ಡಿವೈಡರ್ ಏರಿದ ಬಸ್

ACCIDENT
ACCIDENT
Published on

ಬೆಳ್ತಂಗಡಿ: ಬೆಳ್ತಂಗಡಿ-ಉಜಿರೆ ರಸ್ತೆಯ ಕೆಳಗಿನ ಪೆಟ್ರೋಲ್ ಬಂಕ್ ಸಮೀಪ ಬಸ್ಸೊಂದು ಡಿವೈಡರ್ ಏರಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ಅನಾಹುತ ತಪ್ಪಿದೆ.

ಬಸ್ ಬ್ರೇಕ್ ವೈಫಲ್ಯಕ್ಕೊಳಗಾಗಿದ್ದು ಚಾಲಕನ ನಿಯಂತ್ರಣ ತಪ್ಪುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ವೇಳೆ ಬಸ್‌ನ ಮುಂಭಾಗದಲ್ಲಿ ಇತರ ವಾಹನಗಳು ಸಂಚರಿಸುತ್ತಿದ್ದವು. ಅಪಾಯ ಗಮನಿಸಿದ ಚಾಲಕ ತಕ್ಷಣವೇ ಬಸ್ಸನ್ನು ಡಿವೈಡರ್‌ನತ್ತ ತಿರುಗಿಸಿ ಅದರ ಮೇಲೆ ಹತ್ತಿಸಿ ನಿಯಂತ್ರಣಕ್ಕೆ ತಂದಿದ್ದಾರೆ. ಪರಿಣಾಮವಾಗಿ ಮುಂಭಾಗದಲ್ಲಿದ್ದ ವಾಹನಗಳಿಗೆ ಡಿಕ್ಕಿಯಾಗುವ ಸಾಧ್ಯತೆ ತಪ್ಪಿದ್ದು, ಪ್ರಯಾಣಿಕರು ಹಾಗೂ ಇತರ ವಾಹನ ಸವಾರರು ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ.
ಬಸ್ ಡಿವೈಡರ್ ಏರಿದ ಪರಿಣಾಮ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಬಸ್ ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಭಾಗದಲ್ಲಿ ನಡೆಯುತ್ತಿರುವ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಅಧರ್ಂಬರ್ಧ ಸ್ಥಿತಿಯಲ್ಲಿರುವುದು ವಾಹನ ಸವಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಕಾಮಗಾರಿ ಪೂರ್ಣಗೊಳ್ಳದೆ ರಸ್ತೆ ವಿನ್ಯಾಸದಲ್ಲಿ ಆಗಿರುವ ಬದಲಾವಣೆಗಳು, ಡಿವೈಡರ್‌ಗಳ ವ್ಯವಸ್ಥೆ, ಸೂಕ್ತ ಸೂಚನಾ ಫಲಕಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ವಾಹನ ಸಂಚಾರದಲ್ಲಿ ಗೊಂದಲ ಉಂಟಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net