ನಾಮಫಲಕದಲ್ಲಿ ಉಪ್ಪಿನಂಗಡಿ ಮಾಯ!

ಉಪ್ಪಿನಂಗಡಿಯಲ್ಲಿ ನಾಮಲಕವಿದ್ದ ಪ್ರದೇಶ.
ಉಪ್ಪಿನಂಗಡಿಯಲ್ಲಿ ನಾಮಲಕವಿದ್ದ ಪ್ರದೇಶ.
Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಥ ಕಾಮಗಾರಿ ಕೊನೆಯ ಹಂತ ತಲುಪುತ್ತಿದೆ. ಆದರೆ ಕಾಮಗಾರಿ ವೇಳೆ ಹೆದ್ದಾರಿಗೆ ಅಳವಡಿಸಿರುವ ಊರುಗಳಿಗೆ ದಾರಿ ತೋರುವ ನಾಮಲಕಗಳಲ್ಲಿ ಉಪ್ಪಿನಂಗಡಿ ಹೆಸರು ನಾಪತ್ತೆಯಾಗಿದೆ.
ಇದರಿಂದ ಹೆದ್ದಾರಿಯಲ್ಲಿ ಸಾಗುವ ಪ್ರಯಾಣಿಕರಿಗೆ ಉಪ್ಪಿನಂಗಡಿ ಪೇಟೆಯಲ್ಲಿ ಮಾಡಿರುವ ಎತ್ತರಿಸಿದ ರಸ್ತೆ ಕಾಮಗಾರಿಯಿಂದಾಗಿ ಉಪ್ಪಿನಂಗಡಿ ಬಂದರೂ ಗೊತ್ತಾಗದೆ ಗೊಂದಲಕ್ಕೀಡಾಗುವಂತಾಗಿದೆ.
ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಕಡಬ ತಾಲೂಕುಗಳ ಹಲವು ಗ್ರಾಮಗಳಿಗೆ ಪ್ರಮುಖ ವ್ಯವಹಾರ ಕೇಂದ್ರವಾಗಿ ಉಪ್ಪಿನಂಗಡಿಯೇ ಆಗಿದ್ದು, ಪುಣ್ಯಕ್ಷೇತ್ರಗಳಿಗೂ ಸಂಪರ್ಕ ಕೊಂಡಿಯಾಗುವ ಮೂಲಕ ಪ್ರಸಿದ್ಧಿಯಾಗಿದೆ. ದಕ್ಷಿಣ ಕಾಶಿಯೆಂದೇ ಹೆಸರಾಗಿರುವ ಉಪ್ಪಿನಂಗಡಿಗೆ ಸ್ಥಳೀಯರು ಮಾತ್ರವಲ್ಲದೆ ಪರ ಊರಿನ ನೂರಾರು ಭಕ್ತ ಬರುತ್ತಿರುತ್ತಾರೆ. ಹೆದ್ದಾರಿ ಪ್ರಾಧಿಕಾರ ಅಳವಡಿಸಿರುವ ನಾಮಫಲಕದಲ್ಲಿ ನೇರವಾಗಿ ಬೆಂಗಳೂರು ಮಾರ್ಗವನ್ನು ತೋರಿಸುವುದರಿಂದ ಉಪ್ಪಿನಂಗಡಿ ದಾಟುವುದೇ ಪ್ರಯಾಣಿಕರ ಅರಿವಿಗೆ ಬರುವುದಿಲ್ಲ. ಎಷ್ಟೋ ದೂರ ಹೋಗಿ ವಾಪಸ್ ಬರುವಂಥ ಸ್ಥಿತಿ ನಿರ್ಮಾಣವಾಗಿದೆ. ಉಪ್ಪಿನಂಗಡಿ ವ್ಯಾಪ್ತಿಗೆ ಒಳಪಟ್ಟ ಹೆದ್ದಾರಿ ಮಾರ್ಗದ ಆಯಕಟ್ಟಿನ ಪ್ರದೇಶಗಳಲ್ಲಿ ಊರುಗಳ ನಾಮಲಕಗಳನ್ನು ತಕ್ಷಣವೇ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬ್ರಿಟಿಷರ ಕಾಲದ ಪ್ರಮುಖ ಕೇಂದ್ರ

ಭಾರತದಲ್ಲಿ ಬ್ರಿಟಿಷರ ಆಡಳಿತವಿದ್ದ ಸಂದರ್ಭ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯು ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ತಾಣವಾಗಿ ಪ್ರಸಿದ್ಧಿಯಾಗಿದೆ. ರಸ್ತೆಗಳಿಲ್ಲದ ಅಂದಿನ ದಿನಗಳಲ್ಲಿ ನದಿ ಮಾರ್ಗವಾಗಿ ದೋಣಿಯಲ್ಲಿ ಸರಕುಗಳ ಸಾಗಾಟ ನಡೆಯುತ್ತಿತ್ತು. ಆದರೆ ಸತತ ನೆರೆ ಉಂಟಾಗಿದ್ದರಿಂದ ವ್ಯಾಪಾರ ಕೇಂದ್ರಗಳು ಹಾಗೂ ತಾಲೂಕು ಕೇಂದ್ರವನ್ನು ಉಪ್ಪಿನಂಗಡಿಯಿಂದ ಪುತ್ತೂರಿಗೆ ಸ್ಥಳಾಂತರಿಸಲಾಯಿತು. ಆದರೆ ಇಂದಿಗೂ ಉಪ್ಪಿನಂಗಡಿ ಪ್ರಮುಖ ಕೇಂದ್ರವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net