ಬಲಿಗೆ ಕಾಯುತ್ತಿವೆ ಮೃತ್ಯುಕೂಪಗಳು!

 ತಡೆಬೇಲಿಯಿಲ್ಲದ ಕಲ್ಲುಕೋರೆ ಹೊಂಡ, ಮದಗ.
ತಡೆಬೇಲಿಯಿಲ್ಲದ ಕಲ್ಲುಕೋರೆ ಹೊಂಡ, ಮದಗ.
Published on
  ವಿಜಯವಾಣಿ ಸುದ್ದಿಜಾಲ ಕುಂದಾಪುರ
 ಪ್ರತಿ ಮಳೆಗಾಲದಲ್ಲಿ ತುಂಬುವ ಕೆರೆ, ಮದಗ, ಹೊಳೆಸಾಲು, ಕಾಲುಸಂಕ, ಸಣ್ಣಹೊಳೆಗಳಲ್ಲಿ ಪ್ರಾಣಾಪಾಯ ಸಂಭವಿಸುತ್ತಿದ್ದರೂ ಇನ್ನೂ ಸುರಕ್ಷೆಯ ಕ್ರಮ ಕೈಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ಮುಂಜಾಗ್ರತೆಗೆ ತಾಲೂಕು ಆಡಳಿತ ಸಂಬಂಧಿತ ಅಧೀನ ಇಲಾಖೆಗೆ ಸೂಚನೆ ಹೊರಡಿಸಿದೆ. ಆದರೂ ಕೆಲವೊಂದು ಅಪಾಯಕಾರಿ ಪ್ರದೇಶಗಳಲ್ಲಿ ಇನ್ನೂ ಅಸುರಕ್ಷತೆಯಿದ್ದು, ಸ್ಥಳೀಯರಲ್ಲಿ ಜೀವಭಯ ಕಾಡುತ್ತಿದೆ. 

ತಗ್ಗದ ಅಪಾಯ

2012ರ ಜುಲೈನಲ್ಲಿ ನಾಲ್ಕು ಅಮಾಯಕ ಮಕ್ಕಳನ್ನು ಬಲಿ ತೆಗೆದುಕೊಂಡ ಹಟ್ಟಿಯಂಗಡಿ ಗ್ರಾಪಂ ವ್ಯಾಪ್ತಿಯ ಬಾಚಿನಕೊಡ್ಡು ಮದಗ ಈವರೆಗೂ ಸುರಕ್ಷಿತವಾಗಿಲ್ಲ. ಮಳೆಗಾಲದಲ್ಲಿ ತುಂಬುವ ಕಲ್ಲುಕೋರೆ ಹೊಂಡ, ಮದಗ, ಕೆರೆ, ಹಳ್ಳ ಅಪಾಯಕಾರಿಯಾಗುತ್ತಿವೆ. ಇಂತಹ ಅಪಾಯಕಾರಿ ಪ್ರದೇಶಗಳ ಸುತ್ತ ತಡೆಬೇಲಿ ನಿರ್ಮಿಸಬೇಕೆಂಬ ಕೂಗಿಗೆ ಸ್ಪಂದನೆ ಸಿಕ್ಕಿಲ್ಲ. 

ದುರಂತಕ್ಕೆ ಕೊನೆ ಎಂದು?

