ಕಸ-ತ್ಯಾಜ್ಯ ತೆರವಿನಿಂದ ಸ್ವಚ್ಛಗೊಂಡಿರುವ ಉಡುಪಿಯ ಸಂತೆಕಟ್ಟೆ ಮಾರುಕಟ್ಟೆಯ ಹಿಂಬದಿ ರಸ್ತೆ.
Published on:
Copied
Follow Us
* ವಿಜಯವಾಣಿ ವರದಿ ಫಲಶೃತಿ
* ಸಂತಸದಲ್ಲಿ ಸ್ಥಳೀಯ ನಿವಾಸಿಗರು
ಉಡುಪಿ: ನಗರಸಭಾ ವ್ಯಾಪ್ತಿಯ ಪುತ್ತೂರು ವಾರ್ಡ್ನ ವಿವಿಧ ರಸ್ತೆಗಳಲ್ಲಿ ಎಸೆದಿರುವ ಕಸ&ತ್ಯಾಜ್ಯಗಳ ರಾಶಿಯನ್ನು ತೆರವುಗೊಳಿಸಿ, ಪರಿಸರದಲ್ಲಿ ಸ್ವಚ್ಛತೆ ಕಾಪಾಡಲಾಗಿದೆ.
ಉಡುಪಿ ಸಂತೆಕಟ್ಟೆಯ ಮಾರ್ಕೆಟ್ ಹಿಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ಅನಾಗರಿಕರು ಕಸ ಎಸೆಯುತ್ತಿದ್ದರು. ಅಲ್ಲದೆ, ಮನೆಗಳ ಹಸಿಕಸ ಹಾಗೂ ಮಾಂಸಾಹಾರಗಳ ತ್ಯಾಜ್ಯವನ್ನೂ ಸಹ ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಹಾಕಿ ಇಲ್ಲಿನ ರಸ್ತೆಗಳಲ್ಲಿ ಎಸೆದು ಹೋಗುತ್ತಿದ್ದರು. ಹೀಗಾಗಿ ಈ ರಸ್ತೆ ಮಾರ್ಗದಲ್ಲಿ ದುರ್ನಾತದಿಂದಾಗಿ ಜನರು ಮೂಗುಮುಚ್ಚಿಕೊಂಡು ಓಡಾಡಬೇಕಿತ್ತು.
ಗಮನ ಸೆಳೆದಿದ್ದ ವಿಜಯವಾಣಿ
ಉಡುಪಿಯ ಪ್ರಮುಖ ಪ್ರದೇಶವಾದ ಹಾಗೂ ಹೆಚ್ಚು ಜನರ ಸಂಚಾರ ಇರುವ ಸಂತೆಕಟ್ಟೆ ಮಾರುಕಟ್ಟೆಯ ಹಿಂಭಾಗದ ರಸ್ತೆಯಲ್ಲಿನ ಕಸ&ತ್ಯಾಜ್ಯಗಳ ಕೊಂಪೆಯ ಕುರಿತು ವಿಜಯವಾಣಿಯಲ್ಲಿ ಮೇ 22ರಂದು 'ಸಂತೆಕಟ್ಟೆ ರಸ್ತೆಗಳಲ್ಲಿ ತ್ಯಾಜ್ಯ ಕೊಂಪೆ' ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರಸಭೆಯ ಅಧಿಕಾರಿಗಳು, ಈ ಭಾಗದಲ್ಲಿ ಇರುವ ಎಲ್ಲ ರಸ್ತೆಗಳ ಅಕ್ಕಪಕ್ಕದಲ್ಲಿದ್ದ ಕಸದ ರಾಶಿ ತೆರವು ಮಾಡಿಸಿದೆ. ಇದೀಗ ಈ ಪರಿಸರದಲ್ಲಿ ದುರ್ನಾತ ಮಾಯವಾಗಿದೆ.
