ಈ ರಸ್ತೆಯನ್ನು ಸ್ಥಳೀಯ ನೂರಾರು ಕುಟುಂಬಗಳು ಅವಲಂಬಿಸಿವೆ. ಈ ರಸ್ತೆಯಲ್ಲಿ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಹಿರಿಯ ನಾಗರಿಕರು ಹಾಗೂ ಮಹಿಳೆಯರು ಪರದಾಡುವಂತಾಗಿದೆ. ರಸ್ತೆಯ ದುಸ್ಥಿತಿಯ ಬಗ್ಗೆ ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಕಳೆದ ಕೆಲವು ದಿನಗಳಿಂದ ಪಚ್ಚಿನಡ್ಕ-ನೋರ್ಣಡ್ಕ ರಸ್ತೆಯಲ್ಲೊಂದು ಕೆಸರ್‌ಡೊಂಜಿ ದಿನ ಎನ್ನುವ ವಿಡಂಬಣೆಯ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮೂಲಸೌಲಭ್ಯವಾದ ಸಂಪರ್ಕ ರಸ್ತೆಯ ದುಸ್ಥಿತಿಯಿಂದಾಗಿರುವ ಜನರ ಆಕ್ರೋಶ, ಆಡಳಿತ ವ್ಯವಸ್ಥೆಯ ನಿರ್ಲಕ್ಷೃ ಪೋಸ್ಟರ್ ಮೂಲಕ ಹೊರಹೊಮ್ಮಿದೆ. ಅತಿ ಕೆಟ್ಟ ರಸ್ತೆ, ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸಿ, ಪ್ರಯಾಣಿಕರ ಜೀವಕ್ಕೆ ಅಪಾಯ ಒಕ್ಕಣೆಯ ಪೋಸ್ಟರ್‌ಗಳು ವೈರಲ್ ಆಗುತ್ತಿವೆ.