ತಾಲೂಕಿಗೆ ಯೋಜನಾ ಪ್ರಾಧಿಕಾರ ಶಾಪ!

yojana pradhikara
yojana pradhikara
Published on

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಕಾರ್ಕಳ ಮತ್ತು ಕಾಪು ತಾಲೂಕುಗಳಿಗೆ ಒಂದೇ ಯೋಜನಾ ಪ್ರಾಧಿಕಾರವಿರುವುದು ಸಾರ್ವಜನಿಕರಿಗೆ ಶಾಪವಾಗಿ ಪರಿಣಮಿಸಿದೆ. ಕಟ್ಟಡ ನಿರ್ಮಾಣ ಅನುಮತಿ, ಭೂ ಪರಿವರ್ತನೆ ನಂತರದ 9/11 ದಾಖಲೆ ಹಾಗೂ ಇತರ ಆಡಳಿತಾತ್ಮಕ ಕೆಲಸಗಳಿಗಾಗಿ ಕಾರ್ಕಳ ತಾಲೂಕಿನ ದೂರದ ಗ್ರಾಮಗಳ ಜನರು ಕಾಪುವಿಗೆ ನೂರಾರು ಕಿಲೋಮೀಟರ್ ಅಲೆದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕಾರ್ಕಳ ತಾಲೂಕಿನ ಈದು, ಬೊಳೆಟ್ಟು ಮತ್ತು ಮಾಳದಂತಹ ದೂರದ ಗ್ರಾಮಗಳಿಂದ ಕಾಪು ಕಚೇರಿಗೆ ತೆರಳಲು ಸಾರ್ವಜನಿಕರು ನೂರಾರು ಕಿಲೋಮೀಟರ್‌ವರೆಗೆ ಪ್ರಯಾಣಿಸಬೇಕಿದೆ. ಕಾರ್ಕಳದಲ್ಲಿ 39 ಕಂದಾಯ ಗ್ರಾಮಗಳು, 27 ಗ್ರಾಪಂಗಳು, 1 ಪುರಸಭೆ ಹಾಗೂ 2 ಹೋಬಳಿಗಳಿವೆ. ಕಾಪುವಿನಲ್ಲಿ 30 ಕಂದಾಯ ಗ್ರಾಮಗಳು, 16 ಗ್ರಾಪಂ ಇದ್ದು, ಇಷ್ಟೊಂದು ದೊಡ್ಡ ಪ್ರದೇಶಕ್ಕೆ ಒಂದೇ ವ್ಯವಸ್ಥೆ ಇರುವುದು ವಿಳಂಬಕ್ಕೆ ಕಾರಣವಾಗಿದೆ. ಎರಡೂ ತಾಲೂಕುಗಳಿಗೆ ಒಬ್ಬರೇ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದು, ಕಡತಗಳ ವಿಲೇವಾರಿ ಕುಂಠಿತಗೊಂಡಿದೆ. ಸಾರ್ವಜನಿಕರ ಗೋಳಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಇತರ ಕರ್ತವ್ಯಗಳ ಒತ್ತಡ