ವಿಜಯವಾಣಿಯಲ್ಲಿ ಪ್ರಕಟಗೊಂಡಿದ್ದ ಸಂತಕಟ್ಟೆ ರಸ್ತೆಯಲ್ಲಿ ಕಸದ ಸಮಸ್ಯೆ ವರದಿ.
ಸುಸ್ಥಿಯಲ್ಲಿ ವಿದ್ಯುತ್ ಕಂಬ
ಸಂತೆಕಟ್ಟೆ ಮಾರ್ಕೆಟ್ ಹಿಂಭಾಗದ ರಸ್ತೆ ಮಾರ್ಗದಲ್ಲಿಯೇ ವಿದ್ಯುತ್ ಕಂಬವೊಂದು ವಾಲಿಕೊಂಡಿರುವ ಕುರಿತು ಹಾಗೂ ಅದರಿಂದ ಜನರ ಜೀವಕ್ಕೆ ಅಪಾಯವಾಗುವ ಸಾಧ್ಯತೆಯ ಬಗ್ಗೆಯೂ ವರದಿಯಲ್ಲಿ ಗಮನ ಸೆಳೆಯಲಾಗಿತ್ತು. ಮೆಸ್ಕಾಂನ ಅಧಿಕಾರಿಗಳು ಅಪಾಯಕಾರಿ ಸ್ಥಿಯಲ್ಲಿದ್ದ ಆ ವಿದ್ಯುತ್ ಕಂಬವನ್ನೂ ಸಹ ಸರಿಪಡಿಸಿದ್ದಾರೆ.
ಪರಿಸರದ ಸ್ವಚ್ಛತೆಗಾಗಿ ಕಳಕಳಿಯ ವರದಿ ಮಾಡಿದ್ದ ವಿಜಯವಾಣಿಗೆ ಹಾಗೂ ಸೂಕ್ತ ಕ್ರಮ ಕೈಗೊಂಡ ಅಧಿಕಾರಿಗಳಿಗೆ ರಾಮ ಪೂಜಾರಿ ಸಂತೆಕಟ್ಟೆ. ಅರುಣ್ ಪೂಜಾರಿ ಸಂತೆಕಟ್ಟೆ ಮಾಯಾಡಿ, ಕಿಶೋರ್ ಅಮ್ಮುಂಜೆ, ಉಮೇಶ್ ಶೆಟ್ಟಿ ನಡುಮನೆ ಹಾಗೂ ಸಂತೆಕಟ್ಟೆ ವಾರ್ಡ್ನ ನಾಗರಿಕರು ಅಭಿನಂದನೆ ಸಲ್ಲಿಸಿದ್ದಾರೆ.
"
ಒಂದು ವರ್ಷದಲ್ಲಿ ಆಗದ ಕೆಲಸ ಪತ್ರಿಕೆಯಲ್ಲಿ ವರದಿ ಬಂದ ಬಳಿಕ ಅಧಿಕಾರಿಗಳು ಸಂತೆಕಟ್ಟೆ ಭಾಗದ ರಸ್ತೆಗಳಲ್ಲಿದ್ದ ಕಸ ತೆರವು ಮಾಡಿಸಿದ್ದಾರೆ. ಶುಭ್ರಗೊಂಡ ಸ್ಥಳದಲ್ಲಿ ಮತ್ತೆ ಕಸ ಹಾಕದಂತೆ ತಡೆಯಲು ನಗರಸಭೆಯವರು ಕೂಡಲೇ ಸೂಚನಾ ಫಲಕ ಹಾಗೂ ಕ್ಯಾಮರಾ ಅಳವಡಿಸಬೇಕು. ಕಸ ತೆರವು ಮಾಡಿದ ರಸ್ತೆ ಮಾರ್ಗ ಅಲ್ಲಲ್ಲಿ ಹೊಂಡಗಳಿಂದ ಹದಗೆಟ್ಟಿದ್ದು ಅದನ್ನೂ ದುರಸ್ತಿ ಮಾಡಿಸಬೇಕು.