ಸಮಸ್ಯೆಗಳ ಆಗರ ತ್ರಾಸಿ-ಮರವಂತೆ ಕಡಲತೀರ

ಡ್ರೋನ್ ಕೆಮರಾದಲ್ಲಿ ಸೆರೆಯಾಗಿರುವ ತ್ರಾಸಿ-ಮರವಂತೆಯ ಸುಂದರ ದೃಶ್ಯ.
ಡ್ರೋನ್ ಕೆಮರಾದಲ್ಲಿ ಸೆರೆಯಾಗಿರುವ ತ್ರಾಸಿ-ಮರವಂತೆಯ ಸುಂದರ ದೃಶ್ಯ.
Published on
ರಾಘವೇಂದ್ರ ಪೈ ಕುಂದಾಪುರ
ಕರ್ನಾಟಕದ ಕರಾವಳಿ ಮಾತ್ರವಲ್ಲದೆ ಕೇರಳ, ಗೋವಾಗಳ ಪೈಕಿ ಅತ್ಯಂತ ಮನಮೋಹಕ ಬೀಚ್‌ಗಳಲ್ಲಿ ಒಂದು ತ್ರಾಸಿ- ಮರವಂತೆ ಕಡಲತೀರವೂ ಒಂದು. ಒಂದೆಡೆ ಸೌಪರ್ಣಿಕಾ ನದಿ, ಇನ್ನೊಂದು ಕಡೆ ಕಡಲು, ಅದರ ನಡುವೆ ಸಾಗುವ ಹೆದ್ದಾರಿ, ಡ್ರೋನ್ ಕ್ಯಾಮರಾದಲ್ಲಿ ಈ ದೃಶ್ಯಗಳನ್ನು ನೋಡುವಾಗ ಮೈರೋಮಾಂಚನವಾಗುತ್ತದೆ. ಆದರೆ, ಅಚ್ಚರಿ ಎಂದರೆ ಈ ಎಲ್ಲ ಸೌಂದರ್ಯವೂ ಡ್ರೋನ್ ದೃಶ್ಯಗಳಿಗಷ್ಟೇ ಸೀಮಿತವಾಗಿದೆ. ಮೇಲಿನಿಂದ ಆಕರ್ಷಕವಾಗಿ ಕಾಣುವ ಬೀಚನ್ನು ಹತ್ತಿರದಿಂದ ನೋಡಿದಾಗ ಸೌಂದರ್ಯಕ್ಕಿಂತ ಸಮಸ್ಯೆಗಳೇ ಎದ್ದು ಕಾಣುತ್ತವೆ!
ನದಿ ಮತ್ತು ಕಡಲು ಸಮಾಂತರವಾಗಿರುವ ನಡುವೆ ರಸ್ತೆ ಸಾಗುವ ದೃಶ್ಯ ದೇಶದ ಬೇರೆ ಯಾವ ಬೀಚನಲ್ಲೂ ಇಲ್ಲ. ನದಿ ತಟದಲ್ಲಿಯೇ ದೇಶದಲ್ಲಿಯೇ ಅಪರೂಪವಾದ ಶ್ರೀ ವರಹಾ ಮಹಾರಾಜ ಸ್ವಾಮಿ ದೇವಸ್ಥಾನವಿದೆ. ಆದರೆ, ಇಲ್ಲಿ ಬರುವ ಪ್ರವಾಸಿಗರಿಗೆ ಈ ಸೊಬಗನ್ನು ಸವಿಯಲು ಬೇಕಾದ ಯಾವ ವ್ಯವಸ್ಥೆಯೂ ಇಲ್ಲ. ಇನ್ನು ತ್ರಾಸಿಯಲ್ಲಿ ಪಾರ್ಕಿಂಗ್, ಫುಡ್ ಕೋರ್ಟ್, ಸೀವಾಕ್, ಸೈಕಲ್ ಟ್ರಾೃಕ್, ಬಯಲು ರಂಗಮಂದಿರ, ಹೆದ್ದಾರಿಯಾಚೆಗೆ ಪ್ರವಾಸಿ ಮಂದಿರ ಸಹಿತ ಒಟ್ಟು 9.95 ಕೋಟಿ ರೂ. ವೆಚ್ಚದ ಕಾಮಗಾರಿ ಕಳೆದ 2 ವರ್ಷದಿಂದ ನಡೆಯುತ್ತಿದ್ದು, ಅದಿನ್ನೂ ಪೂರ್ಣಗೊಂಡಿಲ್ಲ

ಅಗತ್ಯವಾಗಿ ಆಗಬೇಕಾಗಿರುವುದೇನು?:

