ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗೀತಾ ಮಹೋತ್ಸವದಲ್ಲಿ ಸಂತ ಸಂದೇಶ ನೀಡಿದ ನಿರ್ಮಲಾನಂದನಾಥ ಶ್ರೀಗಳಿಗೆ ಸುಗುಣೇಂದ್ರ ಶ್ರೀಗಳು 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ನೀಡಿದರು. ಸುಶ್ರೀಂದ್ರ ತೀರ್ಥ ಶ್ರೀಪಾದರು, ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಹರಿಶ್ಚಂದ್ರ, ಡಾ. ವ್ಯಾಸರಾಜ ತಂತ್ರಿ, ಪ್ರದೀಪ್ಕುಮಾರ್, ರಾಧಾಕೃಷ್ಣ ಆಚಾರ್ಯ ಇತರರಿದ್ದರು.
Published on:
Copied
Follow Us
* ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ
* ಆದಿಚುಂಚನಗಿರಿ ಶ್ರೀಗಳಿಗೆ 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ
ಉಡುಪಿ: ಜೀವನದಲ್ಲಿ ಪ್ರತಿಯೊಬ್ಬರೂ ಸಾಧಕರಾಗಬೇಕು. ಪಲಾಯನವಾದಿ ಆಗಬಾರದು. ಪರಾಕ್ರಮವಾದಿ ಆಗಬೇಕು. ಯಾವುದೇ ಫಲಾಪೇಕ್ಷೆ ಇಲ್ಲದೆ ಕರ್ತವ್ಯ ನಿಭಾಯಿಸಿ ಎಲ್ಲರೂ ನಿಸ್ವಾರ್ಥದ ಜೀವನ ನಡೆಸಬೇಕು. ಇದುವೇ ಶ್ರೀಕೃಷ್ಣನ ಆಶಯವಾಗಿದೆ. ಭಗವದ್ಗೀತೆಯು ಸಾಧನೆ ಮಾಡಲು ಮನಸ್ಸನ್ನು ಪರಿವರ್ತಿಸುವ ಶ್ರೇಷ್ಠ ಸಂದೇಶವಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಮಂಗಳವಾರ (ಜ.6) ಆಯೋಜಿಸಿದ್ದ ಗೀತಾ ಮಹೋತ್ಸವದ ಮುಂದುವರಿದ ಭಾಗವಾಗಿ ಸಂತ ಸಂದೇಶ-ಸಂತ ಸನ್ಮಾನ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ನೀಡಿ ಆಶೀರ್ವಚನ ನೀಡಿದರು.
ಜ್ಞಾನಕ್ಕೆ ಎಂದಿಗೂ ಸಾವಿಲ್ಲ
ಸನ್ಮಾನ ಸ್ವೀಕರಿಸಿ ಸಂತ ಸಂದೇಶ ನೀಡಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಆಧುನಿಕ ಮಠಗಳಿಗೆ ಹಾಗೂ ಆಧುನಿಕ ಯತಿಗಳಿಗೆ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಮಾರ್ಗದರ್ಶಕರು. ಇಂದಿನ ಕಾಲ ಹೇಗೆ ಸಾಗುತ್ತಿದೆ ಎನ್ನುವುದು ನಿತ್ಯವೂ ದರ್ಶನವಾಗುತ್ತಿದೆ. ಹೀಗಾಗಿ ಆಧುನಿಕತೆಗೆ ಹೊಂದಿಕೊಳ್ಳುವ ರೀತಿಯಲ್ಲಿ ನಮ್ಮತನ, ಧಮೋರ್ಪದೇಶ ನೀಡುವ ರೀತಿ ಬದಲಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಯುವಸಮುದಾಯ ದಾರಿತಪ್ಪಿ ನಡೆಯುತ್ತಾರೆ. ನಮ್ಮ ಧರ್ಮ, ವೇದಾಂತಗಳ ಜ್ಞಾನಕ್ಕೆ ಎಂದಿಗೂ ಸಾವಿಲ್ಲ. ಅವುಗಳನ್ನು ಆಧುನಿಕ ರೀತಿಯಲ್ಲೇ ಬೋಧಿಸಬೇಕಿದೆ. ಅಂತಹ ಮಹತ್ ಸಾಧನೆಯನ್ನು