ಎಣ್ಮಕಜೆ ಗ್ರಾಮ ಪಂಚಾಯಿತಿಯ ಪೆರ್ಲ ಸಮೀಪದ ಬಜಕೂಡ್ಲಿನಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ಮೂಲ ಸೌಕರ್ಯಗಳಿದ್ದರೂ ನಿರ್ವಹಣೆ ಕೊರತೆಯಿಂದ ಪಾಳುಕೊಂಪೆಯಂತಾಗಿದೆ. ಬಡಜನತೆಯ ಪಾಲಿಗೆ ಸಾರ್ವಜನಿಕ ಸ್ಮಶಾನ ಪ್ರಯೋಜನಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಶವಗಳ ದಹನಕ್ಕಾಗಿ ಸುಸಜ್ಜಿತ ಕಟ್ಟಡ, ಕೊಳವೆಬಾವಿ, ನೀರು ಸಂಗ್ರಹಕ್ಕೆ ಟ್ಯಾಂಕ್, ಕಟ್ಟಡದ ಹೊರಾಂಗಣದಲ್ಲಿ ಇಂಟರ್‌ಲಾಕ್ ಅಳವಡಿಸಿ ಸುಸಜ್ಜಿತವಾಗಿದೆ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ ವಿಶ್ರಾಂತಿಗಾಗಿ ಪ್ರತ್ಯೇಕ ಕಟ್ಟಡವೂ ಇದೆ. ಲಕ್ಷಾಂತರ ರೂ. ವೆಚ್ಚದಲ್ಲಿ ಎಲ್ಲ ವ್ಯವಸ್ಥೆ ಮಾಡಿದ್ದರೂ, ನಿರ್ವಹಣೆಯ ಕೊರತೆಯಿಂದ ರುದ್ರಭೂಮಿ ಶಿಥಿಲಾವಸ್ಥೆಗೆ ತಲುಪಿದೆ.
ಕಟ್ಟಡದ ಸುತ್ತ ಕಾಡು ಆವರಿಸಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯದ ರಾಶಿ ತುಂಬಿಕೊಂಡಿದೆ. ಚಿತಾಗಾರವೂ ಪ್ರಯೋಜನಕ್ಕಿಲ್ಲದ ಸ್ಥಿತಿಯಲ್ಲಿದೆ. ಮೃತದೇಹದೊಂದಿಗೆ ಆಗಮಿಸುವವರು ಸ್ಮಶಾನದೊಳಗೆ ಸಾಗಲು ಆಳೆತ್ತರಕ್ಕೆ ಬೆಳೆದಿರುವ ಗಿಡಗಂಟಿಗಳನ್ನು ಸರಿಸಿ ತಾವೇ ದಾರಿ ಮಾಡಿಕೊಂಡು ಹೋಗಬೇಕಾದ ದುಸ್ಥಿತಿ ಇದೆ.
