ಸಿಹಿಜೇನು ಆದಾಯದ ಕಾಮಧೇನು

ತೋಟವೊಂದರಲ್ಲಿ ಜೇನು ಸಾಕಾಣಿಕೆಗಾಗಿ ಅಳವಡಿಸಿರುವ ಜೇನುಪೆಟ್ಟಿಗೆಗಳು (ಸಾಂದರ್ಭಿಕ ಚಿತ್ರ).
ತೋಟವೊಂದರಲ್ಲಿ ಜೇನು ಸಾಕಾಣಿಕೆಗಾಗಿ ಅಳವಡಿಸಿರುವ ಜೇನುಪೆಟ್ಟಿಗೆಗಳು (ಸಾಂದರ್ಭಿಕ ಚಿತ್ರ).
Published on

* ವೈಜ್ಞಾನಿಕ ಜೇನುಗಾರಿಕೆಗೆ ಹೊಸ ಯೋಜನೆ

*  ಸಹಾಯಧನದೊಂದಿಗೆ ತರಬೇತಿ ಆಯೋಜನೆ

ಪ್ರಶಾಂತ ಭಾಗ್ವತ ಉಡುಪಿ
ಕೃಷಿ ಮತ್ತು ತೋಟಗಾರಿಕಾ ಬೆಳೆಗಳಲ್ಲಿ ಜೇನುಹುಳುಗಳ ಪರಾಗಸ್ಪರ್ಶ ಕ್ರಿಯೆಯಿಂದ ಸಿದ್ಧಗೊಳ್ಳುವ ಜೇನುತುಪ್ಪದ ಮಹತ್ವ ಎಲ್ಲರಿಗೂ ತಿಳಿದ ವಿಚಾರ. ಅಂತಹ ಜೇನುಗಾರಿಕೆಯನ್ನು ಇನ್ನಷ್ಟು ವೈಜ್ಞಾನಿಕವಾಗಿ ಅಭಿವೃದ್ಧಿಗೊಳಿಸಲು ಮತ್ತು ಜೇನು ಉತ್ಪನ್ನಗಳಿಗೆ ಹೆಚ್ಚು ಪ್ರಚಾರ ನೀಡಲು ಹೊಸ ಯೋಜನೆ ಆರಂಭಗೊಂಡಿದೆ.
ಆರೋಗ್ಯ ಹಾಗೂ ಆದಾಯ ವರ್ಧಕ ಕಾಮಧೇನುವಾದ ಜೇನುತುಪ್ಪ ವೃದ್ಧಿಗೆ ತೋಟಗಾರಿಕಾ ಇಲಾಖೆ ವಿಶೇಷವಾಗಿ ಭಾರತ ಸರ್ಕಾರವು 'ರಾಷ್ಟ್ರೀಯ ಜೇನು ಸಾಕಾಣಿಕೆ ಮತ್ತು ಜೇನು ಮಿಷನ್​ (ಎನ್​ಬಿಎಚ್​ಎಂ)' ಯೋಜನೆ ಪ್ರಾರಂಭಿಸಿದೆ. 
ಯೋಜನೆಯ ಉದ್ದೇಶವೇನು?
ಜೇನು ಸಾಕಾಣಿಕೆಯ ಸಮಗ್ರ ಅಭಿವೃದ್ಧಿ, ವೈಜ್ಞಾನಿಕ ಜೇನು ಸಾಕಾಣಿಕೆಗೆ ಪ್ರೋತ್ಸಾಹ ಮತ್ತು ಗುಣಮಟ್ಟದ ಜೇನು ಉತ್ಪಾದನೆಗೆ ಸಹಕಾರ ನೀಡುವುದೇ ಎನ್​ಬಿಎಚ್​ಎಂ ಯೋಜನೆಯ ಉದ್ದೇಶ. ಬೆಳೆಗಳ ಪರಾಗಸ್ಪರ್ಶಕ್ಕೆ ಅಗತ್ಯವಾದ ಜೇನುನೊಣಗಳ ಪೆಟ್ಟಿಗೆಯನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡಲು ಜೇನು ಸಾಕಾಣಿಕೆಯ 'ಕಸ್ಟಮ್​ ಹೈರಿಂಗ್​ ಸೆಂಟರ್​' ತೆರೆಯಲಾಗುತ್ತಿದೆ.