ಪುತ್ತಿಗೆ ಶ್ರೀಗಳು ಮಾಡಿದ್ದಾರೆ. ಮಠಗಳ ಸಂಪ್ರದಾಯದ ಹೊರತಾಗಿಯೂ ಕರ್ತವ್ಯ ಎಂಬ ರೀತಿಯಲ್ಲಿ ವಿಶ್ವಾದ್ಯಂತ ಕೃಷ್ಣಭಕ್ತಿ ಪಸರಿಸಿದ್ದಾರೆ. ನಿಷ್ಕಾಮವಾಗಿ ಗೀತೆಯ ಸೇವೆ ಮಾಡುತ್ತ ಧರ್ಮ ಸಂಸ್ಕಾರದ ಬಿತ್ತನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ವಿವಿಧ ಸಾಧಕರಿಗೆ ಸನ್ಮಾನ
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿಯ ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಹಾಗೂ ವೈದ್ಯ ಡಾ. ವ್ಯಾಸರಾಜ ತಂತ್ರಿ, ವಕೀಲ ಪ್ರದೀಪ್ಕುಮಾರ್, ದಾನಿಗಳಾದ ಮುಂಬಯಿಯ ರಾಧಾಕೃಷ್ಣ ಆಚಾರ್ಯ ಇವರಿಗೆ 'ಶ್ರೀಕೃಷ್ಣಗೀತಾನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು. ಪುತ್ತಿಗೆ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ನ.28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಸಾಮೂಹಿಕ ಲಕ್ಷ ಕಂಠ ಗೀತಾ ಪಾರಾಯಣದ ಕಾರ್ಯಕ್ರಮದ ವೇದಿಕೆ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಿದ್ದ ಜಾಗದ ಮಾಲೀಕರಿಗೂ ಸಹ ಶ್ರೀಗಳು ಶ್ರೀಕೃಷ್ಣನ ಪ್ರಸಾದ ನೀಡಿ ಗೌರವಿಸಿದರು.
ಮಠದ ದಿವಾನ ನಾಗರಾಜ್ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್ ಸಹಕರಿಸಿದರು.
ಪುತ್ತಿಗೆ ವಿದ್ಯಾಪೀಠದ ವೇದಮೂರ್ತಿ ರಾಘವೇಂದ್ರ ಭಟ್ ವೇದಘೋಷ ಪಠಿಸಿದರು. ಉಡುಪಿ ಸಂಸತ ಪಾಠಶಾಲೆಯ ವೇದಾಂತ ವಿಭಾಗದ ಪ್ರಾಧ್ಯಾಪಕ ಡಾ. ಷಣ್ಮುಖ ಹೆಬ್ಬಾರ್ ಸ್ವಾಗತಿಸಿದರು. ಪುತ್ತಿಗೆ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
"
ಐನ್ ಸ್ಟೈನ್ನಂತಹ ವಿಜ್ಞಾನಿಯೂ ಸಹ ತನ್ನ ಸಾಧನೆಗೆ ಭಗವದ್ಗೀತೆಯೇ ಕಾರಣ ಎಂದಿದ್ದಾನೆ. ವೈಜ್ಞಾನಿಕ ಆವಿಷ್ಕಾರಕ್ಕೆ ತುಂಬ ಹತ್ತಿರವಾಗಿರುವ ಶ್ಲೋಕ ಭಗವದ್ಗೀತೆಯಲ್ಲಿದೆ. ಜಗತ್ತೇ ಒಪ್ಪಿಕೊಳ್ಳುವ ಶಕ್ತಿ ಕೃಷ್ಣಭಕ್ತಿ. ಆತನನ್ನು ಮೂರ್ತರೂಪದಲ್ಲಿ ಅಥವಾ ಅಮೂರ್ತರೂಪದಲ್ಲಿ ಪೂಜಿಸಿದರೂ ಅದು ಪೂರ್ಣತೆಗೆ ಪೂಜೆ ಮಾಡಿದಂತಾಗುತ್ತದೆ. 5 ಸಾವಿರ ವರ್ಷದ ಹಿಂದೆ ಕ್ರೈಸ್ತ, ಇಸ್ಲಾಂ, ಬುದ್ಧಿಸಂ, ಜೈನಿಸಂ ಯಾವ ಧರ್ಮವೂ ಇರಲಿಲ್ಲ. ಆ ಕಾಲದಲ್ಲಿಯೇ ಭಗವಂತನು ನನಗೆ ಶರಣಾಗುವವರ ಎಲ್ಲ ಪಾಪಗಳನ್ನೂ ಕಳೆದು ಮೋಕ್ಷ ನೀಡುತ್ತೇನೆ ಎಂದು ಹೇಳಿದ್ದಾನೆ.