ಸರ್ಕಾರಿ ಕಾಲೇಜ್​ಗೆ 'ದಾಖಲಾತಿ' ಚಾಲೆಂಜ್​

(ಸಾಂದರ್ಭಿಕ ಚಿತ್ರ).
(ಸಾಂದರ್ಭಿಕ ಚಿತ್ರ).
Published on

* ತೊಡಕಾಗುತ್ತಿದೆ ಇಲಾಖಾ ನೀತಿ-ನಿಯಮ

* ಭವಿಷ್ಯಕ್ಕಾಗಿ ಖಾಸಗಿಯತ್ತ ವಿದ್ಯಾರ್ಥಿಗಳ ಹೆಜ್ಜೆ 

ಪ್ರಶಾಂತ ಭಾಗ್ವತ ಉಡುಪಿ
ರಾಜ್ಯದಲ್ಲಿ ಉಡುಪಿ ಜಿಲ್ಲೆ ಪ್ರತಿವರ್ಷವೂ ಸಹ ಶೈಕ್ಷಣಿಕವಾಗಿ ಸಾಧನೆಯ ಹೆಜ್ಜೆ ಗುರುತು ಮೂಡಿಸುತ್ತದೆ. ಇದಕ್ಕೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕಾಲೇಜ್​ಗಳ ಕೊಡುಗೆ ಪ್ರಮುಖವಾಗಿದೆ. ಪ್ರಸ್ತುತ ವರ್ಷ (2026) ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಉಡುಪಿ ಜಿಲ್ಲೆ, ಕಳೆದ 10 ವರ್ಷದಲ್ಲಿ 6 ಬಾರಿ ದ್ವಿತೀಯ, 4 ಬಾರಿ ಪ್ರಥಮ ಸ್ಥಾನ ಗಳಿಸಿದೆ.
ಜಿಲ್ಲೆಯ ಶೈಕ್ಷಣಿಕ ಸಾಧನೆ ಹೆಮ್ಮೆ ತರುವಂತಿದ್ದರೂ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜ್​ಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿರುವುದು ಅಸಮಾಧಾನದ ಸಂಗತಿ. ಪ್ರತಿಭಾನ್ವಿತ ಉಪನ್ಯಾಸಕರಿದ್ದರೂ ಸಹ ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಕೆಲ ನೀತಿ-ನಿಯಮದಿಂದಾಗಿ ವಿದ್ಯಾರ್ಥಿಗಳು ಮುಂದಿನ ಭವಿಷ್ಯಕ್ಕಾಗಿ ಖಾಸಗಿಯತ್ತ ಹೆಜ್ಜೆ ಹಾಕಿದ್ದಾರೆ.
(ಸಾಂದರ್ಭಿಕ ಚಿತ್ರ).

ಹಿನ್ನಡೆ ಏಕೆ?

ಇತ್ತೀಚೆಗೆ ಖಾಸಗಿ ಅನುದಾನಿತ ಕಾಲೇಜ್​ಗಳ ಸಂಖ್ಯೆ ಹೆಚ್ಚುತ್ತಿದೆ. ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ವಿದ್ಯಾರ್ಥಿಗಳು 80ಕ್ಕಿಂತ ಜಾಸ್ತಿಯಾದಾಗ ಹೆಚ್ಚುವರಿ ವಿಭಾಗ ಪ್ರಾರಂಭಿಸಲು ಇಲಾಖೆಯಿಂದಲೇ ಸುಲಭವಾಗಿ ಅನುಮತಿ ದೊರಕುತ್ತಿದೆ. ಹೀಗಾಗಿ ಖಾಸಗಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದ್ವಿಗುಣಗೊಂಡರೆ ಸರ್ಕಾರಿ ಕಾಲೇಜ್​ಗಳಲ್ಲಿ ಸಂಖ್ಯೆ ಕುಸಿಯುತ್ತಿದೆ. ಸರ್ಕಾರಿ ಕಾಲೇಜ್​ಗಳಲ್ಲಿ ವಿದ್ಯಾರ್ಥಿಗಳು 100ಕ್ಕಿಂತ ಕಡಿಮೆಯಿದ್ದರೆ ಅಲ್ಲಿ ಕಾಯಂ ಪ್ರಾಂಶುಪಾಲರ ನೇಮಕವಿಲ್ಲ. ಅಲ್ಲದೆ, ವರ್ಗಾವಣೆ ಮಾಡದಿರುವ ನಿಯಮ ಜಾರಿಯಲ್ಲಿದೆ. ಪ್ರತಿ ವಿಷಯಗಳಿಗೆ 40ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಉಪನ್ಯಾಸಕರ ನೇಮಕ ಮತ್ತು ವರ್ಗಾವಣೆ ಮಾಡದಿರುವ ನಿಯಮ ಈಗ ಚಾಲ್ತಿಯಲ್ಲಿದೆ. ಇದು ವಿದ್ಯಾರ್ಥಿಗಳ ದಾಖಲಾತಿ ಹಿನ್ನಡೆಗೆ ಪ್ರಮುಖ ಕಾರಣ.