ಮಹಿಳಾ ಗುಂಪುಗಳಿಗೆ ತರಬೇತಿ

ಉನ್ನತ ಮೌಲ್ಯವನ್ನೂ ಹೊಂದಿರುವ ಜೇನುತುಪ್ಪ, ಜೇನು ಉತ್ಪನ್ನಗಳ ಉತ್ಪಾದನೆ, ಯಂತ್ರೋಪಕರಣ, ಉಪಕರಣ ಹಾಗೂ ಅಗತ್ಯ ಮೂಲಸೌಕರ್ಯ ಹೊಂದಲು ಯೋಜನೆಯಡಿ ಸಹಾಯಧನ ನೀಡಲಾಗುತ್ತದೆ. ಮಹಿಳಾ ಗುಂಪುಗಳಿಗೆ ಅದರಲ್ಲೂ ಆದಿವಾಸಿ ಮಹಿಳಾ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅವರಿಗೆ ವೈಜ್ಞಾನಿಕವಾಗಿ ಜೇನು ಸಾಕಾಣಿಕೆ ನಡೆಸಲು ತರಬೇತಿಯನ್ನೂ ನೀಡಲಾಗುತ್ತದೆ. ಮಹಿಳಾ ಹೊಸ ಗುಂಪುಗಳ ರಚನೆಗೆ 20 ಸಾವಿರ ರೂ. (ಪ್ರತಿ ಗುಂಪಿಗೆ) ಹಾಗೂ ಚಟುವಟಿಕೆ ನಿರಂತರವಾಗಿರಲು ಕಾರ್ಯನಿಧಿಯಾಗಿ ಪ್ರತಿ ಗುಂಪಿಗೆ 50 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ.

ಯಂತ್ರೋಪಕರಣ ಖರೀದಿಗೆ ಸಹಾಯಧನ

ವಿವಿಧ ಜೇನುನೊಣಗಳ ಗುಣಮಟ್ಟದ ನ್ಯೂಕ್ಲಿಯಸ್​ ಸ್ಟಾಕ್​, ರಾಣಿ ಜೇನುನೊಣ ಉತ್ಪಾದನೆಗೆ ಸಹಾಯಧನ ನೀಡಲಾಗುವುದು. ಪ್ರಾದೇಶಿಕ ಜೇನು ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲು, ಜೇನು ಹಾಗೂ ಇನ್ನಿತರ ಜೇನು ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಈಗಿರುವ ಪ್ರಯೋಗಾಲಯ ವೃದ್ಧಿಗೂ ಸಹಾಯಧನ ಲಭ್ಯವಿದೆ. ಜಿಲ್ಲಾ ಮಟ್ಟದಲ್ಲಿ ಸಣ್ಣ ಜೇನು ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದ್ದು, ಅವು ದೊಡ್ಡ ಪ್ರಾದೇಶಿಕ ಪ್ರಯೋಗಾಲಯಗಳ ಉಪಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಜೇನುನೊಣಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳು ಹಾಗೂ ಸೋಂಕುಗಳ ತ್ವರಿತ ಪತ್ತೆಗಾಗಿ 'ನ್ಯಾಷನಲ್​ ಬೀ ಬೋರ್ಡ್​' ವತಿಯಿಂದ ರೋಗ ನಿರ್ಣಯ ಪ್ರಯೋಗಾಲಯಗಳ ಸ್ಥಾಪನೆಗೂ ಅವಕಾಶವಿದೆ. ದುಬಾರಿ ಯಂತ್ರೋಪಕರಣಗಳಾದ ಪೋಲನ್​ ಟ್ರೇ, ರಾಯಲ್​ ಜೆಲ್ಲಿ ಉತ್ಪಾದನಾ ಕಿಟ್​, ಬೀ ವೆನಮ್​ ಎಕ್ಸ್​ಸ್ಟ್ರಾಕ್ಟರ್​, ಕಾಂಬ್​ ಹನಿ ಉತ್ಪಾದನಾ ಉಪಕರಣ, ಪ್ರೋಪೊಲಿಸ್​ ಉತ್ಪಾದನಾ ಸಾಧನಗಳ ಖರೀದಿಗೂ ಸಹಾಯಧನ ನೀಡಲಾಗುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಿಧೀಶ್​ ಹೊಳ್ಳ.

