ಸ್ಕೌಟ್ಸ್​-ಗೈಡ್ಸ್​ ವಿದ್ಯಾರ್ಥಿಗಳ ಸಂಖ್ಯೆ 15 ಲಕ್ಷಕ್ಕೆ ಏರಿಕೆ ಗುರಿ

ಪರ್ಯಾಯ ಶ್ರೀ ಶಿರೂರು ಮಠಾಧೀಶ  ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿದರು.
ಪರ್ಯಾಯ ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿದರು.
Published on
ಉಡುಪಿ: ರಾಜ್ಯದಲ್ಲಿ 2 ಕೋಟಿ ವಿದ್ಯಾರ್ಥಿಗಳಿದ್ದು, 8.5 ಲಕ್ಷ ಮಂದಿ ಸ್ಕೌಟ್ಸ್​ ಮತ್ತು ಗೈಡ್ಸ್​ ಸದಸ್ಯರಾಗಿದ್ದಾರೆ. ಮುಂದಿನ ದಿನಗಳಲ್ಲಿ 15 ಲಕ್ಷ ಮಕ್ಕಳನ್ನು ಸ್ಕೌಟ್ಸ್​ ಮತ್ತು ಗೈಡ್ಸ್​ಗೆ ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದ್ದು, 1 ಲಕ್ಷ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದು ಸ್ಕೌಟ್ಸ್​ ಮತ್ತು ಗೈಡ್ಸ್​ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್​. ಸಿಂಧ್ಯಾ ಹೇಳಿದರು.
ರಾಜಾಂಗಣದಲ್ಲಿ ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಯ ವತಿಯಿಂದ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ರಾಜ್ಯದ 1200 ಸ್ಕೌಟ್ಸ್​, ಗೈಡ್ಸ್​, ರೋವರ್ಸ್​ ಮತ್ತು ರೇಂರ್ಜಸ್​ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90 ರಿಂದ 95ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ, ರ್ಯಾಂಕ್​ ಪಡೆದ ವಿದ್ಯಾರ್ಥಿಗಳು ಕೇವಲ ಕುಟುಂಬ ಅಥವಾ ಊರಿಗೆ ಕೀರ್ತಿ ತಂದಿಲ್ಲ. ಬದಲಿಗೆ ಈ ದೇಶದ ದೊಡ್ಡ ಸಂಪನ್ಮೂಲವಾಗಿದ್ದಾರೆ ಎಂದರು.

8 ರಿಂದ 13 ವರ್ಷದೊಳಗಿನ ಮಕ್ಕಳು ಒಂದು ತಿಂಗಳ ಕಾಲ ಮೊಬೈಲ್​, ಟಿವಿ ದೂರವಿಟ್ಟು, ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಅವರ ಮೆದುಳು ಸೂಪರ್​ ಕಂಪ್ಯೂಟರ್​ನಂತೆ ಕೆಲಸ ಮಾಡುತ್ತದೆ. ಸ್ಕೌಟ್ಸ್​ ಮತ್ತು ಗೈಡ್ಸ್​ ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ ಪರಿಸರ ಜ್ಞಾನ, ಸ್ವಚ್ಛತೆ, ಪ್ರಾಣಿ-ಸಸ್ಯಗಳ ಸಂರಕ್ಷಣೆ, ಮಣ್ಣು ಮತ್ತು ನೀರಿನ ಉಳಿತಾಯದಂತಹ ಜೀವನ ಮೌಲ್ಯಗಳನ್ನು ಕಲಿಸುತ್ತದೆ ಎಂದರು.

ಉದ್ಯೋಗದಲ್ಲಿ ಆದ್ಯತೆ
ಕಾಲೇಜು ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಪತಿ ಪರೀಕ್ಷೆ ಉತ್ತೀರ್ಣರಾದರೆ ಎಂಬಿಬಿಎಸ್​, ಎಂಜಿನಿಯರಿಂಗ್​, ಐಎಎಸ್​ನಲ್ಲಿ ಮಾತ್ರವಲ್ಲದೆ ರೈಲ್ವೆ ಇಲಾಖೆ, ಪೊಲೀಸ್​ ಮತ್ತು ರಕ್ಷಣಾ ಇಲಾಖೆಗಳ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಹಾಗೂ ಆದ್ಯತೆ ದೊರೆಯಲಿದೆ ಎಂದು ತಿಳಿಸಿದರು.

ಪರ್ಯಾಯ ಶ್ರೀ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭ ಉದ್ಘಾಟಿಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್​ಪಾಲ್​ ಸುವರ್ಣ, ಡಿಡಿಪಿಯು ಮಾರುತಿ, ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್​ ಶೆಟ್ಟಿ , ಜಿಲ್ಲಾ ಗೈಡ್​ ಆಯುಕ್ತೆ ಜ್ಯೋತಿ ಪೈ, ಕಾರ್ಯದರ್ಶಿ ಆನಂದ ಅಡಿಗ, ಕೋಶಾಧಿಕಾರಿ ಹರಿಪ್ರಸಾದ್​ ರೈ, ಲಯನ್ಸ್​ ಸಂಸ್ಥೆಯ ಎಂ.ಎನ್​. ಹೆಗ್ಡೆ, ಸ್ಥಳಿಯ ಸಂಸ್ಥೆಯ ಪ್ರತಿನಿಧಿಗಳಾದ ಗುಣರತ್ನ, ದಿವಾಕರ ಸನಿಲ್​, ಮಹಮ್ಮದ್​ ಮೌಲಾ, ಎಎಸ್​ಒ ಸುಮನಾ ಶೇಖರ್​ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಬ್​, ಬುಲ್​ ಬುಲ್​ ಮಕ್ಕಳ 'ಗೋಲ್ಡನ್​ ಆರೋ' ಪ್ರಶಸ್ತಿ ಹಾಗೂ 'ರಾಷ್ಟ್ರಪತಿ ಪ್ರಮಾಣ ಪತ್ರ' ವಿತರಿಸಲಾಯಿತು. ಕಲಬುರಗಿ, ದಾವಣಗೆರೆ, ಬೆಳಗಾವಿ ಹಾಗೂ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಮಕ್ಕಳು ಮತ್ತು ಪೋಷಕರು ಭಾಗವಹಿಸಿದ್ದರು.
"

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರಿಂದ ಭವ್ಯ ಭಾರತ ಕಟ್ಟಲು ಸಾಧ್ಯ. ಅವರನ್ನು ಸಮಾಜದ ಜೊತೆ ಬೆರೆಯುವಂತೆ ಮಾಡಬೇಕು. ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಈ ಮೂಲಕ ಸಮಾಜದ ಋಣ ತೀರಿಸಬೇಕು. ದೇವರಿಗೆ ಮೊದಲು, ನಂತರ ದೇಶ, ಕೊನೆಗೆ ದೇಹಕ್ಕೆ ಪ್ರಾಶಸ ನೀಡುವುದನ್ನು ಕಲಿಸಬೇಕು. ಇದಕ್ಕಾಗಿ ಸ್ಕೌಟ್ಸ್​ ಮತ್ತು ಗೈಡ್ಸ್​ ಸಂಸ್ಥೆಗಳಿಗೆ ಸೇರ್ಪಡೆಗೊಳ್ಳಬೇಕು.

— ಶ್ರೀ ವೇದವರ್ಧನ ತೀರ್ಥ ಶ್ರೀಪಾದರು, ಶಿರೂರು ಮಠಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net