ಅವ್ಯವಸ್ಥೆಗಳ ಆಗರ: ಸುಸಜ್ಜಿತ ಕಟ್ಟಡವಿದ್ದರೂ ಬಿಸಿಲು, ಮಳೆಯಲ್ಲೂ ಹೊರಾಂಗಣದಲ್ಲೇ ಹೆಣ ಸುಡಬೇಕಾಗದ ಸ್ಥಿತಿ ಇದೆ. ಮಳೆಯಿಂದ ಪಾರಾಗಲು ಟಾರ್ಪಾಲ್ ಹೊದಿಸಬೇಕಾಗುತ್ತದೆ. ಶವ ಸುಡಲು ಶೇಖರಿಸಿ ಇಟ್ಟಿರುವ ಕಟ್ಟಿಗೆಗಳನ್ನು ಮಳೆಗಾಲದಲ್ಲಿ ಒದ್ದೆಯಾಗದಂತೆ ಕಾಪಾಡಲು ವ್ಯವಸ್ಥೆ ಇಲ್ಲ. ಬೇಸಿಗೆಯಲ್ಲಿ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಿದಾಗ ಸ್ವಲ್ಪ ಎಚ್ಚರತಪ್ಪಿದರೂ ಸ್ಮಶಾನದೊಳಗಿನ ತ್ಯಾಜ್ಯ ರಾಶಿಗೆ ಬೆಂಕಿ ತಗುಲಿ ಎಕರೆಗಟ್ಟಲೆ ಹುಲ್ಲುಗಾವಲು ಬೆಂಕಿಗಾಹುತಿಯಾಗುವ ಸಾಧ್ಯತೆಯಿದೆ. ಬೆಂಕಿ ಆಕಸ್ಮಿಕ ಉಂಟಾದಲ್ಲಿ ವ್ಯಾಪಕ ಹುಲ್ಲುಗಾವಲು ಹೊಂದಿರುವ ಬಜಕೂಡ್ಲು ದೇವಸ್ಥಾನದವರೆಗೂ ಅಗ್ನಿ ವ್ಯಾಪಿಸುವ ಸಾಧ್ಯತೆಯಿದೆ. ಗ್ಯಾಸ್ ಅಥವಾ ವಿದ್ಯುತ್ ಚಿತಾಗಾರ ನಿರ್ಮಿಸಬೇಕೆಂಬ ಆಗ್ರಹವೂ ಇದ್ದು, ರುದ್ರಭೂಮಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಇನ್ನಷ್ಟು ಅಭಿವೃದ್ಧಿಪಡಿಸುವ ಕಾರ್ಯವಾಗಬೇಕಿದೆ.
ಹದಗೆಟ್ಟ ಸಂಪರ್ಕ ರಸ್ತೆ
ರುದ್ರಭೂಮಿ ಸಂಪರ್ಕಿಸುವ ರಸ್ತೆಯೂ ಹದಗೆಟ್ಟಿದ್ದು, ಇಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದಲ್ಲೇ ಸ್ಮಶಾನವಿದ್ದು, ಪೆರ್ಲ ಪೇಟೆಯಿಂದ ಅಂಚೆಕಚೇರಿ-ಶಂಕರಸದನ ಮಾರ್ಗವಾಗಿ ಸುಮಾರು ಎರಡು ಫರ್ಲಾಂಗು ದೂರದಲ್ಲಿದೆ. ಆಂಬುಲೆನ್ಸ್‌ಗಳು ಸಂಚರಿಸಲಾಗದಷ್ಟು ರಸ್ತೆ ಹಾಳಾಗಿದೆ. ರುದ್ರಭೂಮಿ ಪರಿಸರ ತ್ಯಾಜ್ಯಗಳ ಕೇಂದ್ರವಾಗಿಯೂ ಬದಲಾಗುತ್ತಿದೆ. ಸ್ಮಶಾನ ಪಂಚಾಯಿತಿ ಅಧೀನದಲ್ಲಿದ್ದರೂ ನಿರ್ವಹಣೆಗೆ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸ್ಮಶಾನಕ್ಕೆ ಸೂಕ್ತ ಆವರಣಗೋಡೆ ನಿರ್ಮಿಸಿ, ಗೇಟು ಅಳವಡಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಮುಖ ಸ್ಮಶಾನ ಇದಾಗಿದ್ದು, ಸ್ಮಶಾನ ಅಭಿವೃದ್ಧಿಗೆ ಪಂಚಾಯಿತಿ ಅಗತ್ಯ ಕ್ರಮ ಕೈಗೊಳ್ಳಲಿದೆ. ಪೆರ್ಲದಿಂದ ಶಂಕರಸದನ ಮೂಲಕ ಸ್ಮಶಾನ ಮಾರ್ಗವಾಗಿ ಬಜಕೂಡ್ಲು ಹಾಗೂ ಪಳ್ಳಕಾನ ತೆರಳುವ ರಸ್ತೆಯನ್ನು ಅಭಿವೃದ್ಧಿ ಮಾಡಲು ಯೋಜಿಸಲಾಗಿದೆ.