ತ್ರಾಸಿ-ಮರವಂತೆ ಬೀಚ್‌ನ ಎದುರೇ ಹಾದುಹೋಗುವ ಹೆದ್ದಾರಿ 2 ಕಿ.ಮೀ. ಉದ್ದವಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಯೋಜನೆ ಆಗಬೇಕಾಗಿದೆ. ಸಮೀಪದಲ್ಲಿಯೇ ವರಾಹ ಮಹಾರಾಜ ಸ್ವಾಮಿ ದೇವಸ್ಥಾನವೂ ಇದೆ. ಅದನ್ನೆಲ್ಲ ಬಳಸಿಕೊಂಡು ಉತ್ತಮ ಪ್ರವಾಸಿ ಕೇಂದ್ರವಾಗಿಸಬಹುದು. ಕುಡಿಯವ ನೀರಿನ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಸುಸಜ್ಜಿತ ಶೌಚಗೃಹ, ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥಿತ ಜಾಗ ಆಗಬೇಕಾಗಿದೆ. ಗುಡಿ ಕೈಗಾರಿಕೆಗಳಿಗೆ, ಕುಂಬಾರಿಕೆ, ಕೊರಗರ ಬುಟ್ಟಿ, ಇನ್ನಿತರ ಆಕರ್ಷಕ ವಸ್ತುಗಳ ಮಳಿಗೆಗಳನ್ನು ಕಡಿಮೆ ವೆಚ್ಚದಲ್ಲಿ ತೆರೆಯಲು ಅವಕಾಶ ಮಾಡಿಕೊಡಬೇಕು.ಪ್ರವಾಸಿಗರಿಗೆ ಕುಳಿತುಕೊಳ್ಳಲು ವ್ಯವಸ್ಥೆಯಾಗುವಂತೆ ಅಲ್ಲಲ್ಲಿ ಬೆಂಚ್‌ಗಳನ್ನು ಹಾಗೂ ವಿಶ್ರಾಂತಿ ತಾಣಗಳನ್ನು ನಿರ್ಮಿಸಬೇಕು.

ಬೀಚ್ ಟೂರಿಂ ಘೋಷಣೆಗಷ್ಟೇ ಸೀಮಿತವಾಗದಿರಲಿ

ತ್ರಾಸಿ -ಮರವಂತೆ ಬೀಚ್ ಸಮಗ್ರ ಅಭಿವೃದ್ಧಿಯ ಜತೆಗೆ ಸ್ಥಳೀಯ ಆರ್ಥಿಕತೆಗೂ ನೆರವಾಗುವಂತಹ ವಿಶೇಷವಾದ ಕೊಲ್ಲೂರು- ಮರವಂತೆ-ಸೋಮೇಶ್ವರ ಕಾರಿಡಾರ್ ಯೋಜನೆಯೊಂದನ್ನು ಸಂಸದ ಬಿ.ವೈ.ರಾಘವೇಂದ್ರ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಸ್ವತಃ ಕೇಂದ್ರ ಪ್ರವಾಸೋದ್ಯಮ ಸಚಿವರೇ ಹಸಿರು ನಿಶಾನೆ ತೋರಿದ್ದಾರೆ. ಆದರೆ ಯೋಜನೆಯಿನ್ನೂ ಅನುಷ್ಠಾನಗೊಂಡಿಲ್ಲ. ಇನ್ನು ಹೆದ್ದಾರಿ ಪ್ರಾಧಿಕಾರದಿಂದಲೂ ವಿಶೇಷ ಅನುದಾನದಡಿ ಈ ಬೀಚ್‌ನ ಅಭಿವೃದ್ಧಿಗೆ ಒಂದು ಯೋಜನೆ ರೂಪಿಸಲಾಗಿತ್ತು. ಅದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದಲೂ ರಾಜ್ಯ ಸರ್ಕಾರಕ್ಕೆ ಯೋಜನೆಗಳ ಪಟ್ಟಿ ತಯಾರಿಸಿ, ಸಲ್ಲಿಸಲಾಗಿದೆ. ಆದರೆ ಯಾವುದೂ ದಡ ಸೇರುವ ಲಕ್ಷಣ ಮಾತ್ರ ಕಾಣುತ್ತಿಲ್ಲ.

ಮರವಂತೆ ಬೀಚ್‌ನಲ್ಲಿ ಮುಖ್ಯವಾಗಿ ಬೀದಿ ದೀಪ, ವಾಹನಗಳ ಪಾರ್ಕಿಂಗ್, ಪ್ರವಾಸಿಗರಿಗೆ ಕುಳಿತುಕೊಳ್ಳಲು ವ್ಯವಸ್ಥೆ, ಉದ್ಯಾನವನ ಬೇಡಿಕೆ ಪ್ರಮುಖವಾಗಿದೆ. ಅಲ್ಲಿರುವ ಶೌಚಗೃಹ ಸರಿಪಡಿಸಿ ಜನರ ಉಪಯೋಗಕ್ಕೆ ಸಿಗುವಂತೆ ಮಾಡಿ ಎಂದು ಸಾಕಷ್ಟು ಬಾರಿ ಸಂಬಂಧಪಟ್ಟ ಎಲ್ಲರಿಗೂ ಮನವಿ ಸಲ್ಲಿಸಿದ್ದೇವೆ.

ಬೀದಿ ದೀಪ, ನಾಮಫಲಕ ಮುಖ್ಯವಾಗಿ ಬೀದಿ ದೀಪಬೇಕು ಎಂದು ಹೆದ್ದಾರಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ. ಆದಷ್ಟು ಬೇಗ ಆಗಿ, ಪ್ರವಾಸಿಗರಿಗೆ ಅನುಕೂಲವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net