2011ರಲ್ಲಿ ಆಲೂರು ಗ್ರಾಮದಲ್ಲಿ ಪ್ರಕಾಶ್, 2012ರಲ್ಲಿ ಬೇಳೂರು ಗ್ರಾಮದ ಸಂಧ್ಯಾ ಮತ್ತು ಧನಲಕ್ಷ್ಮೀ, ಉಡುಪಿ ತಾಲೂಕು ಸಾಬ್ರಕಟ್ಟೆಯ ಅಕ್ಷಯ್‌ಕುಮಾರ್, ಹಟ್ಟಿಯಂಗಡಿ ಬಾಚಿನಕೊಡ್ಲು ಎಂಬಲ್ಲಿ ನಯನ, ಪವಿತ್ರ, ನವೀನ ಮತ್ತು ಪವನ್, ಕಾಲ್ತೋಡು ಗ್ರಾಮದ ಸಂದೇಶ, 2013ರಲ್ಲಿ ಕಾಳಾವರ ಗ್ರಾಮದಲ್ಲಿ ಜಗದೀಶ್, 2014ರಲ್ಲಿ ಉಳ್ಳೂರು 11 ಗ್ರಾಮದ ಅಭಿಷೇಕ್, 2015ರಲ್ಲಿ ಹಟ್ಟಿಯಂಗಡಿ ಗ್ರಾಮದ ಕೆಂಚನೂರು ರಜಿತ್, ಮಾರಣಕಟ್ಟೆಯ ವಿಸ್ಮಯ, 2016ರಲ್ಲಿ ಸಾಬ್ರಕಟ್ಟೆಯ ಚಂದ್ರಿಕಾ ಮತ್ತು ಲಿಖಿತಾ, ಉಳ್ಳೂರು 74 ಗ್ರಾಮದ ಯೋಗೀಶ್, ಪ್ರಕಾಶ್ ಮತ್ತು ಅವರ ತಂದೆ ರಾಘವೇಂದ್ರ ಎಂಬುವರು ಇಂತಹ ಅಪಾಯಕಾರಿ ಹೊಂಡ, ಮದಗ, ತೋಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. 
 2017ರಲ್ಲಿ ಬೇಳೂರಿನ ತಾಯಿ ಮತ್ತು ಇಬ್ಬರು ಮಕ್ಕಳು, ಆವರ್ಸೆಯಲ್ಲಿ ಯುವಕರಿಬ್ಬರು ಆಳದ ಅರಿವಿಲ್ಲದೆ ಹಾನಗುಂಡಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದರು. 2018ರಲ್ಲಿ ಮಾರಣಕಟ್ಟೆ ಚಿತ್ತೂರಿನಲ್ಲಿ ಬಾಲಕಿ ಕಾಲುಸಂಕದಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಳು. 2022ರಲ್ಲಿ ಬೈಂದೂರಿನ ಬೋಳಂಬಳ್ಳಿ ಎಂಬಲ್ಲಿ ಪುಟ್ಟ ಬಾಲಕಿ ಕಾಲುಸಂಕದಿಂದ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಳು. ವರ್ಷವೂ ಕಡಲು, ನದಿ, ಹೊಂಡಗಳಿಗೆ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುವ ಘಟನೆ ನಡೆಯುತ್ತಲೇ ಇರುತ್ತದೆ.

 ಅಪಾಯಕಾರಿ ಸ್ಥಳಗಳು

 ತಾಲೂಕಿನಲ್ಲಿ ಒಟ್ಟು 48 ಕಡೆ ಕಲ್ಲುಕೋರೆ ಹೊಂಡ, 25 ಅಪಾಯಕಾರಿ ಮದಗ, 36 ಕಡೆ ತಡೆಬೇಲಿಯಿಲ್ಲದ ಕೆರೆಗಳು, 26 ಕಡೆ ತೆರೆದ ಬಾವಿ, 3 ಕಡೆ ಕೊಜೆಹೊಂಡ, 7 ಕಡೆ ಇಂಗುಗುಂಡಿ, 14 ತೋಡು, 2 ಕೊಳವೆಬಾವಿ, 105 ಕಾಲುಸಂಕ, ಬೈಂದೂರಿನ ವಣಕೊಡ್ಲು, ಹಳ್ಳಿಹೊಳೆಯ ಚಕ್ರಾ, ಗೋಳಿಹೊಳೆಯ ಮಳಾಳಿ, ಯಡ್ತರೆಯ ಕಿಸ್ಮತಿ ಹೊಳೆ, ಹೆಂಗವಳ್ಳಿಯ ಕೆಮ್ ಗುಡ್ಡೆ, ಆಜ್ರಿಯ ರಾಮನಕೊಡ್ಡು ಅಗೋಳಿಹೊಳೆ, ಕುಬ್ಬಾನದಿ, ಚಿತ್ತೂರಿನ ಸೌಪರ್ಣಿಕಾ ನದಿ, ಪಡುವರಿ ಗ್ರಾಮದ ಮುಂಡಾನ ಹಿತ್ತು ನದಿ ವ್ಯಾಪ್ತಿ ಅಪಾಯಕಾರಿ ಎಂದು ಗುರುತಿಸಲಾಗಿದೆ.
 

ಮಳೆಗಾಲದಲ್ಲಿ ಎದುರಾಗುವ ಅಪಾಯ ತಡೆಗಟ್ಟುವ ನಿಟ್ಟಿನಲ್ಲಿ ನಮ್ಮ ಭೂಮಿ ಸಂಸ್ಥೆಯ ಮಕ್ಕಳ ಮಿತ್ರರು, ಮಹಿಳಾ ಮಿತ್ರರು ಸಂಘಟನೆ ಜತೆಗೂಡಿ 2012ರಿಂದ ಜಾಗೃತಿ ಅಭಿಯಾನ ನಡೆಸಿಕೊಂಡು ಬರುತ್ತಿದೆ. ಆದಾಗ್ಯೂ ಶಾಶ್ವತ ಪರಿಹಾರ ಇನ್ನೂ ಲಭಿಸಿಲ್ಲ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅತ್ಯಗತ್ಯ.

— ಕೃಪಾ ಎಂ.ಎಂ. ಕಾರ್ಯಕರ್ತೆ, ನಮ್ಮ ಭೂಮಿ ಸಂಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net