ಈ ಹಿಂದೆ ಗ್ರಾಪಂ ಮಟ್ಟದಲ್ಲೇ ದೊರಕುತ್ತಿದ್ದ ಕಟ್ಟಡ ಪರವಾನಗಿ ಸೇರಿದಂತೆ ಹಲವು ಅಧಿಕಾರಗಳು ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಬಂದ ಬಳಿಕ ಸಿಂಗಲ್ ಲೇಔಟ್ ಅನುಮೋದನೆ, ಭೂ ಪರಿವರ್ತನೆ(ಕನ್ವರ್ಷನ್) ಬಳಿಕದ 9/11 ದಾಖಲೆ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ವಿಳಂಬವಾಗುತ್ತಿದೆ. ಕನ್ವರ್ಷನ್ ಪೂರ್ಣಗೊಂಡ ನಂತರ 9/11 ದಾಖಲೆ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾದ ಸ್ಥಿತಿಯಿದೆ. ಎರಡೂ ತಾಲೂಕಿನ ಕೆಲಸಗಳಿಗೆ ಒಬ್ಬರೇ ಇಂಜಿನಿಯರ್ ಕಾರ್ಯನಿರ್ವಹಿಸುತ್ತಿರುವುದು ಕೂಡ ಕಡತ ವಿಲೇವಾರಿ ಮೇಲೆ ಪರಿಣಾಮ ಬೀರುತ್ತಿದೆ. ಇತ್ತೀಚೆಗೆ ಅವರಿಗೆ ಎಸ್‌ಐಆರ್ ಕರ್ತವ್ಯ ನೀಡಿರುವುದರಿಂದ ಯೋಜನಾ ಪ್ರಾಧಿಕಾರದ ಕೆಲಸಗಳಿಗೆ ಸಮಯ ಮೀಸಲಿಡಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ವಾರದಲ್ಲಿ ಕಾರ್ಕಳಕ್ಕೆ ಮೀಸಲಾದ ದಿನದಲ್ಲಿಯೂ ಇತರ ಕರ್ತವ್ಯಗಳ ಒತ್ತಡ ಇರುವುದರಿಂದ ಸಾರ್ವಜನಿಕರಿಗೆ ಅಗತ್ಯ ಸೇವೆ ಸಕಾಲದಲ್ಲಿ ದೊರೆಯುತ್ತಿಲ್ಲ. ಅಧಿಕಾರಿಗಳನ್ನು ಭೇಟಿಯಾಗಲು ಹಾಗೂ ಕಡತದ ಸ್ಥಿತಿ ತಿಳಿದುಕೊಳ್ಳಲು ಸಾರ್ವಜನಿಕರು ಹಲವು ಬಾರಿ ಕಚೇರಿಗೆ ಭೇಟಿ ನೀಡಬೇಕಾಗುತ್ತಿದೆ ಎನ್ನಲಾಗಿದೆ.
ಹೀಗಾಗಿ ಕಾರ್ಕಳ ತಾಲೂಕಿನ ಜನರಿಗೆ ಯೋಜನಾ ಪ್ರಾಧಿಕಾರ ಸೇವೆಗಳು ಸುಲಭವಾಗಿ ಹಾಗೂ ಸಕಾಲದಲ್ಲಿ ದೊರೆಯುವಂತೆ ಅಗತ್ಯ ಸಿಬ್ಬಂದಿ ನಿಯೋಜನೆ, ಕಡತಗಳ ತ್ವರಿತ ವಿಲೇವಾರಿ ಮತ್ತು ಕಾರ್ಕಳಕ್ಕೆ ಮೀಸಲಾದ ದಿನದಂದು ಅಧಿಕಾರಿಗಳು ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಸಾರ್ವಜನಿಕರಿಗೆ ಆರ್ಥಿಕ ಹೊರೆ

ಮನೆ ನಿರ್ಮಾಣಕ್ಕೆ ಮುಂದಾಗಿರುವವರು, ನಿವೇಶನ ಅಭಿವೃದ್ಧಿ ಹಾಗೂ ಲೇಔಟ್‌ಗಳಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಅರ್ಜಿ ಸಲ್ಲಿಸಿರುವವರು ಕಡತಗಳ ವಿಲೇವಾರಿಗೆ ಹೆಚ್ಚು ಸಮಯ ಕಾಯಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಆಡಳಿತಾತ್ಮಕ ಪ್ರಕ್ರಿಯೆಗಳು ವಿಳಂಬವಾದಂತೆ ನಿರ್ಮಾಣ ಕಾರ್ಯಗಳು ಮುಂದೂಡಲ್ಪಡುತ್ತಿದ್ದು, ಸಾರ್ವಜನಿಕರಿಗೆ ಹೆಚ್ಚುವರಿ ಆರ್ಥಿಕ ಹೊರೆಯಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.

ಈಗಾಗಲೆ ನನ್ನ ಮನೆಯ 9/11ಗಾಗಿ ಸುಮಾರು 28 ಬಾರಿ ಅಲೆದಾಡಿದರೂ 9/11 ಸಿಕ್ಕಿಲ್ಲ. ನಮ್ಮ ಗೋಳು ಕೇಳುವವರು ಯಾರು?

— ಸತೀಶ್ ನಾಯಕ್ ಮಾಳ

ಪ್ರಾಧಿಕಾರದ ಕೆಲಸಗಳ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಕಾಪು ಪ್ರಾಧಿಕಾರದ ಇಂಜಿನಿಯರ್‌ಗೆ ಎಸ್‌ಐಆರ್ ಜವಾಬ್ದಾರಿ ನೀಡಲಾಗಿಲ್ಲ. ಕಡತಗಳ ವಿಲೇವಾರಿ ಸಾರ್ವಜನಿಕ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

— ಅಬೀದ್ ಗದ್ಯಾಳ್ ಅಪರ ಜಿಲ್ಲಾಧಿಕಾರಿ ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net