ಉಡುಪಿ:ಅಪೇಕ್ಷೆಯಿಂದ ಏನೂ ಲಭಿಸದು. ನಿಷ್ಕಾಮ ಕರ್ಮದಿಂದ ಫಲ ಲಭಿಸುತ್ತದೆ. ಆಸೆ ಹೆಚ್ಚಾದಷ್ಟು ದು:ಖವೂ ಹೆಚ್ಚಾಗುತ್ತದೆ. ಆಸೆಯ ಹಿಂದೆ ಹೋದವರೆಲ್ಲ ಅನ್ಯರ ದಾಸರಾಗುತ್ತಾರೆ. ಆಸೆಯೇ ಇಲ್ಲದಿದ್ದರೆ ಜನರೇ ಅವರ ದಾಸರಾಗುತ್ತಾರೆ. ಹೀಗಾಗಿ ದೇವರ ಪ್ರೀತಿಯಷ್ಟೇ ಸಾಕು ಎಂದು ಬಯಸಿದರೆ ಎಲ್ಲವೂ ಲಭಿಸುತ್ತದೆ. ಜೀವದಲ್ಲಿ ನಡೆಯುವ ಎಲ್ಲ ಫಟನೆಯೂ ಭಗವಂತನ ಸಂಕಲ್ಪ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದಿಂದ ಮುಂದುವರಿದ ಮಾಸಿಕ "ಬೃಹತ್ ಗೀತೋತ್ಸವ'ದಲ್ಲಿ ಗುರುವಾರ (ನ.13) ಆಯೋಜಿಸಿದ್ದ ಸಂತ- ಸಂದೇಶ-ಸಂತ -ಸನ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ಪ್ರದಾನ
ವಜ್ರದೇಹಿ ಮಠದ ಶ್ರೀಗಳಿಗೆ, ಉದ್ಯಮಿ ಶಿವರಾಮ ಶೆಟ್ಟಿ ಮುಂಬಯಿ, ಸರ್ಕಾರೇತರ ಸಮಾಜ ಸೇವಾ ಸಂಸ್ಥೆಯಾದ ಪೀಸ್ ಫೌಂಡೇಶನ್ನ ಗೌರವಾಧ್ಯಕ್ಷ ಥಾಮಸ್ ಡಿಸೋಜಾ ಅವರಿಗೆ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು.
ಕೃಷ್ಣನೆಂದರೆ ಆಕರ್ಷಣೆ
ಸಂತ ಸಂದೇಶ ನೀಡಿದ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ನಾನಾ ಕಾರಣಗಳಿಂದ ಜಗತ್ತು ಇಂದು ತಲ್ಲಣದಲ್ಲಿದೆ. ಅದನ್ನು ಸುಸ್ಥಿರಗೊಳಿಸಲು ಭಗವದ್ಗೀತೆಯೆಂಬ ಔಷಧದಿಂದ ಮಾತ್ರ ಸಾಧ್ಯ ಎಂಬ ಸಂಕಲ್ಪ ಮಾಡಬೇಕಿದೆ. ಅದೇ ನಿಟ್ಟಿನಲ್ಲಿ ಪುತ್ತಿಗೆ ಶ್ರೀಗಳು ಗೀತೆಯ ಪ್ರಸಾರ-ಪ್ರಚಾರ ಮಾಡುತ್ತ ವಿಶ್ವಕ್ಕೆ ಶ್ರೇಷ್ಠವಾದ ಪರ್ಯಾಯದ ಕೊಡುಗೆ ನೀಡಿದ್ದಾರೆ. ಕೃಷ್ಣ ಎಂದರೆ ಆಕರ್ಷಣೀಯ.ಈ ಜಗತ್ತು ಕೃಷ್ಣನ ಕಡೆಗೆ ಬರಬೇಕು, ಕೃಷ್ಣನನ್ನು ಹೊಂದಬೇಕು. ಅದರಿಂದ ಯಾರಿಗೂ ಕಷ್ಟ ಬರುವುದಿಲ್ಲ. ಗೀತೆಯು ಹಿಂದು ಸಮಾಜದ ಶ್ರೇಷ್ಠ ಗ್ರಂಥ ಆಗಬೇಕು ಎನ್ನುವುದು ನಮ್ಮ ಅಪೇಕ್ಷೆ ಎಂದರು.
