ಅಡಿಕೆ ಗಿಡಗಳು ಇಂದು ಫಲ ನೀಡುವ ಹಂತಕ್ಕೆ ಬೆಳೆದು ನಿಂತಿದೆ. ವಿದ್ಯಾರ್ಥಿಗಳಿಗೆ ಕೃಷಿ ಪಾಠದ ಜತೆಗೆ ಶಾಲಾ ಪರಿಸರದಲ್ಲಿ ಕಲಿಕೆಗೆ ಪೂರಕವಾಗುವ ಸುಂದರವಾದ ಹಸಿರು ವಾತಾವರಣ, ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಆದಾಯದ ಮೂಲವಾಗಿಯೂ ಈ ಅಡಿಕೆ ತೋಟ ಉಪಯೋಗವಾಗಲಿದೆ. ಬಂಟ್ವಾಳ ತಾಲೂಕಿನ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಅಡಿಕೆ ತೋಟವಿದ್ದು ಶಾಲೆಯ ಹಳೇ ವಿದ್ಯಾರ್ಥಿ ಸಂಘ ತೋಟವನ್ನು ಶಾಲೆಗಾಗಿ ನಿರ್ಮಿಸಿಕೊಟ್ಟಿದೆ.
ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಮುಂದಿನ ವರ್ಷ(2027) ಸುವರ್ಣ ಸಂಭ್ರಮ ಆಚರಿಸಲಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಅನೇಕ ಮಂದಿ ಸಾಧಕರು ಈ ಶಾಲೆಯ ಹಳೇ ವಿದ್ಯಾರ್ಥಿಗಳು ಎನ್ನುವುದು ಈ ಸರ್ಕಾರಿ ಶಾಲೆಗಿರುವ ಹೆಮ್ಮೆ. ಹಳೇ ವಿದ್ಯಾರ್ಥಿಗಳಾಗಿ ಶಾಲೆಗೆ ಏನಾದರೊಂದು ಶಾಶ್ವತ ಆದಾಯದ ಮೂಲ ಒದಗಿಸಿಕೊಡಬೇಕೆಂದು ಸಂಘದಲ್ಲಿ ಚರ್ಚೆಯಾದಾಗ ಹಳೇ ವಿದ್ಯಾರ್ಥಿಗಳಿಗೆ ತೋಚಿದ್ದು ಅಡಿಕೆ ತೋಟ ನಿರ್ಮಾಣ. 2023ರಲ್ಲಿ ಶಾಲೆಯ ಹಿಂಭಾಗದಲ್ಲಿರುವ 60 ಸೆಂಟ್ಸ್ ಜಾಗದಲ್ಲಿ ಸಂಘದ ಮೂಲಕ ತೋಟ ನಿರ್ಮಾಣದ ಕಾಮಗಾರಿ ಆರಂಭಿಸಿ 130 ಅಡಿಕೆ ಗಿಡಗಳನ್ನು ನಾಟಿ ಮಾಡಲಾಗಿತ್ತು. ಹಳೇ ವಿದ್ಯಾರ್ಥಿ ಸಂಘವೇ ತೋಟ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡು ಪಾಲನೆ ಮಾಡಿಕೊಂಡು ಬರುತ್ತಿದೆ. ಈಗಲೇ ಒಂದೆರಡು ಗಿಡಗಳು ಹಿಂಗಾರ ಬಿಟ್ಟಿದ್ದು ಮುಂದಿನ ವರ್ಷಕ್ಕೆ ಅಂದರೆ ಶಾಲೆ ಸುವರ್ಣ ಸಂಭ್ರಮ ಆಚರಿಸುವ ವರ್ಷಕ್ಕೆ ಫಲ ನೀಡುವ ನಿರೀಕ್ಷೆ ಹುಟ್ಟಿಸಿದೆ.
ರಾಮಪ್ರಸಾದ್ ರೈ ತಿರುವಾಜೆ ಅಧ್ಯಕ್ಷರಾಗಿರುವ ಕ್ರಿಯಾಶೀಲ ಹಳೇ ವಿದ್ಯಾರ್ಥಿ ಸಂಘ ಈ ಶಾಲೆಯ ಆಶೋತ್ತರಗಳನ್ನು ಗಮನಿಸುತ್ತಿದೆ. ಶಾಲೆಗಾಗಿ ತೋಟ ನಿರ್ಮಾಣ ಕಾರ್ಯ ಮಾಡುವ ಸಂದರ್ಭ ನೆಲಸಮತಟ್ಟು, ಕೊಳವೆ ಬಾವಿ, ಪಂಪ್ ಸೆಟ್ ಹಾಗೂ ಸ್ಪ್ರಿಂಕ್ಲರ್ ಅಳವಡಿಕೆಗೆ ಸಂಘ 3.69 ಲಕ್ಷ ರೂ. ಖರ್ಚು ಮಾಡಿದೆ. ಮಾತ್ರವಲ್ಲದೆ ಗಿಡಗಳಿಗೆ ಸಾವಯವ ಗೊಬ್ಬರ, ಹುಲ್ಲು ಕಟಾವು ಮೊದಲಾದ ನಿರ್ವಹಣೆಯ ಕೆಲಸವನ್ನು ಹಳೇ ವಿದ್ಯಾರ್ಥಿ ಸಂಘ ನಿಭಾಯಿಸುತ್ತಿದೆ. ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಸದಾ ಸಹಕಾರ ನೀಡುತ್ತಾ, ಕ್ರಿಯಾಶೀಲವಾಗಿರುವ ಈಗಿನ ಹಳೇ ವಿದ್ಯಾರ್ಥಿ ಸಂಘದ 5 ವರ್ಷದ ಅಧಿಕಾರಾವಧಿ ಮುಂದಿನ ವರ್ಷಕ್ಕೆ ಪೂರ್ಣಗೊಳ್ಳಲಿದ್ದು ಬೇರೆ-ಬೇರೆ ಕಾರ್ಯಕ್ರಮಗಳ ಮೂಲಕ ಸಂಗ್ರಹಗೊಂಡಿರುವ 6 ಲಕ್ಷ ರೂ. ಹಣ ಹಾಗೂ ತೋಟದ ಜವಾಬ್ದಾರಿಯನ್ನು ಸುವರ್ಣ ಮಹೋತ್ಸವದ ಸಂದರ್ಭ ಶಾಲೆಯ ಎಸ್‌ಡಿಎಂಸಿ ಅಥವಾ ಮುಂದೆ ಆಯ್ಕೆಯಾಗುವ ಹಳೇ ವಿದ್ಯಾರ್ಥಿ ಸಂಘಕ್ಕೆ ಹಸ್ತಾಂತರಿಸುವುದಾಗಿ ಸಂಘದ ಅಧ್ಯಕ್ಷ ರಾಮಪ್ರಸಾದ್ ರೈ ತಿರುವಾಜೆ ತಿಳಿಸಿದ್ದಾರೆ.

