

ಉಡುಪಿ: ಮಣಿಪಾಲ ಸಮೀಪದ ಸಿಂಡಿಕೇಟ್ ವೃತ್ತದಿಂದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮುಖ್ಯ ರಸ್ತೆ ಮಾರ್ಗದಲ್ಲಿರುವ ನಗರಸಭೆಯ ವಾಣಿಜ್ಯ ಸಂಕೀರ್ಣ ಬಳಕೆಯಾಗದೆ ಪಾಳುಬೀಳುವ ಸ್ಥಿತಿಗೆ ತಲುಪಿದೆ.
ಕೋಟ್ಯಂತರ ರೂಪಾಯಿ ಹಣ ವ್ಯಯಿಸಿ ನಿರ್ಮಿಸಿರುವ ಈ ಕಟ್ಟಡವು ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ಬೀಗ ಹಾಕಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ಆಡಳಿತದ ನಿರ್ಲಕ್ಷ್ಯದ ಕುರಿತು ಅಸಮಾಧಾನಕ್ಕೂ ಕಾರಣವಾಗಿದೆ.
ಬಾಡಿಗೆಗೆ ನೀಡಿ
ನಗರಸಭೆಯ ಅಧಿಕಾರಿಗಳು ಕೂಡಲೇ ವಾಣಿಜ್ಯ ಸಂಕೀರ್ಣವನ್ನು ಸಾರ್ವಜನಿಕರ ಅನುಕೂಲಕ್ಕೆ ಮುಕ್ತಗೊಳಿಸಿ, ಅಂಗಡಿಗಳ ಹರಾಜು ಅಥವಾ ಬಾಡಿಗೆ ಪ್ರಕ್ರಿಯೆ ಕೈಗೊಳ್ಳಬೇಕು. ಈ ಭಾಗದಲ್ಲಿ ವ್ಯಾಪಾರ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬೇಕು. ಕೋಟ್ಯಂತರ ರೂಪಾಯಿ ವೆಚ್ಚದ ಸಾರ್ವಜನಿಕ ಆಸ್ತಿ ಹಾಳಾಗಲು ಬಿಡಬಾರದು ಎನ್ನುತ್ತಾರೆ ಸ್ಥಳೀಯರು.
ಸಾರ್ವಜನಿಕರ ಹಣದಿಂದ ನಿಮಾರ್ಣಗೊಂಡ ಕಟ್ಟಡಗಳು ಸಾರ್ವಜನಿಕ ಜನಜೀವನಕ್ಕೆ ಆಸರೆಯಾಗಬೇಕೇ ಹೊರತು, ಬೀಗ ಹಾಕಿ ಹಾಳು ಮಾಡಬಾರದು. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಕಟ್ಟಡವನ್ನು ಸೂಕ್ತ ಬಳಕೆಗೆ ನೀಡಿ ಜನಹಿತದ ಕಾಳಜಿ ಪ್ರದರ್ಶಿಸಬೇಕು ಎನ್ನುತ್ತಾರೆ ಉಡುಪಿಯ ಪ್ರಾಜ್ಞರು.
ನಗರಸಭೆಯವರ ಈ ವಾಣಿಜ್ಯ ಸಂಕೀರ್ಣವು ಅಂದಾಜು 2.8 ಕೋಟಿ ರೂ. ವೆಚ್ದದಲ್ಲಿ ನಿರ್ಮಿಸಲಾಗಿದೆ. ಜನಸಂಪರ್ಕವಿರುವ ಪ್ರಮುಖ ಸ್ಥಳದಲ್ಲಿ ಈ ಕಟ್ಟಡವಿದ್ದು, ವ್ಯಾಪಾರ ವಹಿವಾಟಿಗೆ ಅತ್ಯಂತ ಸೂಕ್ತವಾಗಿದೆ. ಇಲ್ಲಿ ಅಂಗಡಿ ಮುಂಗಟ್ಟು ತೆರೆದುಕೊಂಡರೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳು ಸಮೀಪದಲ್ಲೇ ಲಭ್ಯವಾಗಲಿದೆ. ಸಣ್ಣ ವ್ಯಾಪಾರಿಗಳಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಾಯವಾಗಲಿದೆ. ಅಲ್ಲದೆ, ನಗರಸಭೆಗೂ ಬಾಡಿಗೆ ರೂಪದಲ್ಲಿ ಆದಾಯ ಲಭಿಸಲಿದೆ. ಆದರೆ, ಈ ಕಟ್ಟಡ ಬಾಡಿಗೆ ಪಡೆಯಲು ಅಳವಡಿಸಿರುವ ಮೊತ್ತ ಭಾರಿ ಹೆಚ್ಚಿದೆ. ಬಾಡಿಗೆ ಪಡೆಯುವವರು ಠೇವಣಿ ರೂಪದಲ್ಲಿ 3.50 ಲಕ್ಷ ರೂ. ಹಾಗೂ ತಿಂಗಳಿಗೆ 36 ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಹೀಗಾಗಿ ಇಲ್ಲಿ ಬಾಡಿಗೆ ಅಂಗಡಿ ಪಡೆಯಲು ಯಾರೂ ಆಸಕ್ತಿ ತೋರುತ್ತಿಲ್ಲ.