ಬಿಡಾಡಿ ದನಗಳ ಕಾಟ ವಿಪರೀತ

 ಕಾಸರಗೋಡು ರೈಲು ನಿಲ್ದಾಣದಲ್ಲಿ ಹಳಿಯಲ್ಲೇ ಮೇಯುತ್ತಿರುವ ದನ.
ಕಾಸರಗೋಡು ರೈಲು ನಿಲ್ದಾಣದಲ್ಲಿ ಹಳಿಯಲ್ಲೇ ಮೇಯುತ್ತಿರುವ ದನ.
Published on

ವಿಜಯವಾಣಿ ಸುದ್ದಿಜಾಲ ಕುಂಬಳೆ

ಕಾಸರಗೋಡು ಹೊಸ ಬಸ್ ನಿಲ್ದಾಣ ಮತ್ತು ಇತರ ಸ್ಥಳಗಳು ಬಿಡಾಡಿ ದನಗಳ ಆಶ್ರಯ ತಾಣವಾಗುತ್ತಿರುವುದರಿಂದ, ಸಮಸ್ಯೆಯನ್ನು ಪರಿಹರಿಸಲು ಕಾಸರಗೋಡು ನಗರಸಭೆ ಮಂಗಳೂರು ಮಹಾನಗರ ಪಾಲಿಕೆಯ ತಜ್ಞರ ಸಹಾಯ ಪಡೆಯಲು ನಿರ್ಧರಿಸಿದೆ. ಬಸ್ ನಿಲ್ದಾಣ ಹಾಗೂ ಎಲ್ಲೆಂದರಲ್ಲಿ ಅಲೆದಾಡುತ್ತಿರುವ ಬಿಡಾಡಿ ದನಗಳನ್ನು ಹಿಡಿದು ಚೆನ್ನಿಕ್ಕರದಲ್ಲಿರುವ ಹಳೆಯ ದೊಡ್ಡಿಗೆ ಸ್ಥಳಾಂತರಿಸುವ ನಗರಸಭೆಯ ಪ್ರಯತ್ನ ತಿಂಗಳು ಕಳೆದರೂ ಯಶಸ್ವಿಯಾಗಿಲ್ಲ.
ನಗರಸಭೆಯಿಂದ ನೇಮಿಸಲ್ಪಟ್ಟ ತಂಡ ಕಳೆದ ಒಂದು ತಿಂಗಳಿನಿಂದ ಹಗಲು ರಾತ್ರಿ ದನಗಳನ್ನು ಹಿಡಿಯಲು ಶ್ರಮಿಸುತ್ತಿದೆ. ತಂಡ ಸ್ಥಳಕ್ಕೆ ತಲುಪುವ ಮೊದಲೇ ಜಾನುವಾರುಗಳು ಅಲ್ಲಿಂದ ಓಡಿಹೋಗುವುದರಿಂದ ಒಂದೇ ಒಂದು ದನವನ್ನು ಈವರೆಗೆ ಹಿಡಿಯಲು ಸಾಧ್ಯವಾಗಿಲ್ಲ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಪ್ರತಿ ದನವನ್ನು ಹಿಡಿಯಲು 5 ಸಾವಿರ ರೂ.ವರೆಗೆ ಬಹುಮಾನ ಘೋಷಿಸಿದ್ದರೂ ಪ್ರಯತ್ನಗಳು ಫಲ ನೀಡುತ್ತಿಲ್ಲ ಎಂದು ನಗರಸಭೆ ಉಪಾಧ್ಯಕ್ಷ ಕೆ.ಎಂ.ಹನೀಫಾ ತಿಳಿಸುತ್ತಾರೆ.
ಚೆನ್ನಿಕ್ಕರ ದೊಡ್ಡಿ ನವೀಕರಣ: ಚೆನ್ನಿಕ್ಕರದಲ್ಲಿರುವ ಹಳೆಯ ಜಾನುವಾರು ದೊಡ್ಡಿಯನ್ನು ನವೀಕರಿಸಿ ಬಿಡಾಡಿ ದನಗಳಿಗೆ ಆಶ್ರಯ ಕಲ್ಪಿಸುವ ಪ್ರಕ್ರಿಕೆಯನ್ನು ನಗರಸಭೆ ಆರಂಭಿಸಿದೆ. ಬಸ್ ನಿಲ್ದಾಣ ಮತ್ತಿತರ ಪ್ರದೇಶಗಳಿಂದ ಹಿಡಿದ ಜಾನುವಾರುಗಳನ್ನು ಅಲ್ಲಿಗೆ ಸ್ಥಳಾಂತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ನಗರದ ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜಾನುವಾರುಗಳನ್ನು ಬಿಡುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ. ಬಸ್ ನಿಲ್ದಾಣದಲ್ಲಿ ಅಲೆದಾಡುವ ಜಾನುವಾರುಗಳನ್ನು ಹಿಡಿದು ಚೆನ್ನಿಕ್ಕರದ ದೊಡ್ಡಿಗೆ ಸ್ಥಳಾಂತರಿಸಿದರೆ ಮಾಲೀಕರಿಗೆ ಪ್ರಬಲ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ. ಅಲ್ಲದೆ ಈ ವಿಚಾರದಲ್ಲಿ ಅನಗತ್ಯ ವಿವಾದಗಳು ಮತ್ತು ಸಂಘರ್ಷಗಳಿಗೆ ಕಾರಣವಾಗದೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಿನ್ನೆಲೆಯಲ್ಲಿ ಮಂಗಳೂರಿನ ತಜ್ಞರ ಸಹಾಯದಿಂದ ಹೊಸ ರೀತಿಯಲ್ಲಿ ಜಾನುವಾರುಗಳನ್ನು ಹಿಡಿಯುವ ಕ್ರಮಕ್ಕೆ ನಗರಸಭೆ ಮುಂದಾಗಿದೆ.

