

ಉಡುಪಿ: ಮನೆ ಬಾಡಿಗೆಗಾಗಿ ನೀಡಿದ್ದ ಮುಂಗಡ ಹಣದ ವಿಚಾರದಲ್ಲಿ ಮಾಲೀಕ ಹಾಗೂ ಬಾಡಿಗೆದಾರನ ನಡುವೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, ಮನೆ ಮಾಲೀಕನ ಮೇಲೆ ಆ್ಯಸಿಡ್ ಎರಚಿ, ಕತ್ತಿಯಿಂದ ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಡುಪಿಯ ರೈಲ್ವೆ ನಿಲ್ದಾಣದ ಕಲ್ಕೂರು ಬಿಲ್ಡಿಂಗ್ ಬಳಿ ನಡೆದಿದೆ.
ಉಡುಪಿಯ ಶಿವಳ್ಳಿ ಗ್ರಾಮದ ನಿವಾಸಿ ನವೀನಕುಮಾರ (58) ಆ್ಯಸಿಡ್ ದಾಳಿಗೊಳಗಾದವರು. ಸುರೇಶ ಆಚಾರ್ಯ (48) ಆ್ಯಸಿಡ್ ಎರಚಿದ ಬಾಡಿಗೆದಾರ.
ನವೀನಕುಮಾರ ಅವರು ಕಲ್ಕೂರು ಬಿಲ್ಡಿಂಗ್ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದು, ವಿಷ್ಣುಮೂರ್ತಿ ನಗರದಲ್ಲಿರುವ ಇವರ ಮನೆಯ ಮೊದಲ ಮಹಡಿಯಲ್ಲಿ ಸುರೇಶ ಆಚಾರ್ಯ ಎಂಬವರು ಬಾಡಿಗೆಗೆ ಇದ್ದರು. ಅವರು ಮನೆ ಖಾಲಿ ಮಾಡುವಾಗ ಮುಂಗಡವಾಗಿ ನೀಡಿದ್ದ 20 ಸಾವಿರ ರೂ. ಹಣದ ವಿಚಾರದಲ್ಲಿ ವಿವಾದ ಉಂಟಾಗಿತ್ತು.
ಮನೆಯನ್ನು ನೋಡಿದಾಗ ಗೋಡೆ, ಟ್ಯಾಪ್ ಹಾಳು ಮಾಡಿದ್ದರಿಂದ ನೀಡಿದ್ದ ಮುಂಗಡ ಹಣದಲ್ಲಿ 2 ತಿಂಗಳ ಬಾಡಿಗೆ ಹಾಗೂ ದುರಸ್ತಿಗಾಗಿ ಹಣ ಕಡಿತ ಮಾಡುವುದಾಗಿ ಮನೆ ಮಾಲೀಕ ಹೇಳಿದ್ದರು. ಇದಕ್ಕೆ ಒಪ್ಪದ ಆರೋಪಿ ಸುರೇಶ ಆಚಾರ್ಯ, ನಾನು ಕೊಟ್ಟ 20 ಸಾವಿರ ರೂ. ಮುಂಗಡ ಹಣ ಕೊಡಬೇಕು. ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಅ.23ರಂದು ಬೆದರಿಕೆ ಹಾಕಿದ್ದರು.
ಅ.28ರಂದು ಮಧ್ಯಾಹ್ನ 3:30ರ ಸುಮಾರಿಗೆ ನವೀನಕುಮಾರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಸುರೇಶ ಆಚಾರ್ಯ, ಬಾಡಿಗೆ ಮುಂಗಡ ಹಣದ ವಿಚಾರವಾಗಿ ಮತ್ತೆ ಜಗಳವಾಡಿದ್ದಾನೆ. ಬಳಿಕ ಬೈಕ್ನಲ್ಲಿ ಇಟ್ಟುಕೊಂಡಿದ್ದ ಆ್ಯಸಿಡ್ ಇರುವ ಬಾಟಲಿ ಹಾಗೂ ದೊಡ್ಡ ಕತ್ತಿ ತಂದು ಮೊದಲು ಆ್ಯಸಿಡ್ ಎರಚಿದ್ದಾನೆ. ನಂತರ ಕತ್ತಿಯಿಂದ ಕಡಿಯಲು ಯತ್ನಿಸಿದ್ದಾನೆ. ಈ ವೇಳೆ ನವೀನಕುಮಾರ್ ತಪ್ಪಿಸಿಕೊಂಡಿದ್ದಾರೆ. ಆದರೆ, ಅವರ ಬಲಗೈ, ಎಡಗೈ, ಸೊಂಟ, ಹೊಟ್ಟೆ, ಪಾದ ಹಾಗೂ ಮುಖದ ಭಾಗದಲ್ಲಿ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.