ಸದ್ದು ಮಾಡಿದ ಅನಾಮಧೇಯ ಪತ್ರ

 ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ಮೋಹಿನಿ ಶೆಟ್ಟಿ, ಸರಿತಾ ಶಿವಾನಂದ, ನೀಲಕಂಠ ಮೇಸ್ತ, ಕಿರಣ್ ಆಳ್ವ ಇದ್ದರು.
ಕಾಪು ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಪ್ರಮುಖರಾದ ಮೋಹಿನಿ ಶೆಟ್ಟಿ, ಸರಿತಾ ಶಿವಾನಂದ, ನೀಲಕಂಠ ಮೇಸ್ತ, ಕಿರಣ್ ಆಳ್ವ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಕಾಪು ಪುರಸಭೆಯಲ್ಲಿ ಗಂಭೀರ ಆಡಳಿತ ಲೋಪಗಳಾಗುತ್ತಿರುವ ಬಗ್ಗೆ ಸದಸ್ಯರೆಲ್ಲರಿಗೆ ಬಂದ ಅನಾಮಧೇಯ ಪತ್ರ ಮಂಗಳವಾರ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಸದ್ದು ಮಾಡಿತು.
ಸಭೆ ಆರಂಭವಾಗುತ್ತಿದ್ದಂತೆ ಸದಸ್ಯೆ ಪತ್ರದ ಬಗ್ಗೆ ಸಭೆಯ ಗಮನ ಸೆಳೆಯುತ್ತಿದ್ದಂತೆ ಸದಸ್ಯರೆಲ್ಲರೂ ಅಧಿಕಾರಿಗಳ ಕರ್ತವ್ಯದಿಂದ ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಯಾವುದೇ ಕಾರಣಕ್ಕೂ ಮುಲಾಜಿಲ್ಲದೆ ಕಠಿಣ ಕ್ರಮ ತೆಗೆದುಕೊಳ್ಳಬೇಕಿದೆ. ಪತ್ರದ ಬಗ್ಗೆ ಗಮನ ಹರಿಸಬೇಕಿದೆ. ಸಾರ್ವಜನಿಕ ದೂರುಗಳ ಬಗ್ಗೆ ಎಚ್ಚರ ವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಜಾಗರೂಕರಾಗಬೇಕು. ಲೋಕಾಯುಕ್ತ, ಪೊಲೀಸ್ ದಾಳಿ ಆದಲ್ಲಿ ಮರ್ಯಾದೆ ಹರಾಜಾಗುತ್ತದೆ. ಪುರಸಭೆಗೆ ಕೆಟ್ಟ ಹೆಸರು ಬಂದರೆ ಅದು ಕಾಪು ಜನತೆಗೆ ಮತ್ತು ಜನಪ್ರತಿನಿಧಿಗಳಿಗೆ ಭೂಷಣವಲ್ಲ. ಈ ಬಗ್ಗೆ ಎಚ್ಚರ ವಹಿಸುವಂತೆ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.
ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಮಾತನಾಡಿ, ಈಗಾಗಲೇ ಸಿಬ್ಬಂದಿಯನ್ನು ಕರೆದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸಿಬ್ಬಂದಿಯ ಆಂತರಿಕ ಬದಲಾವಣೆಗೂ ಕ್ರಮ ವಹಿಸಲಾಗುವುದು. ಕಾರ್ಯವೈಖರಿ ಸರಿಪಡಿಸದಿದ್ದಲ್ಲಿ ಯೋಜನಾ ನಿರ್ದೇಶಕರ ಅನುಮತಿ ಪಡೆದು ಹತ್ತು ವರ್ಷಗಳಿಂದ ಒಂದೇ ಕಡೆ ಕರ್ತವ್ಯದಲ್ಲಿರುವ ಅಧಿಕಾರಿಗಳನ್ನು ಅನ್ಯ ತಾಲೂಕಿಗೆ ವರ್ಗಾವಣೆಗೊಳಿಸಲು ಮುಂದಾಗುವುದಾಗಿ ಎಚ್ಚರಿಕೆ ನೀಡಿದರು. ಅಧ್ಯಕ್ಷೆ ಮೋಹಿನಿ ಶೆಟ್ಟಿ, ಉಪಾಧ್ಯಕ್ಷೆ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ ಉಪಸ್ಥಿತರಿದ್ದರು.