ಪಾಲಕರ ಹಿಂದೇಟು

ಒಂದು ಸರ್ಕಾರಿ ಕಾಲೇಜ್​ನಲ್ಲಿ ಎಲ್ಲ ವಿಷಯಗಳಿಗೆ ಉಪನ್ಯಾಸಕರಿದ್ದರೂ ಸಹ ಅವರನ್ನು ಉಪನ್ಯಾಸಕರಿಲ್ಲದ ಕಾಲೇಜ್​ಗೆ ಒಂದಿಷ್ಟು ದಿನ ನಿಯೋಜಿಸುತ್ತಾರೆ. ಅದರಿಂದ ವಿಷಯ ಉಪಾನ್ಯಾಸಕರು ಎರಡೂ ಕಾಲೇಜ್​ಗೂ ವಾರದಲ್ಲಿ 6 ದಿನ ಲಭ್ಯವಾಗದೆ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದ 'ಶೈಕ್ಷಣಿಕ ನ್ಯಾಯ' ಲಭಿಸುತ್ತಿಲ್ಲ. ಉಪನ್ಯಾಸಕರ ನಿಯೋಜನೆ ಇಲ್ಲದ ಕಡೆಗಳಲ್ಲಿ ಆ ವಿಷಯಕ್ಕೆ ಅತಿಥಿ ಉಪನ್ಯಾಸಕರ ಅವಲಂಬನೆ ಅನಿವಾರ್ಯ. ಅನೇಕ ಕಾಲೇಜ್​ಗಳಲ್ಲಿ ಪ್ರಥಮ ದರ್ಜೆ ಸಹಾಯಕರು (ಎಫ್.ಡಿ.ಎ.), ಗ್ರೂಪ್​ ಡಿ ನೌಕರರು ಇಲ್ಲದ್ದರಿಂದ ಪ್ರಾಂಶುಪಾಲರು ಮತ್ತು ಉಪನ್ಯಾಸಕರೇ ಆ ಕಾರ್ಯ ನಿರ್ವಹಿಸುವ ಸ್ಥಿತಿಯಿದೆ. ಈ ಗೋಜಲು ಅರಿತ ಪಾಲಕರು ಸರ್ಕಾರಿ ಕಾಲೇಜ್​ಗೆ ತಮ್ಮ ಮಕ್ಕಳನ್ನು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ.
(ಸಾಂದರ್ಭಿಕ ಚಿತ್ರ).

ನೋಂದಣಿ ಹೆಚ್ಚಿಸಲು ಗುರಿ

ಉಡುಪಿ ಜಿಲ್ಲೆಯಲ್ಲಿ 45 ಸರ್ಕಾರಿ ಪ.ಪೂ. ಕಾಲೇಜ್​ಗಳಿದ್ದು ಕಳೆದ ಶೈಕ್ಷಣಿಕ ವರ್ಷ (2025)ದಲ್ಲಿ 4,219 ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿಗೆ ದಾಖಲಾತಿ ಆಗಿದ್ದರು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಇದನ್ನು 5,183ಕ್ಕೆ ಹೆಚ್ಚಿಸಬೇಕೆಂದು ಇಲಾಖೆಗೆ ಗುರಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈವರ್ಷ 5,759 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜ್​ ಬಿಟು ಅನುದಾನಿತ ಮತ್ತು ಅನುದಾನ ರಹಿತ ಕಾಲೇಜ್​ನತ್ತ ಮುಖ ಮಾಡಿದ್ದಾರೆ. ಇದೀಗ ಸರ್ಕಾರಿ ಕಾಲೇಜ್​ನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳ ದಾಖಲಾತಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಉಪನಿರ್ದೇಶಕರು, ಪ್ರಾಂಶುಪಾಲರ ಮೇಲೆ ಒತ್ತಡ

