ಏಣೇಲು ಬೆಳೆಗೆ ಕೃಪೆ ತೋರದ ವರುಣ

ಭತ್ತ ಕೃಷಿ
ಭತ್ತ ಕೃಷಿ
Published on
ಕಡಬ: ವಾಣಿಜ್ಯ ಬೆಳೆಗಳಿಂದ ಅಳಿದುಳಿದ ಭತ್ತ ಕೃಷಿಗೆ ಮುಂಗಾರು ಪೂರ್ವ ಮಳೆ ಕೊರತೆಯಿಂದ ಸಂಕಷ್ಟ ಎದುರಾಗಿದೆ. ಭತ್ತದ ಕೃಷಿ ಚಟುವಟಿಕೆ ಆರಂಭಿಸಲು ಮೇ ತಿಂಗಳಲ್ಲಿ ಮುಂಗಾರುಪೂರ್ವ ಮಳೆಗೆ ಕಾಯುತ್ತಿದ್ದ ರೈತವರ್ಗ ವರುಣನ ಅವಕೃಪೆಯಿಂದ ಕಂಗಾಲಾಗಿದೆ. ಹೀಗಾಗಿ ಭತ್ತ ಕೃಷಿಕರಿಗೆ ಏಣೇಲು ಬೆಳೆ ಆರಂಭಿಸಲು ತೊಂದರೆಯಾಗಿದೆ.
ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಸಾಕಷ್ಟು ಮಳೆ ಸುರಿದು ಭತ್ತದ ಗದ್ದೆಗಳು ನೀರಿನಿಂದ ತುಂಬಿರಬೇಕಿತ್ತು. ಪ್ರಾಕೃತಿಕ ನೀರಿನ ಕೊರತೆಯಿಂದ ಏಣೇಲು ಬೆಳೆ ಆರಂಭ ಮತ್ತಷ್ಟು ತಡವಾಗಲಿದೆ. ಜೂನ್ ತಿಂಗಳ ಆರಂಭದಲ್ಲಿ ನಾಟಿ ಮಾಡಬೇಕಿದ್ದ ಭತ್ತದ ಬೆಳೆಗೆ ಇನ್ನೂ ನೇಜಿಗಳೇ ಸಿದ್ಧಗೊಂಡಿಲ್ಲ. ಭತ್ತದ ಗದ್ದೆಗಳಲ್ಲಿ ಕಳೆ ಗಿಡಗಳು ಬೆಳೆದು ನಿಂತಿವೆ. ಗದ್ದೆ ಹದ ಮಾಡುವ ಕೆಲಸಕ್ಕೂ ಮಳೆ ಬಾರದೆ ಸಮಸ್ಯೆಯಾಗಿದೆ. ಇದರಿಂದ ಮುಂದೆ ಸುಗ್ಗಿ ಬೆಳೆಗೂ ಸಮಸ್ಯೆ ಉಂಟಾಗುತ್ತದೆ. ರೈತ ವರ್ಗ ಇಂದಿಗೂ ಮಳೆಯಾಧಾರಿತ ಭತ್ತ ಬೆಳೆಯನ್ನೇ ನಂಬಿಕೊಂಡಿದೆ.
ಕೂಲಿಯಾಳುಗಳ ಕೊರತೆ ಇದ್ದರೂ ಯಂತ್ರ ನಂಬಿಕೊಂಡು ಭತ್ತದ ಬೆಳೆಗೆ ಮುನ್ನುಡಿ ಬರೆಯುವ ಕೆಲಸ ಮಾಡುತ್ತಿದ್ದಾರೆ. ಭತ್ತದ ಗದ್ದೆಗಳನ್ನು ಹದ ಮಾಡುವುದರಿಂದ ಹಿಡಿದು ನೇಜಿನಾಟಿ, ಕೊಯ್ಲು, ಭತ್ತ ಬೇರ್ಪಡಿಸುವಿಕೆ ಎಲ್ಲದಕ್ಕೂ ಈಗ ಯಂತ್ರವಿದೆ. ಆದರೆ ರೈತನಿಗೆ ಮಳೆ ಕೃಪೆ ತೋರುತ್ತಿಲ್ಲ.

ಕೃಪೆ ತೋರದ ಮಳೆರಾಯ

ಮೇ ತಿಂಗಳಲ್ಲಿ ಮುಂಗಾರುಪೂರ್ವ ಮಳೆ ಸಾಕಷ್ಟು ಸುರಿಯುತ್ತಿದ್ದರೆ ರೈತರು ನೇಜಿ ತಯಾರಿ ಆರಂಭಿಸಿ ಗದ್ದೆ ಹದ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರು. ಜೂನ್ ತಿಂಗಳ ಮೊದಲ ಅಥವಾ 2ನೇ ವಾರದಲ್ಲಿ ಭತ್ತ ನಾಟಿ ಕಾರ್ಯವೂ ನಡೆಯುತ್ತಿತ್ತು. ಸಾಧಾರಣವಾಗಿ ಸೆಪ್ಟಂಬರ್-ಅಕ್ಟೋಬರ್ ತಿಂಗಳಿಗೆ ಬೆಳೆ ಕೊಯ್ಲು ಆಗಿ ಮುಂದೆ ಸುಗ್ಗಿ ಬೆಳೆಗೂ ತಯಾರಿ ನಡೆಯುತ್ತಿತ್ತು. ಇದೀಗ ಜೂನ್ ತಿಂಗಳು ಆರಂಭವಾದರೂ ಭತ್ತ ಕೃಷಿಗೆ ಬೇಕಾದಷ್ಟು ಮಳೆ ಸುರಿದಿಲ್ಲ.

ಭತ್ತದ ಕೃಷಿಗೆ ಅತ್ಯಂತ ಪೂರಕ ವ್ಯವಸ್ಥೆಯನ್ನು ಕೇರಳ ಸರ್ಕಾರ ಮಾಡುತ್ತಿದೆ. ಅದೇ ರೀತಿಯ ವ್ಯವಸ್ಥೆಗಳು ಕರ್ನಾಟಕದಲ್ಲಿ ಅನುಷ್ಠಾನಗೊಂಡರೆ ಮಾತ್ರ ಮುಂದೆ ಭತ್ತ ಕೃಷಿಯನ್ನು ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೃಷಿ ಇಲಾಖೆ ಮೂಲಕ ಕೇರಳ ಮಾದರಿಯಲ್ಲಿ ರೈತರ ಸಹಾಯಕ್ಕೆ ಮುಂದಾಗಬೇಕು.

— ಧನಂಜಯ ಗೌಡ ಪಾಲೆತ್ತಾಡಿ, ಭತ್ತ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net