ಸೇತುವೆಯೀಗ ಬ್ಲಾಕ್ ಸ್ಪಾಟ್ ಸ್ಪಾಟ್!

ಕಟ್‌ಬೆಲ್ತೂರು ರೈಲ್ವೆ ಬ್ರಿಡ್ಜ್ ತಿರುವು ಅಪಾಯ
 ಕಟ್‌ಬೆಲ್ತೂರು ರೈಲ್ವೆ ಸೇತುವೆ ತಿರುವು.
ಕಟ್‌ಬೆಲ್ತೂರು ರೈಲ್ವೆ ಸೇತುವೆ ತಿರುವು.
Published on: 

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ

ಕುಂದಾಪುರದಿಂದ ಹೆಮ್ಮಾಡಿ ಮೂಲಕ ಕೊಲ್ಲೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಟ್‌ಬೆಲ್ತೂರು ರೈಲ್ವೆ ಸೇತುವೆ ತಿರುವು ಈಗ ಅಪಘಾತ ವಲಯವಾಗಿ(ಬ್ಲಾಕ್ ಸ್ಪಾಟ್) ಪರಿವರ್ತನೆಯಾಗಿದೆ.

ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿದ್ದು, ಕಳೆದ ಐದು ವರ್ಷಗಳಲ್ಲಿ 30ಕ್ಕೂ ಅಧಿಕ ಅಪಘಾತಗಳು ಸಂಭವಿಸಿ, ಆರು ಮಂದಿ ಮೃತಪಟ್ಟಿದ್ದಾರೆ. ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ಮಂಗಳವಾರ ಸಂಜೆ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ, ಮಗು ಗಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಸುರಕ್ಷಿತ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಮುಖ ಸಂಪರ್ಕ ರಸ್ತೆ

ಐದಾರು ವರ್ಷಗಳ ಹಿಂದೆ ನಿರ್ಮಾಣವಾದ ಕುಂದಾಪುರ- ಹೆಮ್ಮಾಡಿ- ಕೊಲ್ಲೂರು ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕೊಲ್ಲೂರು, ಮಾರಣಕಟ್ಟೆ ಸೇರಿದಂತೆ ಕಮಲಶಿಲೆ, ಸೌಕೂರು ಭಾಗಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ವಂಡ್ಸೆ, ಜಡ್ಕಲ್, ಇಡೂರು, ಚಿತ್ತೂರು, ಆಲೂರು, ಶಂಕರನಾರಾಯಣ, ಸಿದ್ದಾಪುರ ಮತ್ತು ನೇರಳಕಟ್ಟೆ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುತ್ತದೆ.

ಭಾರಿ ವಾಹನಗಳಿಂದ ದಟ್ಟಣೆ

ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರವಾಸಿ ವಾಹನಗಳು, ಶಾಲಾ ವಾಹನಗಳು, ಆಟೋ ರಿಕ್ಷಾಗಳು ಮತ್ತು ಬಸ್‌ಗಳು ಸೇರಿದಂತೆ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇದರೊಂದಿಗೆ ತೀರ್ಥಹಳ್ಳಿ, ಹೊಸನಗರ ಹಾಗೂ ಶಿವಮೊಗ್ಗ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಹುಲಿಕಲ್ ಘಾಟಿಯಲ್ಲಿ ಹೇರಪಿನ್ ತಿರುವಿನ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಹೀಗಾಗಿ ಗ್ಯಾಸ್ ಟ್ಯಾಂಕರ್ ಸೇರಿದಂತೆ ಬೃಹತ್ ವಾಹನಗಳು ಕೊಲ್ಲೂರು ಘಾಟಿ ಮಾರ್ಗವಾಗಿ ಸಂಚರಿಸುತ್ತಿದ್ದು, ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ.

ರಾತ್ರಿ ಸಂಚಾರಕ್ಕೆ ಭೀತಿ

ರಸ್ತೆಯ ಎರಡೂ ಬದಿಗಳಲ್ಲಿ ಸೂಕ್ತ ಸೂಚನಾ ಫಲಕಗಳು ಹಾಗೂ ಬೆಳಕಿನ ವ್ಯವಸ್ಥೆ ಇಲ್ಲದಿರುವುದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಹಗಲಿಗಿಂತ ರಾತ್ರಿ ವೇಳೆ ಈ ತಿರುವಿನಲ್ಲಿ ಸಂಚರಿಸುವುದು ಹೆಚ್ಚು ಅಪಾಯಕಾರಿ. ಸಂಬಂಧಪಟ್ಟ ರೈಲ್ವೆ ಇಲಾಖೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಅಪಾಯಕಾರಿ ತಿರುವಿನ ಸಮಸ್ಯೆ ಪರಿಹರಿಸಬೇಕು. ತಿರುವಿನ ರಸ್ತೆಯನ್ನು ನೇರಗೊಳಿಸುವ ಮೂಲಕ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