ವಾಹನ ಸಂಚಾರಕ್ಕೆ ತೊಡಕು

ನಗರದ ಹೊಸ ಬಸ್ ನಿಲ್ದಾಣದಲ್ಲಿ ಠಿಕಾಣಿ ಹೂಡುವ ಬಿಡಾಡಿ ದನಗಳು ಬಸ್ ಸಹಿತ ವಾಹನಗಳಿಗೆ ದೊಡ್ಡ ಸವಾಲಾಗಿವೆ. ಹಠಾತ್ ರಸ್ತೆ ಮಧ್ಯೆ ಬರುವುದು, ಬಸ್ ತಿರುಗಿಸುವ ಸ್ಥಳಗಳಲ್ಲಿ ಮಲಗುವುದು, ಪ್ರಯಾಣಿಕರ ಹಿಂದೆ-ಮುಂದೆ ಸಂಚರಿಸಿ ಬ್ಯಾಗ್‌ಗಳನ್ನು ಎಳೆಯಲು ಯತ್ನಿಸುತ್ತವೆ. ರಾತ್ರಿ ವೇಳೆ ರಸ್ತೆ ಬದಿ ಗುಂಪಾಗಿ ಮಲಗುವುದರಿಂದ ವಾಹನ ಸಂಚಾರಕ್ಕೆ ತೀರಾ ಅಪಾಯಕಾರಿಯಾಗಿದೆ.

ಬಿಡಾಡಿ ದನಗಳನ್ನು ನಿಯಂತ್ರಿಸಲು ಕಳೆದೊಂದು ತಿಂಗಳಿನಿಂದ ನಡೆಸುತ್ತಿರುವ ಪ್ರಯತ್ನ ಫಲ ನಿಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ತಜ್ಞ ತಂಡವನ್ನು ಕರೆಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ದನಗಳನ್ನು ಸಾಕಿ ರಸ್ತೆಗೆ ಬಿಟ್ಟು ತೊಂದರೆ ಉಂಟು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

— ಶಾಹಿನಾ ಸಲೀಂ, ಕಾಸರಗೋಡು ನಗರಸಭೆ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net