ಕೃಷಿಯ ಇಳುವರಿಯೂ ಹೆಚ್ಚಳ

ಹಣಗಳಿಕೆಗಾಗಿ ಮಾತ್ರ ಜೇನು ಸಾಕಾಣಿಕೆ ಮಾಡಲಾಗುತ್ತದೆ ಎಂಬ ಭಾವನೆ ಹಲವರಲ್ಲಿದೆ. ಆದರೆ, ಈ ಕಾರ್ಯದಿಂದ ಕೃಷಿಗೆ ಅನುಕೂಲವಾಗಿದ್ದು ಸಾವಯವ ಕೃಷಿಕರಿಗೆ ಇದು ವರದಾನವಾಗಿದೆ. ಜೇನು ಇರುವ ಪರಿಸರದಲ್ಲಿ ಕೃಷಿಯ ಇಳುವರಿಯೂ ಶೇ.20ರಷ್ಟು ಹೆಚ್ಚುತ್ತದೆ. ಅಲ್ಲದೆ, ಜೇನುಗಳ ಪರಾಗಸ್ಪರ್ಶ ಕ್ರಿಯೆಯಿಂದ ಸಾವಯವ ಕೃಷಿ ಉತ್ಪನ್ನಗಳ ಬಾಳಿಕೆಯ ಅವಧಿಯೂ ಹೆಚ್ಚು. ಅವು ಸಂಗ್ರಹಿಸುವ ಪರಾಗದಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳೂ ಇರುವುದರಿಂದ ಜೇನು ಸೇವನೆಯಿಂದ ಆರೋಗ್ಯವೂ ವೃದ್ಧಿಯಾಗುತ್ತದೆ. ಜೇನು ಕೃಷಿಗೆ ರೋಗಬಾಧೆಯಿದ್ದರೂ ನಷ್ಟದಾಯಕವಲ್ಲ. ಲಾಭ-ಆರೋಗ್ಯದಾಯಕ ಜೇನು ಸಾಕಾಣಿಕೆಗೆ ಎಕರೆಗಟ್ಟಲೆ ಜಾಗ ಬೇಕಿಲ್ಲ. ಲಭ್ಯವಿರುವ ಕನಿಷ್ಠ ಸ್ಥಳವೂ ಸಾಕು. ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸಬಹುದು.
"

ಜೇನು ಸಾಕಾಣಿಕೆಯ ಉತ್ತೇಜನಕ್ಕೆ ಎನ್​ಬಿಎಚ್​ಎಂ ಯೋಜನೆಯಡಿ ಹೆಚ್ಚಿನ ಮಹತ್ವ ಸಿಗಲಿದ್ದು, ಮಧುವನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಜೇನು ಸಾಕಾಣಿಕೆ ತರಬೇತಿ ಪಡೆದವರಿಗೆ ಹಾಗೂ ಹೊಸದಾಗಿ ಜೇನು ಸಾಕಾಣಿಕೆ ಮಾಡುವವರಿಗೆ ಇಲಾಖೆಯಿಂದ ತರಬೇತಿ ನೀಡಲಾಗುವುದು. ಹೊಸ ಯೋಜನೆಯ ರೂಪು-ರೇಷೆ ಶೀಘ್ರದಲ್ಲೇ ಸಿದ್ಧಗೊಳ್ಳಲಿದೆ. ಆಸಕ್ತರು ಮಾಹಿತಿಗಾಗಿ ತಾಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಮತ್ತು ಜಿಲ್ಲಾ ಮಟ್ಟದಲ್ಲಿ ತೋಟಗಾರಿಕಾ ಜಂಟಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು.

— ಕ್ಷಮಾ ಪಾಟೀಲ. ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net