ರಸ್ತೆಯೇ ನಿಲ್ದಾಣ, ಅಂಗಡಿಗಳೇ ತಂಗುದಾಣ

 ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಸ್‌ಗಳು ನಿಂತಿರುವುದು.
ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಬಸ್‌ಗಳು ನಿಂತಿರುವುದು.
Published on
ಸಂದೀಪ್ ಸಾಲ್ಯಾನ್ ಬಂಟ್ವಾಳ
ಬಿ.ಸಿ.ರೋಡಿನಲ್ಲಿ ಬಸ್ಸುಗಳಿಗೆ ರಸ್ತೆಯೇ ನಿಲ್ದಾಣ, ರಸ್ತೆ ಪಕ್ಕದ ಫುಟ್‌ಪಾತ್, ಅಂಗಡಿಗಳ ಮುಂಭಾಗವೇ ಪ್ರಯಾಣಿಕರ ತಂಗುದಾಣ! ಮಳೆಯಿರಲಿ, ಬಿಸಿಲಿರಲಿ ಪ್ರಯಾಣಿಕರು ರಸ್ತೆಯಲ್ಲೇ ನಿಂತು ಬಸ್ಸುಗಳಿಗೆ ಕಾಯಬೇಕು, ಬಸ್ಸುಗಳೂ ಅಷ್ಟೇ ರಾಷ್ಟ್ರೀಯ ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು. ಹಲವು ವರ್ಷದಿಂದ ಈ ಅವ್ಯವಸ್ಥೆ ಬಿ.ಸಿ.ರೋಡಿನಲ್ಲಿ ಪ್ರಯಾಣಿಕರನ್ನು ಕಾಡುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸ್ಥಳೀಯಾಡಳಿತ ವಿಫಲವಾಗಿದೆ.
ಮಂಗಳೂರಿನಿಂದ ಬಿ.ಸಿ.ರೋಡಿಗೆ ಬರುವ ಕೆಎಸ್‌ಆರ್ ಟಿಸಿ ಹಾಗೂ ಖಾಸಗಿ ಬಸ್ಸುಗಳು ನಿಲುಗಡೆಯಾಗಲು ರಾಷ್ಟ್ರೀಯ ಹೆದ್ದಾರಿಯನ್ನೇ ಅವಲಂಬಿಸಿವೆ. ಏಕಕಾಲದಲ್ಲಿ ನಾಲ್ಕೈದು ಬಸ್ಸುಗಳು ರಸ್ತೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅಡ್ಡಾದಿಡ್ಡಿ ನಿಂತರೆ ವಾಹನ ಸಂಚಾರ ಅಸ್ತವ್ಯಸ್ತವಾಗುತ್ತದೆ. ಬಿ.ಸಿ.ರೋಡಿನಲ್ಲಿರುವ ಚತುಷ್ಪಥ ಮೇಲ್ಸೇತುವೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ಅವಕಾಶವಿರುವುದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ವಾಹನಗಳು ಇದೇ ರಸ್ತೆಯಲ್ಲಿ ಬರುತ್ತವೆ. ಇಲ್ಲಿ ಹೆದ್ದಾರಿಯಲ್ಲಿಯೇ ಬಸ್ಸು ನಿಲ್ದಾಣವಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಅಂಗಡಿಗಳೇ ಆಶ್ರಯ

ಬಿ.ಸಿ.ರೋಡಿನಲ್ಲಿ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ನಿಲ್ಲಲು ಲಯನ್ಸ್ ಕ್ಲಬ್ ನಿರ್ಮಿಸಿದ ಸಣ್ಣ ತಂಗುದಾಣವಿದೆ. ಹೆಚ್ಚೆಂದರೆ ಆರೇಳು ಮಂದಿ ಅದರಲ್ಲಿ ಕುಳಿತುಕೊಳ್ಳಬಹುದು. ಉಳಿದ ಪ್ರಯಾಣಿಕರಿಗೆ ಮಳೆ, ಬಿಸಿಲಿಗೆ ಪಕ್ಕದ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳೇ ಆಶ್ರಯ. ಅಂಗಡಿಗಳ ವ್ಯಾಪಾರಿಗಳಿಗೆ ಪ್ರಯಾಣಿಕರನ್ನು ಆಚೆ ನಿಲ್ಲಿ, ಈಚೆ ನಿಲ್ಲಿ, ಇಲ್ಲಿ ನಿಲ್ಲಬೇಡಿ ಎಂದು ಹೇಳುವುದೇ ಕೆಲಸವಾಗಿದೆ. ಪ್ರಯಾಣಿಕ ಯಾರು? ಗ್ರಾಹಕ ಯಾರು? ಎಂದು ತಿಳಿಯದೆ ವ್ಯಾಪಾರಿಗಳು, ಪ್ರಯಾಣಿಕರ ಮಧ್ಯೆ ಕೆಲವೊಮ್ಮೆ ಮಾತಿನ ಚಕಮಕಿ ನಡೆಯುತ್ತದೆ.

