ಉಡುಪಿ: ಮಲ್ಪೆ ಸಮೀಪದ ತೊಟ್ಟಂನಲ್ಲಿ ನವೀಕೃತ ಸಂತ ಅನ್ನಮ್ಮ ಚಾಪೆಲ್ (ಕಿರು ಇಗರ್ಜಿ)ನ ಉದ್ಘಾಟನೆ ಫೆ.11ರಂದು ಸಂಜೆ 4:30ಕ್ಕೆ ನಡೆಯಲಿದೆ. ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಿ, ಪವಿತ್ರ ಬಲಿಪೂಜೆಯೊಂದಿಗೆ ಆಶೀರ್ವಚನ ನೀಡಲಿದ್ದಾರೆ.
ಬಲಿಪೂಜೆಯ ಬಳಿಕ ಜಪಸರ ಪ್ರಾರ್ಥನೆ ಜರುಗಲಿದ್ದು, ಕಿರು ಇಗರ್ಜಿಯಿಂದ ಮುಖ್ಯ ಇಗರ್ಜಿವರೆಗೆ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮದಲ್ಲಿ ಕಿರು ಇಗರ್ಜಿ ನವೀಕರಣಕ್ಕೆ ಸಹಕರಿಸದವರನ್ನು ಗೌರವಿಸಲಾಗುವುದು.
ಹಲವು ವರ್ಷದ ಹಿಂದೆ ಕೆಥೊಲಿಕ್ ಬಂಧುಗಳು ತಮ್ಮ ಆಧ್ಯಾತ್ಮಿಕ ಸೇವೆಗಳಿಗಾಗಿ ಕಲ್ಯಾಣಪುರ ಮಿಲಾಗ್ರಿಸ್ ಮಾತೆಯ ದೇವಾಲಯ ಅವಲಂಬಿಸಿದ್ದರು. 1850ರಲ್ಲಿ ತೊಟ್ಟಂ ಗ್ರಾಮದ ಮಿಗೇಲ್ ವಾಜ್ ಎಂಬವರು ತಮ್ಮ ಮನೆಯ ಸಮೀಪದಲ್ಲೇ ಒಂದು ಚಾಪೆಲ್ ನಿರ್ಮಿಸಲು ಯೋಚಿಸಿದರು. ಗೋವಾ ಧರ್ಮಕ್ಷೇತ್ರದ ಬಿಷಪ್ ಅವರ ಅನುಮತಿ ಪಡೆದು 1885ರಲ್ಲಿ ನಿರ್ಮಾಣ ಕಾರ್ಯ ಆರಂಭಿಸಿ 1905 ಮೇ 24ರಂದು ಚಾಪೆಲ್ ಉದ್ಘಾಟಿಸಿದ್ದರು.
ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಾದಂತೆ ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಪ್ರಸ್ತುತ ಧರ್ಮಗುರು ನೇತೃತ್ವದಲ್ಲಿ ಚರ್ಚ್ನ ಸದಸ್ಯರು ಹಾಗೂ ವಾಜ್ ಕುಟುಂಬದ ಸಹಕಾರದಿಂದ ಚಾಪೆಲ್ ನವೀಕರಿಸಲು ನಿರ್ಧರಿಸಲಾಯಿತು. 2024ರ ಮೇ 28ರಂದು ಹೊಸ ಕಟ್ಟಡದ ಕಾಮಗಾರಿ ಆರಂಭಗೊಂಡಿತ್ತು.
ನವೀಕೃತ ಚಾಪೆಲ್ನಲ್ಲಿ ಸುಮಾರು 250 ಜನ ಕುಳಿತುಕೊಳ್ಳಲು, ಹೊರಭಾಗದಲ್ಲಿ ಸುಮಾರು 200 ಜನರಿಗೆ ಅನುಕೂಲ ಕಲ್ಪಿಸಲಾಗಿದೆ. ಕ್ರೈಸ್ತ ಅಭಿವೃದ್ಧಿ ನಿಗಮದ ಸಹಾಯ ಪಡೆಯಲಾಗಿದ್ದು, ಹಿಂದಿನ ಬಲಿಪೀಠ ಹಾಗೆಯೇ ಉಳಿಸಿಕೊಂಡು ಸುಂದರವಾಗಿ ಚಾಪೆಲ್ ಅಲಂಕರಿಸಲಾಗಿದೆ.
"
ಸಂತ ಅನ್ನಮ್ಮ ದಯೆಯಿಂದ ಅನೇಕ ಭಕ್ತರಿಗೆ ವರ ದೊರೆತಿದ್ದು, ವಿಶೇಷವಾಗಿ ಮಹಿಳೆಯರಲ್ಲಿ ಅಪಾರ ಭಕ್ತಿ ಇದೆ. ಯಾವುದೇ ಕೆಲಸ ಆರಂಭಿಸುವ ಮೊದಲು ಅಥವಾ ಪ್ರಯಾಣಕ್ಕೂ ಮುನ್ನ ಸಂತ ಅನ್ನಮ್ಮ ಮಾತೆಗೆ ನಮಸ್ಕರಿಸುವ ಸಂಪ್ರದಾಯ ಇಲ್ಲಿನ ಜನರಲ್ಲಿ ಸಾಮಾನ್ಯವಾಗಿದೆ.