ಪ್ರಸ್ತುತ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನದ 20 ಅಂಕ ಮತ್ತು ಪ್ರತಿ ವಿಷಯದಲ್ಲಿ 80ಕ್ಕೆ 13 ಅಂಕ ಸೇರಿ ಒಟ್ಟು 33 ಅಂಕ ಗಳಿಸಿದರೆ ಉತ್ತೀರ್ಣವೆಂಬ ಹೊಸ ನಿಯಮದಿಂದ ರಾಜ್ಯದಲ್ಲಿ ಒಟ್ಟು ಫಲಿತಾಂಶ ಏರಿಕೆ ಆಗಿದ್ದರೂ ಸಹ ಸರ್ಕಾರಿ ಕಾಲೇಜ್​ಗಳಲ್ಲಿ ದಾಖಲಾತಿ ಏರಿಕೆಯಾಗಿಲ್ಲ. ಹೀಗಾಗಿ ಹಲವು ಕಾಲೇಜ್​ಗಳಿಗೆ ಸರ್ಕಾರ ಅಗತ್ಯ ಮೂಲಸೌಕರ್ಯ ಒದಗಿಸಲು ಚಿಂತಿಸಿದ್ದು, ಸರ್ಕಾರಿ ಕಾಲೇಜ್​ನಲ್ಲಿ ದಾಖಲಾತಿ ಹೆಚ್ಚಿಸಲು ಚಿಂತಿಸಿದೆ. ಅಲ್ಲದೆ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮತ್ತು ಪ್ರಾಂಶುಪಾಲರ ಮೇಲೆ ದಾಖಲಾತಿ ಹೆಚ್ಚಿಸಲು ಒತ್ತಡ ಹೇರುತ್ತಿರುವುದಾಗಿ ತಿಳಿದುಬಂದಿದೆ.
"

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಎಲ್ಲ ಪ್ರಾಂಶುಪಾಲರೊಂದಿಗೆ 4-5 ಸಭೆ ನಡೆಸಲಾಗಿದೆ. ಇಲಾಖೆಯ ನಿರ್ದೇಶಕರೂ ಸಹ ಆನ್​ಲೈನ್​ ಮೂಲಕ ಸಭೆ ನಡೆಸಿದ್ದಾರೆ. ಪ್ರಾಂಶುಪಾಲರು ಸಮೀಪದ ಪ್ರೌಢಶಾಲೆಗಳಿಗೆ ತೆರಳಿ ಮಕ್ಕಳಿಗೆ ಸರ್ಕಾರಿ ಕಾಲೇಜ್​ಗೆ ಬರುವಂತೆ ಅರಿವು ಮೂಡಿಸುತ್ತಿದ್ದಾರೆ. ಜನಗಣತಿ ಕಾರ್ಯದಲ್ಲಿ ನಿಯೋಜಿತ ಉಪನ್ಯಾಸಕರು ಮನೆಮನೆಗೆ ಭೇಟಿ ಸಂದರ್ಭದಲ್ಲಿ ಮಕ್ಕಳನ್ನು ಸರ್ಕಾರಿ ಕಾಲೇಜ್​ಗೇ ದಾಖಲಿಸುವಂತೆ, ಇರುವ ಸೌಲಭ್ಯಗಳ ಕುರಿತು ಪಾಲಕರಿಗೆ ತಿಳಿವಳಿಕೆ ನೀಡಿದ್ದಾರೆ. ಸಿಬಿಸಿ ಸದಸ್ಯರು ಮತ್ತು ಹಳೆಯ ವಿದ್ಯಾರ್ಥಿಗಳು ಮನೆಮನೆಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸೂಚಿಸಲಾಗಿದೆ.

— ಮಾರುತಿ. ಡಿಡಿಪಿಯು ಉಡುಪಿ.

(ಸಾಂದರ್ಭಿಕ ಚಿತ್ರ).

"

ಸರ್ಕಾರಿ ಕಾಲೇಜ್​ಗಳಿಗೆ ಮೂಲಸೌಕರ್ಯ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಅನುದಾನವನ್ನೂ ನೀಡಿ ಅಭಿವೃದ್ಧಿ ಪಡಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಕಾಲೇಜ್​ಗೆ ಕಳುಹಿಸಿ ಸೌಲಭ್ಯದ ಸದುಪಯೋಗ ಮಾಡಿಕೊಳ್ಳಬೇಕು. ಸಮಾಜ ಕಲ್ಯಾಣ ಮತ್ತು ಹಿಂದುಳಿದ ಅಲ್ಪ ಸಂಖ್ಯಾತರ ಇಲಾಖೆಗಳಿಂದ ನಡೆಸಲ್ಪಡುವ ವಸತಿ ನಿಲಯ ತಕ್ಷಣ ಆರಂಭಿಸುವಂತೆ ಉಪನಿರ್ದೇಶಕರ ಮೂಲಕ ಒತ್ತಾಯಿಸಲಾಗಿದೆ. ಕೂಡಲೇ ಆನ್​ಲೈನ್​ ತೆರೆದು ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶ ಮಾಡಿಕೊಡಬೇಕು. ಇದರಿಂದ ಇನ್ನಿತರ ಜಿಲ್ಲೆಗಳಿಂದ ಉಡುಪಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.

— ಮಂಜುನಾಥ್​ ಭಟ್​. ಉಡುಪಿ ಜಿಲ್ಲಾ ಪ.ಪೂ. ಕಾಲೇಜ್​ಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net