30ಕ್ಕೂ ಅಧಿಕ ಅಪಘಾತ, ಆರು ಸಾವು

ಕಳೆದ ಐದು ವರ್ಷಗಳಲ್ಲಿ ಈ ರಸ್ತೆಯಲ್ಲಿ 30ಕ್ಕೂ ಅಧಿಕ ಅಪಘಾತಗಳು ಸಂಭವಿಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ. ಲೆಕ್ಕವಿಲ್ಲದಷ್ಟು ವಾಹನ ಸವಾರರು ಗಾಯಗೊಂಡಿದ್ದಾರೆ. ಕೆಲ ಅಪಘಾತಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥವಾಗಿರುವುದರಿಂದ ಅಧಿಕೃತವಾಗಿ ದಾಖಲಾಗದಿರುವ ಸಾಧ್ಯತೆಯೂ ಇದೆ. ಕೆಲವು ತಿಂಗಳ ಹಿಂದೆ ಸೇತುವೆ ತಿರುವಿನಲ್ಲಿ ಬೈಕ್ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದರು. ಇದಾದ ಬಳಿಕವೂ ಇಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ ಎನ್ನುತ್ತಾರೆ ಸ್ಥಳೀಯರು.

ಅಪಘಾತಗಳಿಗೇನು ಕಾರಣ?

ಹೆಮ್ಮಾಡಿ ಕೊಲ್ಲೂರು ಸಂಪರ್ಕಿಸುವ ಪ್ರಮುಖ ರಸ್ತೆಯ ಕಟ್‌ಬೆಲ್ತೂರು ಬಳಿ ರೈಲ್ವೆ ಸೇತುವೆಯಿದೆ. ಸೇತುವೆಯ ಅಗಲ ಕಡಿಮೆಯಿದ್ದು, ಅದರ ಬಳಿ ರಸ್ತೆಯೂ ತಿರುವಿನಿಂದ ಕೂಡಿದೆ. ಬೃಹತ್ ವಾಹನಗಳು ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯವಾಗುತ್ತದೆ. ರಸ್ತೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಎರಡೂ ಕಡೆಯಿಂದ ವಾಹನಗಳು ವೇಗವಾಗಿ ಬರುತ್ತವೆ. ಸೇತುವೆಯ ಬಳಿ ರಸ್ತೆ ಕಿರಿದಾಗಿರುವುದರಿಂದ ವಾಹನಗಳು ನಿಯಂತ್ರಣ ತಪ್ಪಿ ಅಪಘಾತಗಳು ಸಂಭವಿಸುತ್ತಿವೆ.

ಇಲ್ಲಿನ ಅಪಾಯಕಾರಿ ತಿರುವಿನಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ. ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಹೋರಾಟಗಳನ್ನೂ ನಡೆಸಲಾಗಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸಾರ್ವಜನಿಕರು ಮತ್ತು ವಾಹನ ಸವಾರರ ಅನುಕೂಲದ ದೃಷ್ಟಿಯಿಂದ ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು.
ರವಿ ಕಟ್‌ಬೆಲ್ತೂರು ರಿಕ್ಷಾ ಚಾಲಕ
ಕಟ್‌ಬೆಲ್ತೂರು ರೈಲ್ವೆ ಸೇತುವೆ ತಿರುವಿನಲ್ಲಿ ಅಪಘಾತಗಳು ಸಂಭವಿಸುತ್ತಿರುವುದು ಇಲಾಖೆಯ ಗಮನದಲ್ಲಿದೆ. ಸೇತುವೆಯ ಎರಡೂ ಬದಿಗಳಲ್ಲಿ ರಸ್ತೆ ಅಗಲವಾಗಿದ್ದರೂ ಸೇತುವೆಯ ಅಗಲ ಕಡಿಮೆಯಿರುವುದರಿಂದ ಅನಾಹುತಗಳು ಸಂಭವಿಸುತ್ತಿವೆ. ಈ ಬಗ್ಗೆ ಇಲಾಖೆ ಮುತುವರ್ಜಿ ವಹಿಸಿ, ಸೇತುವೆಯ ಎರಡೂ ಬದಿಗಳಲ್ಲಿ ಸೋಲಾರ್ ಬ್ಲಿಂಕರ್(ಅಪಾಯಕಾರಿ ವಲಯವನ್ನು ಸೂಚಿಸುವ ಮಿನುಗು ದೀಪ) ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು.
ಅನೂಪ್ ನಾಯಕ್ ಉಪನಿರೀಕ್ಷಕ, ಕುಂದಾಪುರ ಸಂಚಾರ ಪೊಲೀಸ್ ಠಾಣೆ