ಮಹಿಳೆಯರಿಂದ ಗ್ರಾಮೀಣ ಬದುಕು ಸುಸ್ಥಿರ

ಉಡುಪಿಯಲ್ಲಿ ಆಯೋಜಿಸಿದ್ದ ಚರಕದ ಕೈಮಗ್ಗ ವಸ್ತುಗಳ ಪ್ರದರ್ಶನ, ಮಾರಾಟ ಮೇಳವನ್ನು ಡಾ.ಕೃಷ್ಣ ಕೊತ್ತಾಯ ಉದ್ಘಾಟಿಸಿದರು. ಡಾ. ಎಚ್​.ಎಸ್​. ಶುಭಾ, ಮಹಾಲಕ್ಷ್ಮೀ, ಪ್ರೊ.ವನಿತಾ ಮಯ್ಯ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಚರಕದ ಕೈಮಗ್ಗ ವಸ್ತುಗಳ ಪ್ರದರ್ಶನ, ಮಾರಾಟ ಮೇಳವನ್ನು ಡಾ.ಕೃಷ್ಣ ಕೊತ್ತಾಯ ಉದ್ಘಾಟಿಸಿದರು. ಡಾ. ಎಚ್​.ಎಸ್​. ಶುಭಾ, ಮಹಾಲಕ್ಷ್ಮೀ, ಪ್ರೊ.ವನಿತಾ ಮಯ್ಯ ಇದ್ದರು.
Published on

* ಗಾಂಧಿ ಚಿಂತಕ ಡಾ.ಕೃಷ್ಣ ಕೊತ್ತಾಯ ಅಭಿಪ್ರಾಯ

* ಚರಕದ ಕೈಮಗ್ಗ ವಸ್ತುಗಳ ಪ್ರದರ್ಶನ ಉದ್ಘಾಟನೆ

ಉಡುಪಿ: ನಾವೆಲ್ಲರೂ ಈಗ ಯಂತ್ರಗಳ ಯುಗದಲ್ಲಿದ್ದೇವೆ. ಇತ್ತೀಚೆಗೆ ಕೃತಕ ಬುದ್ಧಿಮತ್ತೆ (ಎಐ)ಯು ನಮ್ಮೆಲ್ಲರ ಬುದ್ಧಿಮತ್ತೆಯನ್ನು ತಿನ್ನತೊಡಗಿದೆ. ಆದರೆ, ನಮ್ಮ ಗ್ರಾಮೀಣ ಮಹಿಳೆಯರಿಗೆ ಯಾವುದೇ ಕೃತಕ ಬುದ್ಧಿಮತ್ತೆಯ ಅಗತ್ಯತೆಯಿಲ್ಲ. ಗ್ರಾಮೀಣರ ಬದುಕು ಇಂದಿಗೂ ಸುಸ್ಥಿರವಾಗಿರಲು ಮಹಿಳೆಯರೇ ಕಾರಣ ಎಂದು ಗಾಂಧಿ ಚಿಂತಕ, ಪೂರ್ಣಪ್ರಜ್ಞ ಸೆಂಟರ್​ ಫಾರ್​ ರಿಸರ್ಚ್​ ಆ್ಯಂಡ್​ ಡೆವಲಪ್​ಮೆಂಟ್​ನ ನಿರ್ದೇಶಕ ಡಾ.ಕೃಷ್ಣ ಕೊತ್ತಾಯ ಅಭಿಪ್ರಾಯಪಟ್ಟರು.
ಉಡುಪಿಯ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಸಾಗರದ ಹೆಗ್ಗೋಡು ಭೀಮನಕೋಣೆಯ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಶುಕ್ರವಾರ (ಡಿ.19) ಆಯೋಜಿಸಿದ್ದ ನೈಸರ್ಗಿಕ ಬಣ್ಣದ, ಅಪ್ಪಟ ಹತ್ತಿ ಕೈಮಗ್ಗದ ಹಾಗೂ ಕೈ ಉತ್ಪನ್ನಗಳ ಮೂರು ದಿನದ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ದೀರ್ಘ ಬಾಳಿಕೆಯ ಉತ್ಪನ್ನ

ಮಾಹೆಯ ಮಣಿಪಾಲ್​ ಇನ್​ಸ್ಟಿಟ್ಯೂಟ್​ ಆಫ್​ ಕಮ್ಯುನಿಕೇಷನ್​ನ ನಿರ್ದೇಶಕಿ ಡಾ. ಎಚ್​.ಎಸ್​. ಶುಭಾ ಮಾತನಾಡಿ, ಇಂದಿನ ಫಾಸ್ಟ್​ ಫ್ಯಾಶನ್​ ಯುಗದಲ್ಲಿ ನಾವು ಬಳಸುವ ಬಟ್ಟೆಗಳು ಅಲ್ಪ ಸಮಯ ಬಾಳಿಕೆ ಬರುತ್ತವೆ. ಆದರೆ ಚರಕದಂತಹ ಬಟ್ಟೆಗಳು ಸ್ಲೋ ಫ್ಯಾಶನ್​ ಆದರೂ ದೀರ್ಘ ಕಾಲ ಬಾಳಿಕೆ ಇರುತ್ತವೆ. ಚರಕ ಸಂಸ್ಥೆಯ ಒಂದೊಂದು ಉತ್ಪನ್ನಗಳೂ ಮನೆ, ಭೂಮಿ, ಜೀವನ ಶೈಲಿ, ಸುಖ, ದು:ಖಗಳ ಒಂದೊಂದು ಕಥೆಯನ್ನು ಹೇಳುತ್ತವೆ ಎಂದರು.
ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ವನಿತಾ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಚರಕ ಸಂಸ್ಥೆಯ ಪದ್ಮಶ್ರೀ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಸರ್ಕಾರ, ಸಮಾಜದ ಸಹಕಾರ ಅಗತ್ಯ

ಚರಕ ಸಂಘದ ಅಧ್ಯಕ್ಷೆ ಮಹಾಲಕ್ಷ್ಮೀ ಮಾತನಾಡಿ, ಇಂದಿನವರಿಗೆ ಚರಕದ ಕೈಮಗ್ಗದ ಕೆಲಸ ಮಾಡಲು ಬರುವುದಿಲ್ಲ. ಈ ಕೆಲಸ ಬಹಳ ಸೂಕ್ಷ್ಮ. ಹೀಗಾಗಿ ನುರಿತ ಕೆಲಸಗಾರರ ಕೊರತೆ ಇದೆ. ನಮ್ಮಲ್ಲಿ ನೈಸರ್ಗಿಕ ಬಣ್ಣಗಳನ್ನೇ ಬಳಸಿ ಉತ್ಪನ್ನ ತಯಾರಿಸುತ್ತೇವೆ. ಯಾವ ಕೆಲಸಕ್ಕೂ ಯಂತ್ರದ ಬಳಕೆ ಮಾಡುತ್ತಿಲ್ಲ. ಇದು ನಮಗೆ ದೊಡ್ಡ ಸವಾಲಾಗಿದೆ. ಜಾಗತಿಕ ಬದಲಾವಣೆಯ ನಡುವೆಯೂ ಹಳೆಯ ಪದ್ಧತಿಯ ಚರಕದ ಕೈಮಗ್ಗಗಳಿಗೆ ಸರ್ಕಾರ ಮತ್ತು ಸಮಾಜದ ಸಹಕಾರ ಅತ್ಯಗತ್ಯವಾಗಿದೆ. ಇಂತಹ ಉತ್ಪನ್ನ ಖರೀದಿಸಿದರೆ ಕೈಮಗ್ಗ ಉಳಿಯಲಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net