ಕಾಂಕ್ರೀಟ್​ ಮಿಕ್ಸಿಂಗ್​ ಲಾರಿ ವಿರುದ್ಧ ಕ್ರಮ ಕೈಗೊಳ್ಳಿ

ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಹರಿರಾಂ ಶಂಕರ್​, ಅಬೀದ್​ ಗದ್ಯಾಳ, ಕಿರಣ್​ ಎಸ್​., ಅಬ್ದುಲ್ಲ ಮೊಹಮ್ಮದ್​ ಅಜ್ಮಿ, ಮಹಾಂತೇಶ್​ ಹಂಗರಗಿ ಇತರರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಹರಿರಾಂ ಶಂಕರ್​, ಅಬೀದ್​ ಗದ್ಯಾಳ, ಕಿರಣ್​ ಎಸ್​., ಅಬ್ದುಲ್ಲ ಮೊಹಮ್ಮದ್​ ಅಜ್ಮಿ, ಮಹಾಂತೇಶ್​ ಹಂಗರಗಿ ಇತರರಿದ್ದರು.
Published on

* ಆರ್​ಟಿಒಗೆ ಜಿಲ್ಲಾಧಿಕಾರಿ ಸ್ವರೂಪಾ ಆದೇಶ

* ಉಡುಪಿ ಡಿಸಿ ಕಚೇರಿಯಲ್ಲಿ ರಸ್ತೆ ಸುರಕ್ಷತಾ ಸಮಿತಿ ಸಭೆ

ಉಡುಪಿ: ಸಿದ್ಧ ಕಾಂಕ್ರೀಟ್​ ಮಿಕ್ಸಿಂಗ್​ ಸಾಗಾಟದ ಲಾರಿಗಳು ಅಗತ್ಯಕ್ಕಿಂತ ಹೆಚ್ಚಿನ ಮಿಕ್ಸಿಂಗ್​ ಸಾಗಸುತ್ತಿರುವುದರಿಂದ ಅವು ರಸ್ತೆಯ ಮೇಲೆ ಬೀಳುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ರಸ್ತೆಯಲ್ಲಿ ಬಿದ್ದಿರುವ ಜೆಲ್ಲಿ ಕಲ್ಲುಗಳಿಂದ ಅಪಘಾತಗಳೂ ಆಗುತ್ತಿದ್ದು, ಅಂತಹ ವಾಹನಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ದಂಡ ವಿಧಿಸಿ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಆದೇಶಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ (ಡಿ.18) ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಬಸ್​ಗಳಿಗೆ ಬಾಗಿಲು ಅಳವಡಿಸಿ

ಜಿಲ್ಲೆಯಲ್ಲಿ ಸಂಚರಿಸುವ ಕೆಲವು ಖಾಸಗಿ ಬಸ್​ಗಳು ನಿಲ್ದಾಣ ಹೊರತುಪಡಿಸಿ ಎಲ್ಲೆಂದರಲ್ಲಿ ನಿಲುಗಡೆ ಮಾಡುತ್ತಿದ್ದಾರೆ. ಅದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಆರ್​ಟಿಒಗೆ ಸೂಚಿಸಲಾಗಿತ್ತು. ಆದರೂ ಸುಧಾರಣೆ ಕಂಡುಬಂದಿಲ್ಲ. ನಿಯಮ ಉಲ್ಲಂಘಿಸುವ ಬಸ್​ಗಳ ವಿರುದ್ಧ ಪ್ರಕರಣ ದಾಖಲಿಸಿ. ಎಲ್ಲ ಬಸ್​ನವರೂ ಬಾಗಿಲು ಅಳವಡಿಸಬೇಕು. ಅದಕ್ಕಾಗಿ ದಿನಾಂಕ ನಿಗದಿ ಮಾಡಬೇಕು. ಆದರೂ ಅಳವಡಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರ್​ಟಿಒಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತ ಕಿರಣ್​ ಎಸ್​., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲ ಮೊಹಮ್ಮದ್​ ಅಜ್ಮಿ, ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸಿಲ್ದಾರರು ಉಪಸ್ಥಿತರಿದ್ದರು.

ಗೂಡಂಗಡಿಗಳ ತೆರವಿಗೆ ಡಿಸಿ ಸೂಚನೆ

ಜಿಲ್ಲೆಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುವ 18 ಬ್ಲಾಕ್​ ಸ್ಪಾಟ್​ ಗುರುತಿಸಿದ್ದು ಅಲ್ಲಿ ವೈಜ್ಞಾನಿಕವಾಗಿ ರಸ್ತೆ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿತ್ತು. ಅವುಗಳಲ್ಲಿ ಬಹುತೇಕ ಕಾಮಗಾರಿ ಮುಗಿಗಿದೆ. ಬಾಕಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಮುಗಿಸಬೇಕು. ಸುಗಮ ಸಂಚಾರಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ರಸ್ತೆ ಸುರಕ್ಷತಾ ನಿಯಮ ಚಾಚೂ ತಪ್ಪದೇ ಎಲ್ಲರೂ ಪಾಲಿಸಬೇಕು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್​ಗೆ ಜಾಗ ಗುರುತಿಸಬೇಕು. ಅದಕ್ಕಾಗಿ ರಸ್ತೆ ಬದಿಯಲ್ಲಿರುವ ಅನಧಿಕೃತ ಗೂಡಂಗಡಿಗಳನ್ನು ಪೊಲೀಸ್​ ಇಲಾಖೆಯ ಸಹಕಾರದಲ್ಲಿ ತೆರವುಗೊಳಿಸಬೇಕು. ಸಾಧ್ಯವಾದಲ್ಲಿ ಅವರಿಗೆ ವೆಂಡಿಂಗ್​ ಜೋನ್​ ಗುರುತಿಸಿ ಅಲ್ಲಿ ಗೂಡಂಗಡಿ ಇಡಲು ಅವಕಾಶ ಕಲ್ಪಿಸಿ ಎಂದು ಪೌರಾಯುಕ್ತರಿಗೆ ಡಿಸಿ ಸ್ವರೂಪಾ ಸೂಚಿಸಿದರು.
"

ನಗರದಲ್ಲಿರುವ ಯಾವುದೇ ಆಟೋ ತಂಗುದಾಣಗಳಲ್ಲಿ ಎಲ್ಲ ಆಟೋ ನಿಲ್ಲಿಸಲು ಮಾಲೀಕರಿಗೆ ಅನುಮತಿ ನೀಡಲು ಪೌರಾಯುಕ್ತರು ಕ್ರಮ ವಹಿಸಬೇಕು. ಮಣಿಪಾಲ ವ್ಯಾಪ್ತಿಯಲ್ಲಿ ಮೊಬೈಲ್​ ಆ್ಯಪ್​ ಆಧಾರಿತ ಟ್ಯಾಕ್ಸಿ ಸೇವೆಗೆ ಸಂಬಂಧಿಸಿ ಪರ-ವಿರೋಧದ ಕುರಿತು ಪ್ರತ್ಯೇಕವಾಗಿ ಸಾರ್ವಜನಿಕ ಸಭೆ ಕರೆದು ವರದಿ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net