ತೋಟ ಬಿಟ್ಟುಕೊಟ್ಟ ಉದಾರ ಮನಸ್ಸುಗಳು

ಕೋಡಿಜಾಲ್-ಕರ್ಮಾರ್ ನೇರ ಸಂಪರ್ಕ ರಸ್ತೆ ಇದೀಗ ಸಾಕಾರ
ಕೋಡಿಜಾಲ್-ಕರ್ಮಾರ್ ನೇರ ಸಂಪರ್ಕ ರಸ್ತೆ ಇದೀಗ ಸಾಕಾರ
Published on
ಅನ್ಸಾರ್ ಇನೋಳಿ ಉಳ್ಳಾಲ
ದಶಕಗಳ ಬೇಡಿಕೆಯಾಗಿದ್ದ ಕೋಡಿಜಾಲ್-ಕರ್ಮಾರ್ ನೇರ ಸಂಪರ್ಕ ರಸ್ತೆ ಇದೀಗ ಸಾಕಾರಗೊಂಡಿದೆ. ಸ್ಥಳೀಯರ ಮನವಿಗೆ ಸ್ಪಂದಿಸಿದ ಶಾಸಕರು ಮತ್ತು ಅದಕ್ಕೆ ಪೂರಕವಾಗಿ ತಮ್ಮ ತೋಟ-ಜಮೀನುಗಳನ್ನು ಉದಾರವಾಗಿ ಬಿಟ್ಟುಕೊಟ್ಟ ಸ್ಥಳೀಯರ ಸಹಕಾರದಿಂದಾಗಿ, ಈ ಭಾಗದ ಜನರ ಬಹುದಿನದ ಕನಸು ನನಸಾಗಿದೆ.

ದಶಕಗಳ ಬೇಡಿಕೆಗೆ ಮನ್ನಣೆ

ಕೊಣಾಜೆ ಗ್ರಾಮದ ಕೋಡಿಜಾಲ್‌ನಿಂದ ಕರ್ಮಾರ್ ಮೂಲಕ ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣಕ್ಕೆ ನೇರ ಸಂಪರ್ಕ ಕಲ್ಪಿಸಬೇಕೆಂಬುದು ಕಳೆದ 40 ವರ್ಷಗಳ ಸ್ಥಳೀಯರ ಬೇಡಿಕೆಯಾಗಿತ್ತು. ನಾಲ್ಕು ವರ್ಷಗಳ ಹಿಂದೆ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ಯು.ಟಿ.ಖಾದರ್ ಅವರಲ್ಲಿ ಸ್ಥಳೀಯರು ಈ ಬೇಡಿಕೆಯನ್ನು ಮುಂದಿಟ್ಟಿದ್ದರು. ಶಾಸಕರ ಸೂಚನೆಯಂತೆ ಜಾಗದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದೀಗ ಕಾಂಕ್ರೀಟ್ ರಸ್ತೆ ನಿರ್ಮಾಣದ ಮೂಲಕ ಎರಡು ಊರುಗಳ ನಡುವಿನ ಸಂಚಾರ ಸುಗಮವಾಗಿದೆ.

ಉದಾರತೆ

ಇಂದಿನ ದಿನಗಳಲ್ಲಿ ಸಾರ್ವಜನಿಕ ಉದ್ದೇಶಕ್ಕೆ ಜಾಗ ಬಿಟ್ಟುಕೊಡಲು ಹಿಂದೇಟು ಹಾಕುವವರೇ ಹೆಚ್ಚು. ಆದರೆ, ಈ ರಸ್ತೆ ನಿರ್ಮಾಣಕ್ಕೆ ದಿ.ಮಹಮ್ಮದ್ ಹಾಜಿ ಅವರ ಕುಟುಂಬ, ಅಬ್ದುಲ್ ರಹ್ಮಾನ್ ಕೋಡಿಜಾಲ್, ಸಿರಾಜ್, ಅಶ್ರ್ ಮತ್ತು ಮಹಮ್ಮದ್ ಹಾಜಿ ಅವರು ತಮ್ಮ ಖಾಸಗಿ ಜಮೀನು ಮತ್ತು ತೋಟವನ್ನು ಬಿಟ್ಟುಕೊಡುವ ಮೂಲಕ ಮಾದರಿಯಾಗಿದ್ದಾರೆ.

ಜನರ ಸಹಕಾರದಿಂದಲೇ ಅಭಿವೃದ್ಧಿ ಸಾಧ್ಯ. ಕೋಡಿಜಾಲ್-ಕರ್ಮಾರ್ ರಸ್ತೆ ನಿರ್ಮಾಣದಿಂದ ಮುಖ್ಯ ರಸ್ತೆಗೆ ಪರ್ಯಾಯ ಮಾರ್ಗ ಲಭ್ಯವಾದಂತಾಗಿದೆ. ಇದರಿಂದಾಗಿ ಒಂದು ಭಾಗದಲ್ಲಿ ರಸ್ತೆ ಬ್ಲಾಕ್ ಆದರೆ ಈ ರಸ್ತೆ ಪರ್ಯಾಯವಾಗಿ ಬಳಸಬಹುದಾಗಿದೆ.

ನಾಲ್ಕು ವರ್ಷಗಳ ಹಿಂದೆ ಶಾಸಕರು ನೀಡಿದ ಭರವಸೆ ಇಂದು ಈಡೇರಿದೆ. ಐದು ಕುಟುಂಬಗಳು ಜಾಗ ನೀಡಿದ ಕಾರಣ ಸುಂದರ ರಸ್ತೆ ನಿರ್ಮಾಣ ಸಾಧ್ಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net