ಸುವರ್ಣ ಮಹೋತ್ಸವದ ಸಂಭ್ರಮ

49 ವರ್ಷಗಳ ಸಾರ್ಥಕ ಪಯಣ ಸಾಗಿಸಿರುವ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಮುಂದಿನ ವರ್ಷಕ್ಕೆ ಸುವರ್ಣ ಸಂಭ್ರಮ ಆಚರಿಸಲಿದೆ. ಈ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಸಮಾಜದ ಉನ್ನತ ಸ್ತರದಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸಹಕಾರದಿಂದ ಶಾಲೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಏರುಗತಿಯಲ್ಲಿ ಸಾಗುತ್ತಿದೆ.

ಶಾಲೆಯಲ್ಲಿ ತೋಟ ನಿರ್ಮಾಣ ಕಾರ್ಯ ಸುಲಭವೇನಲ್ಲ. ನಿರ್ಮಾಣದಿಂದ ತೊಡಗಿ ನಿರ್ವಹಣೆ ತನಕ ಎಲ್ಲ ಜವಾಬ್ದಾರಿ ವಹಿಸಿ ಮಂಚಿ ಕೊಳ್ನಾಡು ಸರ್ಕಾರಿ ಪ್ರೌಢಶಾಲೆಗೆ ಆದಾಯ ಮೂಲ ಮಾಡಿಕೊಟ್ಟಿರುವುದು ಶ್ಲಾಘನೀಯ. ಇದು ಹಳೇ ವಿದ್ಯಾರ್ಥಿಗಳ ಶಕ್ತಿ ಏನೆಂಬುದನ್ನು ತೋರಿಸಿಕೊಡುತ್ತದೆ.

— ಮಾಲತಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ

2023ರಲ್ಲಿ ಹಳೇ ವಿದ್ಯಾರ್ಥಿ ಸಂಘದ ಮೂಲಕ ಅಡಿಕೆ ತೋಟ ನಿರ್ಮಿಸಿ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದೇವೆ. ಗಿಡಗಳು ಉತ್ತಮವಾಗಿ ಬೆಳೆದಿದ್ದು ಮುಂದಿನ ವರ್ಷದಿಂದ ಫಸಲು ಬರುವ ನಿರೀಕ್ಷೆಯಿದೆ

— ರಾಮಪ್ರಸಾದ್ ರೈ ತಿರುವಾಜೆ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ, ಸರ್ಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net