ಅಪಾಯಕಾರಿ ಫುಟ್‌ಪಾತ್

ರಸ್ತೆ ಪಕ್ಕ ಇರುವ ಫುಟ್‌ಪಾತ್ ಸದ್ಯಕ್ಕೆ ಇಲ್ಲಿ ಪ್ರಯಾಣಿಕರ ಆಶ್ರಯಕ್ಕೆ ಇರುವ ಸ್ಥಳ. ಫುಟ್‌ಪಾತ್‌ನ ಒಂದು ಭಾಗಕ್ಕೆ ಕಬ್ಬಿಣದ ಗಾರ್ಡ್ ಅಳವಡಿಸದೆ ಇರುವುದು ಅಪಾಯಕ್ಕೆ ಕಾರಣವಾಗಿದೆ. ಇತ್ತೀಚೆಗೆ ಮಗು ಫುಟ್‌ಪಾತ್‌ನಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿತ್ತು. ತಕ್ಷಣ ಇಲ್ಲಿ ಗಾರ್ಡ್ ಅಳವಡಿಸದಿದ್ದರೆ ಇನ್ನಷ್ಟು ಅಪಾಯಗಳು ಸಂಭವಿಸುವ ಸಾಧ್ಯತೆ ಇದೆ.

ಬೇಕಿದೆ ಗುಣಮಟ್ಟದ ಸಿಸಿ ಕ್ಯಾಮರಾ

ಇಲ್ಲಿ ಹಿಂದೆ ಐದು ಸಿಸಿ ಕ್ಯಾಮರಾ ಇತ್ತು. ಈಗ ಎರಡು ಮಾತ್ರ ಇದೆ. ಇದು ಸುಸ್ಥಿತಿಯಲ್ಲಿದೆಯೇ ಎನ್ನುವುದು ಯಾರಿಗೂ ಗೊತ್ತಿಲ್ಲ. ಪ್ರಯಾಣಿಕರು ಗುಂಪಾಗಿ ಬಸ್ಸುಗಳಿಗೆ ಹತ್ತುವಾಗ ಹಲವು ಬಾರಿ ಪಿಕ್‌ಪಾಕೆಟ್ ನಡೆದ ಉದಾಹರಣೆಯಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜನಜಂಗುಳಿಯಿರುವುದರಿಂದ ಪಿಕ್‌ಪಾಕೆಟ್‌ನಂತಹ ಘಟನೆಗಳು ಸಾಮಾನ್ಯ.

ಜಾಹೀರಾತು ವ್ಯಾಮೋಹ

ಬಂಟ್ವಾಳ ಲಯನ್ಸ್ ಕ್ಲಬ್ ತನ್ನ ಸೇವಾ ಯೋಜನೆಯಾಗಿ ಪ್ರಯಾಣಿಕರಿಗಾಗಿ ತಂಗುದಾಣ ನಿರ್ಮಿಸಿದರೆ ಪುರಸಭೆ ಅದರ ಮೇಲೆ ಖಾಸಗಿ ಸಂಸ್ಥೆಯ ಜಾಹೀರಾತು ಅಳವಡಿಸಿದೆ. ಮಳೆ ಬಿಸಿಲಿನಲ್ಲಿ ಬಸ್ಸಿಗೆ ಕಾಯುವ ಪ್ರಯಾಣಿಕರಿಗೆ ವ್ಯವಸ್ಥಿತವಾದ ಶೆಲ್ಟರ್ ನಿರ್ಮಿಸಲು ಆಸಕ್ತಿ ತೋರದ ಪುರಸಭೆಗೆ ಖಾಸಗಿ ಜಾಹೀರಾತಿನ ವ್ಯಾಮೋಹ ಯಾಕೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೆಯ ನಿಲ್ದಾಣವೇ ಚೆನ್ನಾಗಿತ್ತು

