ಎಲ್ಲರ ಕೈಯಲ್ಲಿರಲಿ ಶ್ರೀಕೃಷ್ಣ ನೀಡಿದ ಕೈಪಿಡಿ

ಉಡುಪಿಯ ಗೀತಾ ಮಂದಿರದಲ್ಲಿ ಗೀತಾ ಜಯಂತಿ ನಿಮಿತ್ತ ಆಯೋಜಿಸಿದ್ದ ಪಾರಾಯಣವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ ಇತರರಿದ್ದರು.
ಉಡುಪಿಯ ಗೀತಾ ಮಂದಿರದಲ್ಲಿ ಗೀತಾ ಜಯಂತಿ ನಿಮಿತ್ತ ಆಯೋಜಿಸಿದ್ದ ಪಾರಾಯಣವನ್ನು ಸುಗುಣೇಂದ್ರ ಶ್ರೀ ಉದ್ಘಾಟಿಸಿದರು. ಸುಶ್ರೀಂದ್ರ ಶ್ರೀ ಇತರರಿದ್ದರು.
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಗೀತಾ ಮಂದಿರದಲ್ಲಿ ಗೀತಾ ಜಯಂತಿ ಆಚರಣೆ

ಉಡುಪಿ: ಗೀತಾ ಜಯಂತಿಯ ಈ ದಿನದಂದು ಭಗವದ್ಗೀತೆಯ ಮಹತ್ವವನ್ನು ನಾವೆಲ್ಲ ಸ್ಮರಿಸಿಕೊಳ್ಳಬೇಕು. ಐದು ಸಾವಿರ ವರ್ಷದ ಹಿಂದೆ ಭಗವದ್ಗೀತೆಯನ್ನು ಶ್ರೀಕೃಷ್ಣ ಕೇವಲ ಅರ್ಜುನನಿಗೆ ಮಾತ್ರ ಉಪದೇಶ ಮಾಡಿಲ್ಲ. ಅದು ಅನಾದಿ ಅಥವಾ ಸೃಷ್ಟಿ ಕಾಲದಿಂದಲೇ ಇರುವಂತಹದ್ದು. ಆದಿರೂಪನಾದ ಅನಂತಪದ್ಮನಾಭನ ಮುಖದಿಂದ ಬಂದಂತಹ ಸರ್ವಮೂಲ ಗ್ರಂಥವದು. ಅದು ಕೃಷ್ಣನ ಮೂಲಕ ಮತ್ತೊಮ್ಮೆ ಅನಾವರಣಗೊಂಡ ಕೈಪಿಡಿಯಾಗಿದೆ ಎಂದು ಸುಗುಣೇಂದ್ರ ಶ್ರೀ ತಿಳಿಸಿದರು.
ಗೀತಾ ಜಯಂತಿ ಹಿನ್ನೆಲೆಯಲ್ಲಿ ಉಡುಪಿಯ ಗೀತಾ ಮಂದಿರದಲ್ಲಿ ಸೋಮವಾರ (ಡಿ.1) ಬೆಳಗ್ಗೆ ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಎಲ್ಲರ ಕೈಯಲ್ಲಿ ಶ್ರೀಕೃಷ್ಣನ ಕೈಪಿಡಿ ಇರಲಿ ಎಂದರು.

 ಮಕ್ಕಳಿಗೆ ಗೀತೆ ಹೇಳಿಕೊಡಿ 

ನಾವು ಈಗ ಯಾವುದೇ ವಸ್ತು ಕೊಂಡಾಗ ಯಾವ ರೀತಿ ಅದನ್ನು ಬಳಸಬೇಕೆಂಬ ಮಾಹಿತಿ ಇರುವ ಸಣ್ಣ ಕೈಪಿಡಿ ಇರುತ್ತದೆ. ಅದೇರೀತಿ ಮನುಷ್ಯರ ಜೀವನ ಹೇಗಿರಬೇಕೆಂಬ ಕುರಿತು ಶ್ರೀಕೃಷ್ಣ ನೀಡಿದ ಕೈಪಿಡಿಯೇ ಭಗವದ್ಗೀತೆ. ಅದು ಸಾರ್ವಕಾಲಿಕ ಗೈಡ್​ ಆಗಿದೆ. ಎಲ್ಲ ತಾಯಂದಿರು ದೇವಸ್ಥಾಕ್ಕೆ ಬಂದಾಗ ತಮ್ಮ ಮಕ್ಕಳಿಗೆ ಒಳ್ಳೆದಾಗಲಿ ಎಂದು ಪ್ರಾರ್ಥಿಸುತ್ತಾರೆ. ಆ ಪ್ರಾರ್ಥನೆ ಈಡೇರಬೇಕಾದರೆ ಮಕ್ಕಳಿಗೆ ಸಣ್ಣವರಿರುವಾಗಲೇ ಭಗವದ್ಗೀತೆ ಹೇಳಿಕೊಡಬೇಕು ಎಂದು ಸುಗುಣೇಂದ್ರ ಶ್ರೀ ಸಲಹೆ ನೀಡಿದರು.
ಶ್ರೀಗಳಿಂದ ಪಾರಾಯಣ
ಸುಮಾರು ಎರಡೂವರೆ ತಾಸುಗಳ ಕಾಲ ಗೀತಾ ಮಾತೆಯರು ಪಾರಾಯಣ ಮಾಡುತ್ತಿರುವಾಗ ಸುಗುಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀಗಳೂ ಸಹ ಉಪಸ್ಥಿತರಿದ್ದು ಗೀತಾ ಪಾರಾಯಣ ಮಾಡುವ ಮೂಲಕ ಗೀತಾ ಜಯಂತಿ ಆಚರಿಸಿದರು. ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ದಿವಾನ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್​ ಭಟ್​, ಉಮಾ ಅನಂತಕೃಷ್ಣ, ಗೌತಮ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net