ಸ್ವಾತಂತ್ರೋತ್ಸವಕ್ಕೆ ಕುಕ್ಕೆ ದೇವಳದಿಂದ ಸಿಹಿ ವಿತರಣೆ

 ಕುಕ್ಕೆ ದೇವಸ್ಥಾನದಲ್ಲಿ ಸ್ವಾತಂತ್ಯೋತ್ಸವಕ್ಕೆ ಲಡ್ಡು ತಯಾರಿಸಿರುವುದು.
ಕುಕ್ಕೆ ದೇವಸ್ಥಾನದಲ್ಲಿ ಸ್ವಾತಂತ್ಯೋತ್ಸವಕ್ಕೆ ಲಡ್ಡು ತಯಾರಿಸಿರುವುದು.
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ 80ನೇ ಸ್ವಾತಂತ್ರೋತ್ಸವ ಆಚರಣೆಗೆ ಜಿಲ್ಲೆಯ ಸುಮಾರು 161 ಸಂಸ್ಥೆಗಳಿಗೆ ವಿತರಿಸಲು ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ 60 ಸಾವಿರ ಲಡ್ಡು ತಯಾರಿಸಲಾಗಿದೆ. ಶನಿವಾರ ಕುಕ್ಕೆ ದೇವಳದಿಂದ ಆಯಾಯ ಸ್ಥಳಗಳಲ್ಲಿ ಲಡ್ಡು ವಿತರಣೆ ನಡೆಯಲಿದೆ. ಕಳೆದ ವರ್ಷ ಸ್ವಾತಂತ್ರೋತ್ಸವಕ್ಕೆ 38 ಸಾವಿರ ವಿತರಿಸಲಾಗಿತ್ತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಲಡ್ಡು ತಯಾರಿಸಲು ವಿಶೇಷ ವ್ಯವಸ್ಥೆ ಮಾಡಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ ಕುಮಾರ್, ಪ್ರವೀಣ ರೈ ಮರುವಂಜ, ಸೌಮ್ಯಾ ಭರತ್, ಸಿಬ್ಬಂದಿ ನಿಂಗಣ್ಣ, ರೋಹಿತ್, ಎಲ್ಲಪ್ಪ, ಸ್ಪರ್ಶ ಸೇರಿದಂತೆ ದೇವಳದ ಸಿಬ್ಬಂದಿ ಮೇಲ್ವಿಚಾರಣೆ ನೋಡಿಕೊಂಡಿದ್ದಾರೆ.
20ಕ್ಕೂ ಹೆಚ್ಚು ಬಾಣಸಿಗರು: ದೇವಳದ ಆಡಳಿತ ಈ ವರ್ಷ ಲಡ್ಡು ತಯಾರಿಕೆಗೆ ವಿಶೇಷ ವ್ಯವಸ್ಥೆ ಮಾಡಿತ್ತು. 20ಕ್ಕೂ ಅಧಿಕ ಬಾಣಸಿಗರು ಕಳೆದ ಎರಡು ದಿನಗಳಿಂದ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ 60 ಸಾವಿರ ಲಡ್ಡು ತಯಾರಿಯಲ್ಲಿ ತೊಡಸಿಗಿಕೊಂಡಿದ್ದರು. ಸುಳ್ಯ, ಪುತ್ತೂರು, ಕಡಬ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಮತ್ತು ಸಂಘಸಂಸ್ಥೆಗಳಿಗೆ ಈಗಾಗಲೇ ಲಡ್ಡು ವಿತರಿಸಲಾಗಿದೆ. ಶನಿವಾರ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸಿಹಿ ವಿತರಿಸಲಾಗುತ್ತದೆ.

ಯಾವ್ಯಾವ ಸಂಸ್ಥೆಗಳಿಗೆ ವಿತರಣೆ?

ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜು, ಕೆ.ಎಸ್.ಎಸ್. ಕಾಲೇಜು, ಕುಮಾರಸ್ವಾಮಿ ವಿದ್ಯಾಲಯ ಸೇರಿದಂತೆ ಸುಬ್ರಹ್ಮಣ್ಯದ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು, ವಸತಿ ಶಾಲೆ, ಕಡಬ ತಹಸೀಲ್ದಾರ್ ಕಚೇರಿ, ಕಡಬ ತಾಪಂ, ಸುಳ್ಯ ತಹಸೀಲ್ದಾರ್ ಕಚೇರಿ, ಪಟ್ಟಣ ಪಂಚಾಯಿತಿ, ಯೇನೆಕಲ್ಲು ಸಹಕಾರಿ ಸಂಘ, ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಪುತ್ತೂರು ಪೊಲೀಸ್ ಠಾಣೆ, ಬಿಳಿನೆಲೆ, ಕಲ್ಮಡ್ಕ, ಮುರುಳ್ಯ, ಕುಟ್ರುಪ್ಪಾಡಿ, ಬಲ್ಯ, ಬೆಳಂದೂರು, ಬಳ್ಪ ಪೆರುವಾಜೆ, ಅಜ್ಜಾವರ, ಸುಬ್ರಹ್ಮಣ್ಯ ಮೊದಲಾದ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ಲಾಡು ವಿತರಿಸಲಾಗಿದೆ. ಸುಳ್ಯ, ಕಡಬ, ಪುತ್ತೂರು ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳಿಗೆ, ಸರ್ಕಾರಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಕಾಲೇಜುಗಳಿಗೆ ಲಾಡು ವಿತರಣೆಯಾಗಿದೆ.

ಸ್ವಾತಂತ್ರೋತ್ಸವ ಆಚರಣೆಗಾಗಿ ಕುಕ್ಕೆ ದೇವಳದಿಂದ ಈ ಬಾರಿ 60 ಸಾವಿರ ಲಡ್ಡು ವಿತರಿಸಲಾಗಿದೆ. ಸುಳ್ಯ, ಪುತ್ತೂರು, ಕಡಬ ತಾಲೂಕಿನ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಶಾಲೆಗಳ ಕೋರಿಕೆ ಮೇರೆಗೆ ದೇವಳದಿಂದ ಲಡ್ಡು ನೀಡಲಾಗಿದೆ. ಸಂಸ್ಥೆಗಳು ನೀಡಿದ ಬೇಡಿಕೆಗೆ ಅನುಗುಣವಾಗಿ ಲಡ್ಡು ತಯಾರಿಸಲಾಗಿದೆ.

— ಹರೀಶ್.ಎಸ್.ಇಂಜಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ದೇವಳಕ್ಕೆ ಶನಿವಾರ ಆಗಮಿಸುವ ಭಕ್ತರಿಗೆ ಲಡ್ಡು ವಿತರಣೆ ಮಾಡಲಾಗುವುದು. ದೇವಳದಲ್ಲಿ ನೀಡುವ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ಪ್ರಸಾದದಲ್ಲಿ ಲಡ್ಡು ಪ್ರಸಾದ ನೀಡಲಾಗುವುದು. ವ್ಯವಸ್ಥಿತವಾಗಿ ವಿಶೇಷ ರೀತಿಯಲ್ಲಿ ಬಾಣಸಿಗರು ತಯಾರಿಸಿದ್ದಾರೆ.

— ಅರವಿಂದ ಅಯ್ಯಪ್ಪ ಸುತಗುಂಡಿ. ಕಾರ್ಯನಿರ್ವಹಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net