ಶ್ರೀ ಪುತ್ತಿಗೆ ವಿದ್ಯಾಪಿಠದ ವಿದ್ವಾಂಸ ಸಮರ್ಥ ಜೋಶಿ ವೇದಘೋಷ ಪಠಿಸಿದರು. ವಿದ್ವಾನ್ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಸಹಕರಿಸಿದರು.
ಗೀತಾ ಪಠಣದಿಂದ ಜೀವನದಲ್ಲಿ ಶಾಂತಿ
ಸದಾಶಯ ಚಿಂತನೆಯಿಂದ ಆರೋಗ್ಯ ಸಿದ್ಧಿ-ವೃದ್ಧಿಯಾಗುತ್ತದೆ ಎಂದು ವೈದ್ಯಲೋಕ ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ. ಇಲ್ಲಿ ನನ್ನದು ಏನೂ ಇಲ್ಲ, ಎಲ್ಲವೂ ಭಗವಂತನದ್ದು ಎಂಬ ಸತ್ಯ ಅರಿತರೆ ಬದುಕು ಸರಳ-ಸಜೀವವಾಗುತ್ತದೆ. ಏನನ್ನಾದರೂ ಆಸೆ ಪಡುವುದಿದ್ದರೆ ಭಗವಂತನ ಪ್ರೀತಿ ಮಾತ್ರ ಬಯಸಬೇಕು. ಹಿಂದಿನ ಕಾಲದಲ್ಲಿ ಏನೂ ಇರಲಿಲ್ಲ. ಆದರೆ, ಶಾಂತಿಯಿತ್ತು. ಈಗ ಎಲ್ಲ ಬಗೆಯ ಸೌಲಭ್ಯವೂ ಇದೆ. ಶಾಂತಿ ಲಭಿಸುತ್ತಿಲ್ಲ. ಎಲ್ಲ ಸೌಕರ್ಯ ಪಡೆದು ಶಾಂತಿಯನ್ನೇ ಕಳೆದುಕೊಂಡಿದ್ದೇವೆ. ಸಾಮಗ್ರಿ (ಬಯಕೆ) ಹೆಚ್ಚಾದಷ್ಟು ಅಶಾಂತಿ ಹೆಚ್ಚುತ್ತದೆ. ಹೀಗಾಗಿ ಭಗವದ್ಗೀತೆ ಪಠಣ ಅಥವಾ ಶ್ರವಣದಿಂದ ಜೀವನದಲ್ಲಿ ನೆಮ್ಮದಿಯ ಶಾಂತಿ ಲಭಿಸುತ್ತದೆ ಎಂದು ಸುಗುಣೇಂದ್ರ ಶ್ರೀಗಳು ಸಂದೇಶ ನೀಡಿದರು.
"
ಶ್ರೀಕೃಷ್ಣನ ಅನುಗ್ರಹ ಇದ್ದರೆ ಕಲಿಯನ್ನೂ ನಿಗ್ರಹಿಸಬಹುದು ಎನ್ನುವುದನ್ನು ಕಲಿಯುಗದ ಆರಂಭದಲ್ಲಿ ಆಡಳಿತ ನಡೆಸಿದ್ದ ಭೀಮಸೇನ ತಿಳಿಸಿರುವುದು ಮಹಾಭಾರತದಲ್ಲಿ ಉಲ್ಲೇಖವಿದೆ. ಭಗವಂತನೇ ನನ್ನ ಸರ್ವಸ್ವ ಎಂದು ತಿಳಿದವರಿಗೆ ಯಾವತ್ತೂ ಸೋಲಿಲ್ಲ. ಭಗವದ್ಗೀತೆಯ ಸಂದೇಶ ಪಾಲಿಸಿದರೆ ಭಾರತ ವಿಶ್ವಗುರು ಆಗುವುದು ಸುಲಭ.