ಕಾರ್ಯವೈಖರಿಗೆ ಅಸಮಾಧಾನ

ಸಭೆ ಆರಂಭದಿಂದ ಅಂತ್ಯದವರೆಗೆ ಆರೋಗ್ಯ ನಿರೀಕ್ಷಕರ ಕಾರ್ಯವೈಖರಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಪೌರ ಕಾರ್ಮಿಕರಿಗೆ ಸುರಕ್ಷಾ ಧರಿಸು, ಕ್ರಿಮಿನಾಶಕಗಳ ಖರೀದಿ, ಟೆಂಡರ್ ಅನುಮೋದನೆ ವಿಷಯ ಪ್ರಸ್ತಾವನೆ ವೇಳೆ ಮಾಸ್ಕ್‌ವೊಂದಕ್ಕೆ 70 ರೂ. ದರಪಟ್ಟಿ ಸೂಚನೆ ಚರ್ಚೆಗೆ ಗ್ರಾಸವಾಯಿತು. ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಆರೋಗ್ಯ ನಿರೀಕ್ಷಕರನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಕಾರ್ಯವೈಖರಿ ಬದಲಾಯಿಸದಿದ್ದಲ್ಲಿ ವರ್ಗಾವಣೆ ಪಡೆಯುವಂತೆ ಮುಖ್ಯಾಧಿಕಾರಿ ಸೂಚನೆ ನೀಡಿದರು.

ಅಣೆಕಟ್ಟುಗಳಿಗೆ ಗೇಟ್ ಅಳವಡಿಸಿ

ಕಳೆದ ವರ್ಷ ಮಳೆಯಿದ್ದರೂ ನೀರಿಗೆ ಕೊರತೆ ಕಾಡಿತ್ತು. ಈ ಬಾರಿ ಮಳೆಯೇ ಇಲ್ಲ, ಮುಂದಿನ ಬೇಸಿಗೆಗೆ ಈಗಿನಿಂದಲೇ ಸಿದ್ಧತೆಯಾಗಬೇಕಿದೆ. ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಕೆಲಸ ಆಗಬೇಕಿದೆ. ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದು ಸದಸ್ಯರು ಎಚ್ಚರಿಸಿದರು. ಶಾಸಕರು ಮಾತನಾಡಿ, ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹವಾಮಾನ ವರದಿ ಆಧರಿಸಿಕೊಂಡು ನವೆಂಬರ್, ಡಿಸೆಂಬರ್‌ನಲ್ಲೇ ಹಲಗೆ ಹಾಕುವ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ.

ನೀರಿನ ದರ, ವಾಣಿಜ್ಯ ಕರ ಏರಿಕೆಗೆ ಒಪ್ಪಿಗೆ

ತೀವ್ರ ಚರ್ಚೆ ಬಳಿಕ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ದರ ಹಾಗೂ ವಾಣಿಜ್ಯ ಕರ ಏರಿಕೆಗೆ ಕೌನ್ಸಿಲ್ ಒಪ್ಪಿಗೆ ನೀಡಲಾಯಿತು. ಸ್ಥಾಯಿ ಸಮಿತಿ ಸಭೆ ನಡೆಯದೆ ಆರು ತಿಂಗಳಾಗಿವೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಸಭೆ ನಡೆಸಬೇಕು. ಆಡಳಿತದಲ್ಲಿ ಹಿಡಿತ ಕಳೆದುಕೊಳ್ಳುವ ಭೀತಿಯಿದೆ ಎಂದು ನೂತನ ಸ್ಥಾಯಿ ಸಮಿತಿ ಸದಸ್ಯರು ಅಳಲು ತೋಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net