

ಉಡುಪಿ: ಕುಮ್ಕಿ ಹಕ್ಕು ಹಾಗೂ ಗೇರುಬೀಜ ಲೀಸ್ ಭೂಮಿಯ ಸಮಸ್ಯೆ ಇಂದು ನಿನ್ನೆಯದಲ್ಲ. ಈ ವಿಚಾರದಲ್ಲಿ ಸರ್ಕಾರಗಳ ಸ್ಪಂದನೆಯೂ ಸಹ ಅತ್ಯಲ್ಪವಾಗಿದೆ. ಈ ವಿಚಾರ ಸಂಕಿರಣದ ಮೂಲಕವಾದರೂ ರೈತರು ಅನುಭವಿಸುತ್ತಿರುವ ಸಮಸ್ಯೆ ಸರ್ಕಾರದ ಗಮನ ಸೆಳೆದು ತಾರ್ಕಿಕ ಅಂತ್ಯ ಕಾಣಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲಾ ಜಿಲ್ಲಾ ಕೃಷಿಕ ಸಮಾಜ ಹಾಗೂ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಸಹಕಾರದಲ್ಲಿ ಗುರುವಾರ (ನ.5) ಆಯೋಜಿಸಿದ್ದ ಕುಮ್ಕಿ ಹಾಗೂ ಗೇರುಬೀಜ ಲೀಸ್ ಭೂಮಿ, ಕಸ್ತೂರಿ ರಂಗನ್ ವರದಿ ಮತ್ತು ಕಾಡುಪ್ರಾಣಿಗಳ ಹಾವಳಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ವಿಚಾರ ಮಂಡನೆ
ಕುಮ್ಕಿ ಹಾಗೂ ಗೇರು ಲೀಸ್ ಭೂಮಿ ಕುರಿತು ಟಿ.ಬಿ. ಶೆಟ್ಟಿ ಕುಂದಾಪುರ, ಕಸ್ತೂರಿ ರಂಗನ್ ವರದಿ ಕುರಿತು ಕೃಷಿಕ ಡಾ. ಅತುಲ್ ಶೆಟ್ಟಿ ಚಿತ್ತೂರು, ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಕೃಷಿಕ ಸಮಾಜ ಕಾರ್ಕಳ ತಾಲೂಕಾಧ್ಯಕ್ಷ ನವೀನಚಂದ್ರ ಜೈನ ವಿಚಾರ ಮಂಡಿಸಿದರು.
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ನಾರಾಯಣ ಹೆಗಡೆ, ದ.ಕ. ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ವಿಜಯಕುಮಾರ ರೈ ಮಾತನಾಡಿದರು. ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ, ಜಿಲ್ಲಾ ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ, ಎಂ.ಜಿ. ಸತ್ಯನಾರಾಯಣ, ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಉಪಾಧ್ಯಕ್ಷ ವಿಟ್ಠಲ ಶೆಟ್ಟಿ ಸೇಡಿಕೊಡ್ಲು ಉಪಸ್ಥಿತರಿದ್ದರು.
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕೊಡ್ಗಿ ಸ್ವಾಗತಿಸಿದರು. ಕೃಷಿ ಸಮಾಜದ ರಾಜ್ಯ ನಿರ್ದೇಶಕ ಪ್ರದೀಪ ಹೆಬ್ಬಾರ ನಂಚಾರು ವಂದಿಸಿದರು. ಕೃಷಿಕ ಸಮಾಜದ ಬ್ರಹ್ಮಾವರ ತಾಲೂಕಾಧ್ಯಕ್ಷ ವೈಕುಂಠ ಹೇರಳೆ ಕಾರ್ಯಕ್ರಮ ನಿರೂಪಿಸಿದರು.