ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಜೂ.12ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ವ್ಯಾಪಕ ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಭಕ್ತರ ದರ್ಶನ ಸಮಯ ಕಡಿತಗೊಳಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಸಾಮಾನ್ಯವಾಗಿ ದೇವಸ್ಥಾನವು ಸಾರ್ವಜನಿಕರಿಗೆ ಮುಚ್ಚಿರುವ ಮಧ್ಯಾಹ್ನದ ಸಮಯದಲ್ಲಿಯೇ ಸಿಎಂ ಭೇಟಿ ನೀಡುತ್ತಿದ್ದಾರೆ. ಪ್ರತಿದಿನ ಮಧ್ಯಾಹ್ನ 1:30 ರಿಂದ 3:30 ರವರೆಗೆ ದೇವಸ್ಥಾನದ ಮುಚ್ಚುವ ಸಮಯವಾಗಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ದೇವಸ್ಥಾನ ಮುಚ್ಚಿರಲಿದೆ. ಹೀಗಾಗಿ ಸಾರ್ವಜನಿಕರ ದರ್ಶನದ ಅವಧಿಯಲ್ಲಿ ಯಾವುದೇ ಕಡಿತವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿಗಳ ದೇವಸ್ಥಾನದ ಭೇಟಿಯು ಸಂಪೂರ್ಣ ಖಾಸಗಿಯಾಗಿದ್ದು, ಯಾವುದೇ ಸಾರ್ವಜನಿಕ ಭೇಟಿ ಅಥವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ. ಸಿಎಂ ವಾಹನ ಸಂಚಾರದ ಹಾದಿ, ಪ್ರವೇಶ ದ್ವಾರಗಳು ಅಥವಾ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸರು ಸಂಪೂರ್ಣ ಬಂದೋಬಸ್ತ್ ಕಾರ್ಯಕೈಗೊಂಡಿದ್ದು, ತಮಿಳುನಾಡಿನಿಂದ ಡಿಐಜಿ ಮತ್ತು ಎಸ್ಪಿ ಸೇರಿದಂತೆ ಸುಮಾರು 40 ಮಂದಿ ಪೊಲೀಸರು ಸಿಎಂ ಅವರ ನಿಕಟ ರಕ್ಷಣಾ ಗುಂಪಿನ ಭಾಗವಾಗಲಿದ್ದಾರೆ. ಸಿಎಂ ಝಡ್ ಪ್ಲಸ್ ರಕ್ಷಣೆಯನ್ನು ಹೊಂದಿರುವುದರಿಂದ ಬೆಂಗಾವಲು ಪಡೆ ಸಹಿತ ಭದ್ರತಾ ಕ್ರಮಗಳನ್ನು ಒದಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.