ಬಿ.ಸಿ.ರೋಡಿನಲ್ಲಿ ಹಿಂದೆ ಹಳೆಯ ಬಸ್ಸು ನಿಲ್ದಾಣದಲ್ಲಿ ಬಸ್‌ಗಳ ನಿಲುಗಡೆಗೆ ಇದ್ದ ವ್ಯವಸ್ಥೆ ಉತ್ತಮವಾಗಿತ್ತು. ನಿಲ್ದಾಣದ ಮಧ್ಯದಲ್ಲಿ ಹೆಂಚಿನ ಛಾವಣಿಯ ಪ್ರಯಾಣಿಕರ ತಂಗುದಾಣ, ಹಿಂಭಾಗದಲ್ಲಿ ಗ್ರಾಮೀಣ ಭಾಗಗಳಿಗೆ ಹೋಗುವ ಸರ್ವೀಸ್ ಬಸ್‌ಗಳಿಗೆ ಹಾಗೂ ಮುಂಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ನಿಲುಗಡೆಗೆ ಅವಕಾಶವಿತ್ತು. ಬಳಿಕ ಪುರಸಭೆ ಆದಾಯದ ಉದ್ದೇಶದಿಂದ ಹಳೇ ನಿಲ್ದಾಣ ಕೆಡವಿ ವಾಣಿಜ್ಯ ಸಂಕೀರ್ಣದೊಂದಿಗೆ ಬಸ್ ನಿಲ್ದಾಣ ನಿರ್ಮಿಸಿದ ಬಳಿಕ ಅವ್ಯವಸ್ಥೆ ಆರಂಭಗೊಂಡಿದೆ.

ತೆರವಾಗದ ಮಣ್ಣಿನ ದಿಣ್ಣೆ

ಗೈಲ್ ಇಂಡಿಯಾ ಕಂಪನಿಯ ಪೈಪ್‌ಲೈನ್ ಕಾಮಗಾರಿಯನ್ನು ಇತ್ತೀಚೆಗೆ ಬಿ.ಸಿ.ರೋಡಿನಲ್ಲಿ ನಡೆಸಲಾಗಿದೆ. ಬಳಿಕ ಮಣ್ಣಿನ ದಿಬ್ಬವೊಂದು ಬಸ್ ನಿಲ್ಲುವ ಸ್ಥಳದಲ್ಲೇ ಉಳಿದಿದ್ದು ಅದನ್ನು ಕಂಪನಿ ತೆರವುಗೊಳಿಸಿಲ್ಲ. ಈ ಮಣ್ಣಿನ ದಿಣ್ಣೆಯಿಂದ ಇಲ್ಲಿ ನಿಲುಗಡೆಯಾಗುವ ಬಸ್‌ಗಳಿಗೆ, ನಡೆದಾಡುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹಲವು ದಿನಗಳಿಂದ ಈ ಸಮಸ್ಯೆ ಇದ್ದರೂ ಕಂಪನಿಯಾಗಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವಾಗಲಿ, ಸ್ಥಳೀಯಾಡಳಿತವಾಗಲಿ ಇತ್ತ ಗಮನ ಹರಿಸಿಲ್ಲ.

ಬಿ.ಸಿ.ರೋಡಿನಲ್ಲಿ ಸರಿಯಾದ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಪರಿತಪಿಸುತ್ತಿದ್ದಾರೆ. ರಸ್ತೆಯಲ್ಲಿಯೇ ನಿಂತು ಬಸ್‌ಗಳಿಗೆ ಕಾಯಬೇಕು. ಪ್ರಯಾಣಿಕರು ನಿಲ್ಲುವ ಫುಟ್‌ಪಾತ್ ಕೂಡ ಅಪಾಯಕಾರಿ. ಸಿಸಿ ಕ್ಯಾಮರಾ ಸುಸ್ಥಿತಿಯಲ್ಲಿಲ್ಲ.

— - ಅಶೋಕ್ ಶೆಟ್ಟಿ ಸರಪಾಡಿ, ಯಕ್ಷಗಾನ ಕಲಾವಿದ

ಬಿ.ಸಿ.ರೋಡಿನಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಬಸ್ ನಿಲ್ದಾಣ ನಿಷ್ಪ್ರಯೋಜಕವಾಗಿದೆ. ಇದರಿಂದಾಗಿ ಪ್ರಯಾಣಿಕರು ರಸ್ತೆಯಲ್ಲಿ, ಅಂಗಡಿಗಳ ಮುಂಭಾಗದಲ್ಲಿ ನಿಲ್ಲುವಂತಾಗಿದೆ. ಬಸ್ ಮಿಸ್ ಆದರೆ ಇನ್ನೊಂದು ಬಸ್ ಬರುವವರೆಗೆ ಕುಳಿತುಕೊಳ್ಳಲು ಇಲ್ಲಿ ಜಾಗವೇ ಇಲ್ಲ.

— ಜಯಚಂದ್ರ, ಸ್ಥಳೀಯ ವ್ಯಾಪಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net